ಕಾಂಗ್ರೆಸ್ ಅಭ್ಯರ್ಥಿಯೇ ನನ್ನ ಪ್ರಬಲ ಎದುರಾಳಿ

ದಾವಣಗೆರೆ:

       ಕಾಂಗ್ರೆಸ್ ಅಭ್ಯರ್ಥಿಯೇ ನನ್ನ ಪ್ರಬಲ ಎದುರಾಳಿ ಆಗಿದ್ದಾರೆಂದು ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿಯವರಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಏ.4ರ ವರೆಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶವಿದ್ದು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಿಶ್ಚಿತವಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೇ ನನಗೆ ಎದುರಾಳಿಯಾಗಿದೆ ಎಂದು ಪುನರ್ ಉಚ್ಚರಿಸಿದರು.

        ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಯೇ ತೀರುತ್ತದೆ. ಹೀಗಾಗಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದ ಅವರು, ತಮ್ಮ ಮನೆದೇವರು ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ಇಚ್ಛೆಯಂತೆ ಹಾಗೂ ಹಿರಿಯರ ಮಾರ್ಗದರ್ಶನದಂತೆ ತಾವು ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.

       ಚುನಾವಣೆಗೆ ಇನ್ನೂ 22 ದಿನಗಳಷ್ಟೇ ಬಾಕಿ ಇದೆ. ಈಗಾಗಳೇ ಕ್ಷೇತ್ರಾದ್ಯಂತ ಒಂದು ಸುತ್ತಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಲೆ, ದೇಶದ ಸುರಕ್ಷತೆಯ ಅಲೆವಿದ್ದು, ಕ್ಷೇತ್ರದ ಎಲ್ಲೆಡೆಯೂ ಬಿಜೆಪಿಗೆ ಉತ್ತಮ ವಾತಾವರಣವಿದೆ. ಮತದಾರರೂ ಸಹ ಬಿಜೆಪಿ, ಕಮಲದ ಬಟನ್ ಒತ್ತುತ್ತೇವೆನ್ನುತ್ತಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.

        ಬಿಜೆಪಿ, ಮೋದಿ ಹಾಗೂ ದೇಶದ ರಕ್ಷಣೆಯ ಅಲೆಯ ಜೊತೆಗೆ ತಮ್ಮ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ತಮ್ಮ ಅವಧಿಯಲ್ಲಿ ಕೈಗೊಂಡಿರುವ ಜನಪರ ಕೆಲಸ, ಅಭಿವೃದ್ಧಿ ಕಾರ್ಯಗಳೆಲ್ಲವೂ ಚುನಾವಣೆಯಲ್ಲಿ ತಮಗೆ ನೆರವಾಗುತ್ತವೆ ಎಂದರು.

       ನಮ್ಮೆಲ್ಲಾ ಬಿಜೆಪಿ ಕಾರ್ಯಕರ್ತರು, ಮುಖಂಡರು ಹುಮ್ಮಸ್ಸಿನಿಂದ ಚುನಾವಣೆಯ ಕೆಲಸ-ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಇಬ್ಬರು ಮಾಜಿ ಶಾಸಕರು, ಸೋತ ಅಭ್ಯರ್ಥಿಗಳೂ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿಯ ಒಬ್ಬರೇ ಒಬ್ಬ ಶಾಸಕರೂ ಇಲ್ಲದಿದ್ದಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರು 17,609 ಮತಗಳ ಮುನ್ನಡೆ ನೀಡುವ ಮೂಲಕ ಗೆಲ್ಲಿಸಿ, ಆಶೀರ್ವದಿಸಿದ್ದರು. ಈಗ ಬಿಜೆಪಿಯ 6 ಶಾಸಕರು, ಜಿಪಂ ಹಾಗೂ ತಾಪಂ ಸದಸ್ಯರೂ, ಸಾವಿರಾರು ಕಾರ್ಯಕರ್ತರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದು ಗೆಲುವಿನ ಅಂತರ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ಕಾಂಗ್ರೆಸ್ಸಿನ ವಿರುದ್ಧ ಅತೀ ಹೆಚ್ಚು ಮತಗಳ ಅಂತರದಲ್ಲಿ ತಮದಾರರು ತಮ್ಮನ್ನು ಪುನರಾಯ್ಕೆ ಮಾಡುತ್ತಾರೆಂಬ ವಿಶ್ವಾಸ ನನಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸಿರುವ 1.5 ಲಕ್ಷ ಯುವ ಮತದಾರರು ಬಿಜೆಪಿಯ ಬಗ್ಗೆ ಒಲವು ಹೊಂದುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳಾಗಿರುತ್ತಾರೆಂಬ ವಿಶ್ವಾಸ ನನ್ನದಾಗಿದೆ ಎಂದು ಹೇಳಿದರು.

       ಈ ಸಂದರ್ಭದಲ್ಲಿ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಶಾಸಕರಾದ  .ಎನ್.ಲಿಂಗಣ್ಣ, ಮಾಜಿ ಶಾಸಕರಾದ ಬಿ.ಪಿ.ಹರೀಶ, ಎಂ.ಬಸವರಾಜ ನಾಯ್ಕ, ಮುಖಂಡರಾದ ಅಣಬೇರು ಜೀವನಮೂರ್ತಿ, ಕೆ.ಹೇಮಂತಕುಮಾರ, ಎಚ್.ಎನ್.ಶಿವಕುಮಾರ, ಎನ್.ರಾಜಶೇಖರ, ಪಿ.ಸಿ.ಶ್ರೀನಿವಾಸ, ಶಿವನಗೌಡ ಪಾಟೀಲ್, ಪ್ರಭು ಕಲ್ಬುರ್ಗಿ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap