ಖರ್ಗೆ ರಾಜಕೀಯ ಭವಿಷ್ಯ ನಾಶಕ್ಕೆ ಕಾಂಗ್ರೆಸ್ ಷಡ್ಯಂತ್ರ : ಈಶ್ವರಪ್ಪ

ಬೆಂಗಳೂರು

    ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜು ಖರ್ಗೆ ಅವರನ್ನು ರಾಜ್ಯಸಭಾ ಚುನಾವಣೆಗೆ ನಿಲ್ಲಿಸುವ ಆಸೆ ತೋರಿಸಿ ಅವರ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸುವ ಷಡ್ಯಂತ್ರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೂಪಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಆಪಾದಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ರಾಜ್ಯ ಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಬಳಿ ಅಗತ್ಯ ಸಂಖ್ಯಾಬಲ ಇಲ್ಲ. ಆದರೂ ಖರ್ಗೆ ಅವರನ್ನು ಪುಸಲಾಯಿಸಿ ಚುನಾವಣೆಗೆ ನಿಲ್ಲಿಸಿ ಅವರ ರಾಜಕೀಯ ಭವಿಷ್ಯ ಮುಸುಕಾಗುವಂತೆ ಮಾಡಲು ಮುಂದಾಗಿದ್ದಾರೆ. ಈ ಹುನ್ನಾರವನ್ನು ಖರ್ಗೆ ಅವರು ಅರ್ಥಮಾಡಿಕೊಳ್ಳಬೇಕು ಎಂದರು.

    ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ತಕ್ಕಂತೆ ಮಾತನಾಡುತ್ತಿಲ್ಲ. ಕೆಟ್ಟ
ಭಾಷೆ ಬಳಸುತ್ತಾರೆ. ಇದು ಅವರ ಘನತೆಗೆ ಶೋಭೆ ತರುವುದಿಲ್ಲ. ಪಕ್ಷದಲ್ಲಿನ ಗುಂಪುಗಾರಿಕೆ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಎಲ್ಲೆಡೆ ಮನಸ್ಸಿಗೆ ತೋಚಿಸಿದಂತೆ ಮಾತನಾಡುತ್ತಾರೆ. ಅವರು ಕಾಲಿಟ್ಟ ಕಡೆಗಳಲ್ಲಿ ವಿನಾಶವಾಗಲಿದೆ. ಜಾತಿ, ಧರ್ಮಗಳ ನಡುವೆ ಒಡಕು ಮೂಡಿಸಲು ಅವರು ಪ್ರಯತ್ನಿಸಿದ್ದಾರೆ ಎಂದರು.

    ಒಂದು ಕಾಲದಲ್ಲಿ ತಮ್ಮ ಜತೆ ಇದ್ದ ಎಚ್.ವಿಶ್ವನಾಥ್, ವಿಜಯಶಂಕರ್, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್ ಅವರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ದಲಿತ, ಕುರುಬ ಸೇರಿದಂತೆ ಯಾವುದೇ ಸಮುದಾಯದ ನಾಯಕರು ಅವರೊಂದಿಗಿಲ್ಲ. ಅಲ್ಪಸಂಖ್ಯಾತರು ಬೆಂಬಲ ನೀಡುತ್ತಿಲ್ಲ. ಇಬ್ರಾಹಿಂ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್ ಪಕ್ಷದಲ್ಲಿ ಇರಬೇಕೋ ಬೇಡವೋ ಎಂದು ಯೋಚಿಸುತ್ತಿದ್ದಾರೆ. ಕಾಂಗ್ರೆಸ್‍ನ ಯಾವೊಬ್ಬ ನಾಯಕರೂ ಅವರನ್ನು ಇಷ್ಟಪಡುತ್ತಿಲ್ಲ ಎಂದು ಹೇಳಿದರು.

     ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಾರೆ. ರಾಜೀನಾಮೆ ನೀಡಿದ ಶಾಸಕರ ಬಗ್ಗೆ ಕೀಳಾಗಿ ಟೀಕಿಸುವುದು ಸಲ್ಲದು. ಹೀಗೆ ರಮೇಶ್ ಕುಮಾರ್ ನಂಬರ್ ಒನ್ ಪಕ್ಷ ದ್ರೋಹಿಯಾಗಿದ್ದಾರೆ. ತಮ್ಮ ಪಕ್ಷದವರೇ ಆದ ಕೆ.ಎಚ್. ಮುನಿಯಪ್ಪ ಲೋಕಸಭಾ ಚುನಾವಣೆಯಲ್ಲಿ ಸೋಲಲು ರಮೇಶ್ ಕುಮಾರ್ ಕಾರಣ. ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಇಬ್ಬರೂ ಪಕ್ಷ ದ್ರೋಹಿಗಳು ಎಂದು ಈಶ್ವರಪ್ಪ ಟೀಕಿಸಿದರು.

      ಉಪಚುನಾವಣೆಯಲ್ಲಿ ಮತದಾರರು ಸುಭದ್ರ ಮತ್ತು ಅಭಿವೃದ್ಧಿಪರ ಪರ ಸರ್ಕಾರಕ್ಕೆ ಮತ ನೀಡುತ್ತಾರೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಮೈತ್ರಿ ಸರ್ಕಾರ ಬೀಳಲು ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೇ ಕಾರಣ. ಆದರೂ ಇಬ್ಬರೂ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಎನ್ನುವುದಕ್ಕಿಂತ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ನಂತರ ಇಬ್ಬರೂ ನಿರುದ್ಯೋಗಿಗಳಾಗುತ್ತಾರೆ ಎಂದರು.

     ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆ. ಜಾರ್ಜ್, ಕೆ.ಎಚ್.ಮುನಿಯಪ್ಪ, ಇಬ್ರಾಹಿಂ, ಪರಮೇಶ್ವರ್ ಸೇರಿ ಯಾರೊಬ್ಬರೂ ಅವರೊಂದಿಗಿಲ್ಲ. ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಬಹಿರಂಗವಾಗಿದೆ. ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪಕ್ಷದ ಎಲ್ಲ ನಾಯಕರು ಏಕಶಿಲೆಯಂತೆ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಮತದಾರರಿಂದ ನಿರೀಕ್ಷೆಗೂ ಮೀರಿ ಬೆಂಬಲ ದೊರೆಯುತ್ತಿದೆ. ಇದು ಕಾಂಗ್ರೆಸ್-ಜೆಡಿಎಸ್‍ಗೆ ನುಂಗಲಾರದ ತುತ್ತಾಗಿದೆ ಎಂದರು.

    ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಅಂತರದಿಂದ ಗೆಲ್ಲಲು ಎಲ್ಲ ಕ್ಷೇತ್ರಗಳಲ್ಲಿ ನಾಳೆ ಭಾನುವಾರದಂದು ಮಹಾಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದಲ್ಲಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

     ಅಕ್ರಮ ಹಣಕಾಸು ವ್ಯವಹಾರದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇದೀಗ ಸೇಬಿನ ಹಾರಗಳ ಸರದಾರರಾಗಿದ್ದಾರೆ. ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸೇಬು ತಿನ್ನಿಸುತ್ತಿದ್ದಾರೆ. ಆದರೆ ಮತದಾರರು ಭ್ರಷ್ಟ ಕಾಂಗ್ರೆಸ್ ಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap