ಬಂಡವಾಳಶಾಹಿವಾದ ಪೋಷಿಸಿರುವ ಕಾಂಗ್ರೆಸ್

ದಾವಣಗೆರೆ

      ವರ್ಷಗಳ ಕಾಲ ಸ್ವತಂತ್ರ ಭಾರತವನ್ನು ಆಳಿರುವ ಕಾಂಗ್ರೆಸ್ ಪಕ್ಷವು ಸಮತಾವಾದದ ಸೋಗಿನಲ್ಲಿ ಬೃಹತ್ ಬಂಡವಾಳ ಶಾಹಿವಾದವನ್ನು ಪೋಷಿಸಿಕೊಂಡು ಬಂದಿದೆ ಎಂದು ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠದ ಸಂಚಾಲಕ ವಿಶ್ವನಾಥ್ ಭಟ್ ಆರೋಪಿಸಿದರು.

    ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ “ಅಜೇಯ ಭಾರತ-ಅಟಲ್ ಬಿಜೆಪಿ” ಘೋಷಣೆಯಡಿಯಲ್ಲಿ ಸಂಪನ್ನ ಭಾರತದತ್ತ ಕೇಂದ್ರದ ಬಿಜೆಪಿ ಸರ್ಕಾರದ ಆರ್ಥಿಕ ವಿಶ್ಲೇಷಣೆಯ ಸಭೆಯಲ್ಲಿ ಅವರು ಮಾತನಾಡಿದರು. 

      ನಮ್ಮ ಸಂವಿಧಾನದ ಮೂಲ ಆಶಯ ಸಮಾನತೆಯಾಗಿದೆ. ಆದರೆ, ಕಾಂಗ್ರೆಸ್ ಸಮಾಜವಾದದ ಸೋಗಿನಲ್ಲಿ ಬಂಡವಾಳಶಾಹಿಗಳನ್ನು ಪೋಷಿಸಿದ್ದರ ಫಲವಾಗಿಯೇ ದೇಶದ 10 ಜನ ಬೃಹತ್ ಬಂಡವಾಳಶಾಹಿಗಳ ಕೈಯಲ್ಲಿ ಶೇ.80 ರಷ್ಟು ಆಸ್ತಿ ಇದ್ದರೆ, ಇನ್ನುಳಿದ ಜನರ ಕೈಯಲ್ಲಿ ಕೇವಲ ಶೇ.20 ರಷ್ಟು ಆಸ್ತಿ ಇದೆ. ಹಾಗಾದರೆ, ಇಲ್ಲಿ ಸಮಾನತೆ ಎಲ್ಲಿದೆ ಎಂದು ಪ್ರಶ್ನಿಸಿದರು.

       ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ಹುಚ್ಚು ಆರ್ಥಿಕ ನೀತಿಗಳಿಂದ 2014ರ ಹೊತ್ತಿಗೆ ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುತಿತ್ತು. ಆಗ ಭಾರತ ಸುಮಾರು 54 ಲಕ್ಷ ಕೋಟಿ ರೂ. ಸಾಲದಲ್ಲಿತ್ತು. ನಮ್ಮ ತೆರಿಗೆಯ ಮೂಲಕ ಸಂಗ್ರಹಿಸುತ್ತಿದ್ದ ಹಣದಲ್ಲಿ ಶೇ.46 ರಷ್ಟು ಅಂದರೆ, 3 ಲಕ್ಷದ 74 ಸಾವಿರ ಕೋಟಿ ರೂ. ಬಡ್ಡಿ ಪಾವತಿಸಬೇಕಾದ ಪರಿಸ್ಥಿತಿ ಇತ್ತು. ಇನ್ನುಳಿದ ಶೇ.54 ರಷ್ಟು ಹಣದಲ್ಲಿ ಸರ್ಕಾರಿ ನೌಕರರಿಗೆ ವೇತನ-ಭತ್ಯೆಯೇ ಕೊಡಲು ಸಾಲುತ್ತಿರಲಿಲ್ಲ. ಹೀಗಾಗಿ ದೇಶದ ಅಭಿವದ್ಧಿ ಕುಂಠಿತವಾಗಿ, ವಾಜಪೇಯಿ ಸರ್ಕಾರದ ಅವಧಿಯಲ್ಲಿ ಶೇ.8ರಷ್ಟಿದ್ದ ಜಿಡಿಪಿ, 2014ರ ಹೊತ್ತಿಗೆ ಶೇ.4ಕ್ಕೆ ಇಳಿದಿತ್ತು. ದೇಶ ಇಂಥಹ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಸಂದರ್ಭದಲ್ಲಿ ಮೋದಿ ಅವರಿಗೆ ದೇಶದ ಅಧಿಕಾರ ಹಸ್ತಾಂತರವಾಗಿದೆ. ಆದರೆ, ಪ್ರಧಾನಿ ಮೋದಿ ಕೇವಲ ನಾಲ್ಕೂವರೆ ವರ್ಷದಲ್ಲೇ ದೇಶದಲ್ಲಿ ಆರ್ಥಿಕ ಸುಧಾರಣೆ ತಂದಿದ್ದಾರೆಂದು ವಿಶ್ಲೇಷಿಸಿದರು.

       ಯುಪಿಎ ಸರ್ಕಾರದ 2008ರಿಂದ 2014ರ ಅವಧಿಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಜನರು ಠೇವಣಿ ರೂಪದಲ್ಲಿ ಇಟ್ಟಿದ್ದ ಹಣದಲ್ಲಿ ಬೃಹತ್ ಕೈಗಾರಿಕೋದ್ಯಮಿಗಳಿಗೆ ಸುಮಾರು 34 ಲಕ್ಷ ಕೋಟಿ ಸಾಲವನ್ನು ವಿತರಿಸಲಾಗಿತ್ತು. ಈ ಸಾಲದಲ್ಲಿ ಶೇ.70 ರಷ್ಟು ಸಾಲ ಪಾವತಿಸದೇ ಕೈಗಾರಿಕೋದ್ಯಮಿಗಳು ಬ್ಯಾಂಕ್‍ಗಳಿಗೆ ಟೋಪಿ ಹಾಕಿದ್ದರು. ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಪಡೆದಿದ್ದ 10 ಲಕ್ಷದ 25 ಸಾವಿರ ಕೋಟಿ ರೂ.

       ಸಾಲವು ಅನುತ್ಪಾದಿತ ಸ್ವತ್ತು ಆಗಿ ಮಾರ್ಪಟ್ಟು, ಬ್ಯಾಂಕ್‍ಗಳು ದಿವಾಳಿ ಆಗುವ ಹಂತ ತಲುಪಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ವೇಗದ ಪರಿವರ್ತನೆಗಾಗಿ ದಿವಾಳಿತನದ ಕಾಯ್ದೆಗೆ ಕೆಲ ತಿದ್ದುಪಡಿ ತಂದು, 180 ದಿನಗಳಲ್ಲಿಯೇ ಅನುತ್ಪಾದಿತ ಸಾಲದ ಬಗ್ಗೆ ಸೆಟ್ಲ್‍ಮೆಂಟ್ ಮಾಡುವಂತೆ ನೀತಿಗಳನ್ನು ರೂಪಿಸಿರುವುದರ ಪರಿಣಾಮ ಕೆಲವೇ ತಿಂಗಳಲ್ಲಿ ಬಂಡವಾಳಶಾಹಿಗಳು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿ, ಸುಮಾರು 2100 ಜನ ಕಾರ್ಪೋರೇಟ್‍ಶಾಹಿಗಳು 83 ಸಾವಿರ ಕೋಟಿ ರೂ.ಗಳಷ್ಟು ಸಾಲ ಕಟ್ಟಿದ್ದಾರೆ ಇದು ಮೋದಿ ಸರ್ಕಾರದ ಸಾಧನೆ ಎಂದು ಬಣ್ಣಿಸಿದರು.

          ಕೈಗಾರಿಕೆಗಳ ಅಭಿವೃದ್ಧಿ ಹೆಸರಲ್ಲಿ ಬ್ಯಾಂಕ್ ವಂಚಿಸುವುದನ್ನು ತಡೆಯಲು ದಿವಾಳಿತ ಕಾಯಿದೆ, ವ್ಯವಹಾರದಲ್ಲಿ ಕಾಳಧನ ಸೃಷ್ಟಿ ಮತ್ತು ತೆರಿಗೆ ವಂಚನೆ ನಿಲ್ಲಿಸಲು ಜಿಎಸ್‍ಟಿ, ನಗದು ಕಾಳಧನ ಬಯಲಿಗೆಳೆಯಲು ಅಪನಗದೀಕರಣ, ಲಕ್ಷಾಂತರ ಕೋಟಿ ಕಪ್ಪು ಹಣವಿರುವ ರಿಯಲ್ ಎಸ್ಟೇಟ್ ಕ್ಷೇತ್ರ ಸ್ವಚ್ಛಗೊಳಿಸಲು ಬೇನಾಮಿ ಆಸ್ತಿ ಕಾಯ್ದೆ ಸೇರಿದಂತೆ ಅನೇಕ ಸುಧಾರಣೆಗಳನ್ನು ಮೋದಿ ಸರ್ಕಾರ ಕೇವಲ ನಾಲ್ಕೂವರೆ ವರ್ಷಗಳಲ್ಲಿ ತಂದಿದೆ ಎಂದು ಹೇಳಿದರು.

          ಕೃಷಿ ಸಮುದಾಯ, ನಿರುದ್ಯೋಗ ಸಮಸ್ಯೆ ನಿವಾರಣೆ, ಮಹಿಳೆಯರ ಸಬಲೀಕರಣ, ದುರ್ಬಲ ವರ್ಗದವರ ಏಳ್ಗೆ, ಕಾರ್ಮಿಕ ವರ್ಗ ಸಮಸ್ಯೆ ನಿವಾರಣೆ ಹಾಗೂ ಯುವ ಪೀಳಿಗೆಗೆ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣದಲ್ಲಿ ಬದಲಾವಣೆ, ಹೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಜವಳಿ ಹಾಗೂ ಚರ್ಮದ ಉತ್ಪನ್ನ ತಯಾರಿಸುವ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಮೋದಿ ಸರ್ಕಾರ ದಿಟ್ಟ ನಡೆ, ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಭಾರತದಲ್ಲಿ 2014ರಲ್ಲಿ ಕೇವಲ 2 ಮಾತ್ರವಿದ್ದ ಮೊಬೈಲ್ ಘಟಕಗಳನ್ನು ಇಂದು 121 ಘಟಕಗಳಿಗೆ ವಿಸ್ತರಿಸುವ ಮೂಲಕ ನಾಲ್ಕೂವರೆ ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಅಲ್ಲದೆ, ಸ್ವಯಂ ಉದ್ಯೋಗ ಕೈಗೊಳ್ಳಲು ಮುದ್ರಾ ಬ್ಯಾಂಕ್ ಯೋಜನೆಯಡಿ ಬ್ಯಾಂಕ್‍ಗಳಿಂದ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ಕೊಡಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

       2014ರ ಲೋಕಸಭಾ ಚುನಾವಣೆಯಲ್ಲಿ ನಮಗೆ ಚುನಾವಣೆ ಎದುರಿಸಲು ಯುಪಿಎ ಸರ್ಕಾರದ ಆರ್ಥಿಕ ಬಿಕ್ಕಟ್ಟು ಹಾಗೂ ಕಾಂಗ್ರೆಸ್‍ನ ಭ್ರಷ್ಟಾಚಾರ ಮಾತ್ರ ಪ್ರಚಾರದ ಅಸ್ತ್ರವಾಗಿದ್ದವು. ಆದರೆ, ಈಗ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಏಕೆ ಮಾಡಬೇಕು ಎನ್ನುವವರ ಪ್ರಶ್ನೆಗೆ ನಮ್ಮ ಕಾರ್ಯಕರ್ತರು ತಲೆ ಎತ್ತು, ಎದೆ ಸೆಟಿಸಿಕೊಂಡು ಹೋಗಿ ಉತ್ತರ ನೀಡಲು ಹೋಗುವಷ್ಟು ಸಾಧನೆಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಾಡಿದೆ. ಆದ್ದರಿಂದ 57 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರದ ಕರ್ಮಕಾಂಡ ಹಾಗೂ ಕಳೆದ ನಾಲ್ಕೂವರೆ ವರ್ಷದಲ್ಲಿ ಮೋದಿ ಮಾಡಿದ ಸಾಧನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಮೂಲಕ ದೇಶವನ್ನು ಮುನ್ನಡೆಸಲು ಶ್ರಮಿಸಬೇಕೆಂದು ಕರೆ ನೀಡಿದರು.

        ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೋದಿ ಸರ್ಕಾರ ಈವರೆಗೆ ಯಾರೂ ಮಾಡದಷ್ಟು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನಸಾಮಾನ್ಯರಿಗೆ ಅನೇಕ ವಿಚಾರಗಳು ಗೊತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಇಂದಿನ ವಿಶೇಷ ಸಭೆಯಲ್ಲಿ ಮಾಹಿತಿ ಪಡೆದು ಜನಸಾಮಾನ್ಯರಿಗೆ ಮುಟ್ಟಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕು ಎಂದು ಕಿವಿಮಾತು ಹೇಳಿದರು.

       ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ವಿಧಾನ ಪರಿಷತ್‍ನ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮುಖಂಡರುಗಳಾದ ಧನಂಜಯ ಕಡ್ಲೇಬಾಳು, ಹೆಚ್.ಎಂ.ರುದ್ರಮುನಿಸ್ವಾಮಿ, ಎಚ್.ಎನ್.ಶಿವಕುಮಾರ್, ರಮೇಶ್ ನಾಯ್ಕ, ಡಿ.ಎಚ್.ಶಿವಶಂಕರ್, ಪ್ರಭು ಕಲ್ಬುರ್ಗಿ, ಧನುಷ್‍ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link