ಬೆಂಗಳೂರು
ಅಲ್ಪ ಸಂಖ್ಯಾತ ಸಮುದಾಯವನ್ನು ಕಾಂಗ್ರೆಸ್ ನಿರ್ಲಕ್ಷಿಸಿದ್ದು, ಇದರ ಪರಿಣಾಮ ಅಲ್ಪ ಸಂಖ್ಯಾತರು ಬಿಜೆಪಿಯತ್ತ ಒಲವು ಬೆಳೆಸಿಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ನ ಮುಸ್ಲೀಂ ಸಮುದಾಯದ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಇಂದಿಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಲಿಲ್ಲ. ಹೀಗಾಗಿ ಮುಸ್ಲೀಂ ಸಮುದಾಯ ಕೂಡ ಬಿಜೆಪಿಗೆ ಮತ ಹಾಕಿಲ್ಲ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ನೋಡುತ್ತಿರುವ ಕೆ.ಸಿ.ವೇಣುಗೋಪಾಲ್ ನಮ್ಮ ಪರವಾಗಿ ಮಾತನಾಡಬಹುದಿತ್ತು. ಆದರೆ
ಯಾವುದೇ ನಾಯಕರೂ ನಮ್ಮತ್ತ ಗಮನಹರಿಸಲೇ ಇಲ್ಲ.
ಹೀಗಾಗಿ ವೈಯಕ್ತಿಕವಾಗಿ ತಾವು ಉಪಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಹೀಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಲಿಲ್ಲ ಎಂದು ಸಮರ್ಥಿಸಿಕೊಂಡರು.
ಈ ಹಿಂದೆ ನಡೆದ ಚುನಾವಣೆಗಳಲ್ಲಿ ದೇವರು ಕೊಟ್ಟ ಶಕ್ತಿಯನ್ನೆಲ್ಲಾ ಬಳಸಿ ಕೆಲಸ ಮಾಡಿದ್ದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಲ್ಲುವುದಿಲ್ಲ ಎಂದು ಮೊದಲೇ ಭವಿಷ್ಯ ನುಡಿಸಿದ್ದೆ. ಅದರಂತೆಯೇ ಫಲಿತಾಂಶ ಬಂದಿದೆ. ವೀರಶೈವ ಲಿಂಗಾಯಿತ ಸಮುದಾಯ ಯಡಿಯೂರಪ್ಪ ಅವರ ಕೈ ಹಿಡಿದಿದೆ, ಹೀಗಾಗಿ ಅವರು ಗೆದ್ದಿದ್ದಾರೆ ಎಂದು ವಿಶ್ಲೇಷಿಸಿದರು.
ಈ ಮೊದಲು ಜೆಡಿಎಸ್ ನವರಿಗೆ ಒಕ್ಕಲಿಗರ ಶಕ್ತಿ ಇತ್ತು, ಆದರೆ ಈ ಬಾರಿ ಕೈ ಹಿಡಿಲಿಲ್ಲ. ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳೆರಡು ಬಿಜೆಪಿ ಪರ ನಿಂತಿವೆ. ಅಷ್ಟೆ ಅಲ್ಲ ಶೇ 16ರಷ್ಟು ಇರುವ ಅಲ್ಪಸಂಖ್ಯಾತ ಸಮಾಜದ ಮತಗಳು ಸಹ ಈಗ ಕಾಂಗ್ರೆಸ್‍ನಿಂದ ಬಿಜೆಪಿ ಕಡೆ ತಿರುಗಿವೆ. ಹಳೆ ಮೈಸೂರು ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ಯಡಿಯೂರಪ್ಪ ಗೆ ಅಲ್ಪ ಸಂಖ್ಯಾತ ಸಮಾಜದ ಮತಗಳು ಬಿದ್ದಿವೆ ಎಂದರು.
ವಾಸ್ತವಾಂಶ ಹೇಳಲು, ಕೇಳಲು ಕಾಂಗ್ರೆಸ್‍ನಲ್ಲಿ ಯಾರೂ ತಯಾರಿಲ್ಲ. ನಾವು ದುಡಿದು ಪಕ್ಷಕ್ಕೆ ಮತ ಹಾಕಿಸಬೇಕು. ಆದರೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಾತ್ರ ಬೇರೆವರು. ಈ ಧೋರಣೆ ಸರಿಯಲ್ಲ ಎಂದರು.
ಮೇಲ್ಮನೆಯಲ್ಲಿ ಅತಿ ಹಿರಿಯ ಸದಸ್ಯನಾದ ನನಗೆ ಸೂಕ್ತ ಪ್ರಾತಿನಿಧ್ಯೆ ಸಿಕ್ಕಿಲ್ಲ. ಪರಿಷತ್ತಿನ ವಿರೋಧ ಪಕ್ಷದ ನಾಯಕ ಯಾರಿಗೆ ಸಿಗಬೇಕಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಪಕ್ಷಕ್ಕೆ ಪಾಲು ನೀಡಿದವರಿಗೆ ಪಾಲುದಾರಿಕೆಯೂ ಇಲ್ಲ. ಮಾನ್ಯತೆಯೂ ಇಲ್ಲ. ಟೀಕೆ ಮಾಡಲು, ಭಾಷಣ ಮಾಡಲು, ಬೇರೆಯವರ ವಿರೋಧ ಕಟ್ಟಿಕೊಳ್ಳಲು ಮಾತ್ರ ನಾವು ಬೇಕು. ಅಧಿಕಾರ ಅನುಭವಿಸಲು, ಖುರ್ಚಿ ಮೇಲೆ ಕುಳಿತುಕೊಳ್ಳಲು ಬೇರೆಯವರು ಬೇಕೆ ಎಂದು ಪರೋಕ್ಷವಾಗಿ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾಗೂ ಅವರನ್ನು ಬೆಂಬಲಿಸಿದ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಸತ್ತ ಮೇಲೆ ಶವ ಸಂಸ್ಕಾರ ಮಾಡಬೇಕೇ ಹೊರತು ಬೀದಿಹೆಣವಾಗಲು ಬಿಡಬಾರದು. ಬೀದಿಯಲ್ಲಿನ ಸಾವಿಗಿಂತ ಮನೆಯಲ್ಲಿ ಸಾಯುವುದೇ ಉತ್ತಮ ಎಂದು ಸ್ವಪಕ್ಷೀಯರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಮಗಿರುವ ಕೋಪ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ಧದ ವೈಯಕ್ತಿಕ ಕೋಪವಲ್ಲ. ಇದು ಕಾಂಗ್ರೆಸ್ ಪಕ್ಷದ ವಿರುದ್ಧದ ಸಿಟ್ಟು. ಪಕ್ಷ ಕಟ್ಟಲು ಮನಸು ಮುಖ್ಯ. ಹಾಗೆಂದು ನಾವು ಪಕ್ಷ ಬಿಟ್ಟು ಹೋಗಿಲ್ಲ. ಆದರೆ ಎಷ್ಟು ದಿನ ಎಂದು ದುಡಿಯುವುದು. ಅದಕ್ಕೂ ಒಂದು ಮಿತಿ ಇದೆ ಎಂದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ನಾನು ಮಾತಾಡುವುದಿಲ್ಲ. ಸದ್ಯ ಪಕ್ಷದ ಸ್ಥತಿ ಸರಿ ಇಲ್ಲ. ಎಲ್ಲವನ್ನೂ ಹೈಕಮಾಂಡ್ ಸರಿ ಮಾಡಬೇಕಿದ್ದು, ರಾಜ್ಯದ ನಾಯಕತ್ವದಲ್ಲಿ ಒಗ್ಗಟ್ಟಿಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/CM-Ibrahim.gif)