ಡಿಕೆಶಿ ನೇಮಕದ ಬೆನ್ನಲ್ಲೆ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆ…!

ಬೆಂಗಳೂರು

     ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ನೇಮಕವಾಗುತ್ತಿದ್ದಂತೆ ಕಾಂಗ್ರೆಸ್ ಪಾಳೆಯದಲ್ಲಿ ಪರ-ವಿರೋಧದ ಚರ್ಚೆಗಳು ಜೋರಾಗಿದ್ದು ಈ ಹಿನ್ನೆಲೆಯಲ್ಲಿ ಇದೀಗ ಸಂಧಾನಕ್ಕಾಗಿ ಹಿರಿಯ ನಾಯಕರನ್ನು ಕರ್ನಾಟಕಕ್ಕೆ ಕಳಿಸಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ.

    ಗುಲಾಂನಭಿ ಆಜಾದ್,ಏ.ಕೆ.ಆಂಟನಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರನ್ನು ಕರ್ನಾಟಕಕ್ಕೆ ಕಳಿಸಿ ಡಿಕೆಶಿ ಹಾಗೂ ಡಿಕೆಶಿ ನೇಮಕಾತಿಯನ್ನು ವಿರೋಧಿಸುತ್ತಿರುವವರ ನಡುವೆ ಸಂಧಾನ ನಡೆಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.

   ಮುಂದಿನ ಕೆಲವೇ ದಿನಗಳಲ್ಲಿ ಈ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದು ಪಕ್ಷದಲ್ಲಿರುವ ಎಲ್ಲ ಬಣಗಳ ಜತೆ ಮಾತುಕತೆ ನಡೆಸಿ,ಒಗ್ಗೂಡಿ ಮುಂದೆ ಹೋಗುವಂತೆ ಸ್ಪಷ್ಟ ಸಂದೇಶ ನೀಡಲಿದ್ದಾರೆ.ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ನೇಮಕವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‍ನಲ್ಲಿರುವ ಎರಡು ಗುಂಪುಗಳು ಆಕ್ಷೇಪ ವ್ಯಕ್ತಪಡಿಸತೊಡಗಿದ್ದು ಡಿಕೆಶಿ ನೇಮಕಾತಿಯಿಂದ ಪಕ್ಷದ ಶಕ್ತಿ ಹೆಚ್ಚಾಗುವುದಿಲ್ಲ ಎಂದು ಹೇಳತೊಡಗಿವೆ.

    ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಬೆಂಬಲಿಗರು ಮುಂದಿನ ಚುನಾವಣೆಯಲ್ಲಿ ನಮಗೆ ಅನುಕೂಲವಾಗ ಬೇಕೆಂದಿದ್ದರೆ ಲಿಂಗಾಯತ ನಾಯಕರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕಿತ್ತು.ಆಗ ಲಿಂಗಾಯತ ಪ್ಲಸ್ ಅಹಿಂದ ಮತಗಳು ಕ್ರೋಢೀಕರಣಗೊಳ್ಳಲು ಅನುಕೂಲವಾಗುತ್ತಿತ್ತು ಎನ್ನತೊಡಗಿದ್ದಾರೆ.

    ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಪಟ್ಟದಿಂದ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ಬಿಜೆಪಿ ಹೈಕಮಾಂಡ್ ನಡೆಸುತ್ತಿರುವ ಪ್ರಯತ್ನ ರಹಸ್ಯವಾಗುಳಿದಿಲ್ಲ.ಹೀಗಾದಾಗ ಪ್ರಬಲ ಲಿಂಗಾಯತ ಸಮುದಾಯವನ್ನು ಸೆಳೆಯಲು ನಾವು ಮುಂಚಿತವಾಗಿಯೇ ಸಜ್ಜಾಗಿರಬೇಕಿತ್ತು.ಆದರೆ ಅದನ್ನು ನಿರ್ಲಕ್ಷಿಸಲಾಗಿದೆ.

    ಇದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಅತ್ತ ಲಿಂಗಾಯತರ ಮತಗಳೂ ಇಲ್ಲದೆ,ಇತ್ತ ಒಕ್ಕಲಿಗ ಮತಬ್ಯಾಂಕ್‍ನ ಗಣನೀಯ ಮತಗಳೂ ದೊರೆಯದೆ ಕ್ಷೀಣಿಸುವ ಸ್ಥಿತಿ ಬರುತ್ತದೆ ಎಂದು ಈ ಬಣ ನೇರವಾಗಿ ಆಕ್ಷೇಪ ವ್ಯಕ್ತಪಡಿಸ ತೊಡಗಿದೆ.ಈ ಮಧ್ಯೆ ಸಿದ್ಧರಾಮಯ್ಯ ಅವರನ್ನು ವಿರೋಧಿಸುವ ಕಾಲಕ್ಕೆ ಡಿಕೆಶಿಯನ್ನೂ ವಿರೋಧಿಸುತ್ತಿದ್ದ ಬಣ ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕಿತ್ತು.ಆದರೆ ಆ ಕೆಲಸ ಆಗದೆ ಇರುವುದರಿಂದ ಡಿಕೆಶಿ-ಸಿದ್ಧರಾಮಯ್ಯ ನಡುವಣ ಬಿಕ್ಕಟ್ಟು ಪಕ್ಷಕ್ಕೆ ಹೊಸ ತಲೆನೋವಾಗಲಿದೆ ಎಂದು ಹೇಳುತ್ತಿದೆ.

    ಆದರೆ ಈ ಎರಡೂ ಬಣಗಳ ಮಾತನ್ನು ಲೆಕ್ಕಿಸದ ಡಿಕೆಶಿ ಬಣ:ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಆಗುವ ಬದಲಾವಣೆಗಳು ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವಂತೆ ಮಾಡುತ್ತವೆ ಎನ್ನುತ್ತಿದೆ.ಯಡಿಯೂರಪ್ಪ ಅವರ ಬದಲಾವಣೆಯಾದಾಗ ಲಿಂಗಾಯತ ಶಕ್ತಿಯನ್ನು ಸ್ವೀಕರಿಸಲು ಅದೇ ಸಮುದಾಯದ ನಾಯಕರು ಕೆಪಿಸಿಸಿ ಅಧ್ಯಕ್ಷರಾಗಬೇಕಿತ್ತು ಎಂಬ ವಾದದಲ್ಲಿ ಹುರುಳೇನೂ ಇಲ್ಲ.ಯಾಕೆಂದರೆ ಇಂತಹ ಬೆಳವಣಿಗೆ ನಡೆದರೆ ಬಿಜೆಪಿ ವಿರುದ್ಧ ಕುದಿಯುವ ಲಿಂಗಾಯತ ವರ್ಗ ಸಹಜವಾಗಿಯೇ ಪರ್ಯಾಯ ಶಕ್ತಿಯ ಕಡೆ ನೋಡುತ್ತದೆ.

   ಆಗ ಅದರ ಕಣ್ಣಿಗೆ ಕಾಣುವುದು ಕಾಂಗ್ರೆಸ್ ಪಕ್ಷವೇ ಹೊರತು ಜಾತ್ಯಾತೀತ ದಳವಲ್ಲ.1989 ರಲ್ಲಿ ಲಿಂಗಾಯತ ಸಮುದಾಯದ ವೀರೇಂದ್ರಪಾಟೀಲ್ ಅಧ್ಯಕ್ಷರಾಗಿದ್ದರೂ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು.ಇದಕ್ಕೆ ಮುಖ್ಯ ಕಾರಣ ತನ್ನ ಮುಂಚೂಣಿಯಲ್ಲಿದ್ದ ದೇವೇಗೌಡರು ಕಟ್ಟಿದ ಪಕ್ಷ ತಮ್ಮ ಹಿತ ಕಾಪಾಡುವುದಿಲ್ಲ ಎಂಬುದು ಒಕ್ಕಲಿಗ ಸಮುದಾಯಕ್ಕೆ ಗೊತ್ತಿತ್ತು.ಮುಂದಿನ ಚುನಾವಣೆಯ ಸಂದರ್ಭದಲ್ಲೂ ಅಷ್ಟೇ.ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜಾತ್ಯಾತೀತ ಜನತಾದಳ ಸ್ವಯಂ ಆಗಿ ಬಿಜೆಪಿ ವಿರುದ್ಧ ನಿರ್ಣಾಯಕ ಹೋರಾಟ ಮಾಡುವ ಶಕ್ತಿ ಹೊಂದಿಲ್ಲ.

  ಈ ಅಂಶವನ್ನು ಗಮನದಲ್ಲಿಟ್ಟುಕೊಂಡರೆ 1989 ರ ಇತಿಹಾಸ ಮರುಕಳಿಸುತ್ತದೆ.ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದರೂ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ.ಅದೇ ರೀತಿ ಒಕ್ಕಲಿಗ ಸಮುದಾಯ ದೊಡ್ಡ ಮಟ್ಟದಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವುದು ನಿಜವಾದರೂ,ಮುಂದಿನ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನೇ ತಮ್ಮ ನಾಯಕ ಎಂದು ಬಾವಿಸಿ ಕೈ ಪಾಳೆಯಕ್ಕೆ ಬೆಂಬಲ ನೀಡುತ್ತದೆ.ಹೀಗಾಗಿ ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾದರೆ ಲಾಭವಾಗುವುದಿಲ್ಲ ಎಂಬುದು ಕಪೋಲ ಕಲ್ಪಿತ.ಈ ಮಧ್ಯೆ ಮುಂದಿನ ಚುನಾವಣೆಯ ವೇಳೆಗೆ ಬಿಜೆಪಿಯನ್ನು ಎದುರಿಸಲು ಬಿಜೆಪಿಯೇತರ ಶಕ್ತಿಗಳು ಪರಸ್ಪರ ಒಗ್ಗೂಡಿಸುವುದು ಅನಿವಾರ್ಯ ಎಂದಾದರೆ ಅದಕ್ಕೂ ನಾವು ಸಿದ್ಧರಾಗಬೇಕು.

    ಈ ಕಾರ್ಯಕ್ಕೆ ಡಿ.ಕೆ.ಶಿವಕುಮಾರ್ ಸೂಕ್ತರೇ ಹೊರತು ಬೇರೆ ನಾಯಕರಲ್ಲ.ಆದ್ದರಿಂದ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತವಾದ್ದರಿಂದ ಎಲ್ಲರೂ ಪರಸ್ಪರ ಕೈಗೂಡಿಸಿ ಮುನ್ನಡೆಯುವುದು ಸೂಕ್ತ ಎಂಬುದು ಡಿಕೆಶಿ ಬಣದ ವಾದ.ಆದ್ದರಿಂದ ಈ ಬೆಳವಣಿಗೆಯ ನಡುವೆ ಎಲ್ಲ ಬಣಗಳನ್ನು ಒಂದುಗೂಡಿಸಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ ಮುಂದಿನ ಕೆಲ ದಿನಗಳಲ್ಲೇ ಸಂಧಾನದ ಸಲುವಾಗಿ ನಾಯಕರನ್ನು ಕರ್ನಾಟಕಕ್ಕೆ ಕಳಿಸಿ ಕೊಡಲಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ