ತುಮಕೂರು:
2014 ರಲ್ಲಿ ಜನತೆಯ ಮುಂದೆ ಹಲವು ಭರವಸೆಗಳನ್ನು ಇಟ್ಟು ಅಧಿಕಾರಕ್ಕೆ ಬಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭರವಸೆಗಳನ್ನು ಈಡೇರಿಸುವ ಬದಲು ದ್ವೇಷ ಮತ್ತು ಆತಂಕದ ವಾತಾವರಣವನ್ನು ದೇಶಾದ್ಯಂತ ಮೂಡಿಸಿತು. ಇದೇ ಸರ್ಕಾರದ ಸಾಧನೆ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್.ಸುದರ್ಶನ್ ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯಷ್ಟೇ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಹಿಂದಿನ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸಲಿಲ್ಲ. ಮಾತು ತಪ್ಪಿದ ಮತ್ತು ಮಾರ್ಗ ತಪ್ಪಿದ ಸರ್ಕಾರವಿದು ಎಂದು ಛೇಡಿಸಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಅನೇಕ ಜನಪರ ಕಾನೂನುಗಳನ್ನು ಜಾರಿಗೆ ತಂದಿತ್ತು. ಮಾಹಿತಿ ಹಕ್ಕು ಕಾಯ್ದೆ, ಫುಡ್ ಸೇಫ್ಟಿ ಆ್ಯಕ್ಟ್, ಆಧಾರ್ ಯೋಜನೆ, ಉದ್ಯೋಗ ಖಾತರಿ ಸೇರಿದಂತೆ ಅನೇಕ ಯೋಜನೆಗಳು ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಿದವು. ಆಧಾರ್ ಯೋಜನೆಯನ್ನು ಬಿಜೆಪಿ ಸರ್ಕಾರ ವ್ಯಂಗ್ಯವಾಗಿ ಟೀಕಿಸಿತ್ತು. ಸುಪ್ರೀಂಕೋರ್ಟ್‍ವರೆಗೂ ಹೋಗಿ ಇದನ್ನು ರದ್ದುಪಡಿಸಲು ಮುಂದಾಗಿತ್ತು. ಇದರ ಅನುಕೂಲ ಏನೆಂಬುದು ಈಗ ಬಿಜೆಪಿಗೆ ಗೊತ್ತಾಗಿದೆ. ಇಂತಹ ಅನೇಕ ಯೋಜನೆಗಳು ಕಾಂಗ್ರೆಸ್ ಸರ್ಕಾರದಿಂದಲೇ ರೂಪುಗೊಂಡವು.
ಇವರು ಮಾಡಿರುವ ಸಾಧನೆಗಳಾದರೂ ಏನು? ಯೋಜನೆಗಳು ಏನು ಎಂದವರು ಪ್ರಶ್ನಿಸಿದರು.ರೈತರ ಬಗ್ಗೆಯಾಗಲಿ, ಹಿಂದುಳಿದ, ದಲಿತರ ಬಗ್ಗೆ ಯಾವ ಯೋಜನೆಗಳನ್ನೂ ರೂಪಿಸಲಿಲ್ಲ. ಮಹಿಳೆಯರನ್ನಂತೂ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮಹಿಳಾ ಮೀಸಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಷ್ಟೇ ಅಲ್ಲ, ಮಹಿಳಾ ಪರ ಯೋಜನೆಗಳ ಬಗ್ಗೆ ಪ್ರಣಾಳಿಕೆಯಲ್ಲಿಯೂ ಪ್ರಸ್ತಾಪವಿಲ್ಲ. ಇವರು ಮಹಿಳಾ ವಿರೋಧಿಗಳಲ್ಲವೆ ಎಂದು ಟೀಕಿಸಿದ ಅವರು, ಈ ದೇಶದಲ್ಲಿ ಶೇ.10 ರಷ್ಟು ಜನರನ್ನು ಮಾತ್ರವೇ ಓಲೈಸುತ್ತಿರುವ ಈ ಸರ್ಕಾರ ಬಹು ಜನರನ್ನು ನಿರ್ಲಕ್ಷಿಸುತ್ತಾ ಹೊರಟಿದೆ ಎಂದರು.
ಬಿಜೆಪಿ ಸರ್ಕಾರಕ್ಕೆ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಸಂವಿಧಾನ ಬದ್ಧ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಅವರು ಯಾವುದರ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ. ಮಾಧ್ಯಮ ಗೋಷ್ಠಿ ಕರೆದು ಅವರ ಪ್ರಶ್ನೆಗಳನ್ನು ಸ್ವೀಕರಿಸುವ ತಾಳ್ಮೆಯೂ ಅವರಲಿಲ್ಲ. ದೇಶದ ಸಮಸ್ಯೆಗಳ ಬಗ್ಗೆ ಪಾರ್ಲಿಮೆಂಟ್‍ನಲ್ಲೂ ಉತ್ತರಿಸುವುದಿಲ್ಲ. ಹೊರದೇಶಗಳಿಗೆ ಹೋಗಿ ಅಲ್ಲಿ ಭಾಷಣ ಮಾಡುವಾಗ ಉತ್ತರಿಸುತ್ತಾರೆ. ಭಯೋತ್ಪಾದನೆ ನಿಗ್ರಹ ನಮ್ಮಿಂದಲೇ ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ 2016ರ ಘಟನೆ ಸೇರಿದಂತೆ ಹಿಂದೆ ನಡೆದಿರುವ ದಾಳಿಗಳ ನಿಗ್ರಹ ಇತ್ಯಾದಿಗಳು ಇವರ ನೆನಪಿಗೆ ಬರುವುದಿಲ್ಲವೆ? ಭಯೋತ್ಪಾದನೆ ಹೆಚ್ಚಾಗಿರುವುದು ಇವರ ಕಾಲದಲ್ಲೇ. ದೇಶದ ಗಮನ ಬೇರೆಡೆಗೆ ಸೆಳೆಯಲು ಭಾವನಾತ್ಮಕ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪಶು ಸಂಗೋಪನಾ ಸಚಿವ ನಾಡಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋನಾ ರೆಡ್ಡಿ, ವಿ.ಪ. ಸದಸ್ಯ ತಿಪ್ಪೇಸ್ವಾಮಿ, ಮಾಜಿ ಸದಸ್ಯ ಹಾಗೂ ಜೆಡಿಎಸ್ ವಕ್ತಾರ ರಮೇಶ್ ಬಾಬು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಎ.ಗೋವಿಂದರಾಜು, ಬೆಳ್ಳಿ ಲೋಕೇಶ್, ಮುರಳೀಧರ ಹಾಲಪ್ಪ ಮುಂತಾದವರು ಉಪಸ್ಥಿತರಿದ್ದರು.
ಕೇಂದ್ರದ ಹಸ್ತಕ್ಷೇಪ
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂವಿಧಾನ ಬದ್ಧ ಸಂಸ್ಥೆಗಳ ಮೇಲೂ ಹಸ್ತಕ್ಷೇಪ ಮಾಡುತ್ತಿದೆ. ಸಿಬಿಐ ದುರುಪಯೋಗಪಡಿಸಿಕೊಳ್ಳುತ್ತಿದೆ. ಕೇಂದ್ರದ ಹಸ್ತಕ್ಷೇಪದ ಬಗ್ಗೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳೇ ಬಹಿರಂಗವಾಗಿ ಪತ್ರಿಕಾ ಗೋಷ್ಠಿ ನಡೆಸಿದ್ದರು. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು.
-ವಿ.ಆರ್.ಸುದರ್ಶನ್.
ಹಿಂದೆಲ್ಲಾ ಯುದ್ಧಗಳು ನಡೆದಿರಲಿಲ್ಲವೆ?
ತುಮಕೂರು: ದೇಶದ ರಕ್ಷಣೆ, ಕಾವಲುಗಾರ ಎಂದೆಲ್ಲ ಪ್ರಚಾರ ಗಿಟ್ಟಿಸಿಕೊಳ್ಳಲಾಗುತ್ತಿದೆ. ಈ ಹಿಂದಿನ ಇತಿಹಾಸವನ್ನು ಕೆದಕಿದರೆ 5 ಬಾರಿ ಯುದ್ಧಗಳಾಗಿವೆ. ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದೆ. ಚೀನಾದ ವಿರುದ್ಧವೂ ಯುದ್ಧ ಮಾಡಿದೆ. ಅಷ್ಟೇ ಅಲ್ಲ, ದೇಶಕ್ಕೆ ಭದ್ರತೆ ನೀಡಿಕೊಂಡೇ ಬರಲಾಗಿದೆ. ಇಷ್ಟಿದ್ದರೂ ತಾನು ಮಾತ್ರ ದೇಶದ ಕಾವಲುಗಾರ ಎಂಬಂತೆ ಪ್ರಧಾನಿ ಮೋದಿ ಬಿಂಬಿಸಿಕೊಂಡು ಬರುತ್ತಿದ್ದಾರೆ. ಹಿಂದಿನ ಸರ್ಕಾರಗಳು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಿಲ್ಲ. ಪ್ರಚಾರವನ್ನೂ ಬಯಸಲಿಲ್ಲ. ಆದರೆ ಈಗ ಇವೆಲ್ಲವೂ ರಾಜಕೀಯಕ್ಕೆ ಬಳಕೆಯಾಗುತ್ತಿರುವುದು ಎಷ್ಟು ಸರಿ ಎಂದು ಕೃಷಿ -ಪಶು ಸಂಗೋಪನಾ ಸಚಿವ ನಾಡಗೌಡ ಪ್ರಶ್ನಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರಣಾಳಿಕೆಯಲ್ಲಿ ರೈತರ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪವಿಲ್ಲ. ಸ್ವಾಮಿನಾಥನ್ ವರದಿ ಜಾರಿಗೆ ಮನಸ್ಸು ಮಾಡಲಿಲ್ಲ. ಈ ಹಿಂದೆ ನೀಡಿದ್ದ ಉದ್ಯೋಗ ಭರವಸೆ, ಆಶ್ವಾಸನೆ ಈಡೇರಿಸಲಿಲ್ಲ. ರೈತರ ಸಾಲಮನ್ನಾ ಮಾಡಿ ಎಂದರೆ ಅದು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಕೆಲವೇ ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ನಮ್ಮ ದೇಶ ಎಲ್ಲಿಗೆ ಬಂದು ನಿಂತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ದೇಶ ಸುತ್ತುತ್ತಾ, ಭಾಷಣಗಳನ್ನು ಮಾಡಿದರೆ ಈ ದೇಶ ಅಭಿವೃದ್ಧಿ ಕಾಣುವುದೆ ಎಂದು ಪ್ರಶ್ನಿಸಿದ ಅವರು, ಯಾವ ವಿಷಯಗಳನ್ನು ಚರ್ಚಿಸಬೇಕೋ ಅದನ್ನು ಮರೆಮಾಚಿ ಅನಗತ್ಯ ವಿಷಯಗಳಿಗೆ ಮೋದಿ ಹೆಚ್ಚು ಆದ್ಯದೆ ಕೊಡುತ್ತಿದ್ದಾರೆ. ಇತ್ತೀಚೆಗೆ ಹಿಂದುತ್ವ ಪದವನ್ನು ಬಳಕೆ ಮಾಡುತ್ತಿದ್ದಾರೆ. ನಮ್ಮದು ವಿವಿಧತೆಯಲ್ಲಿ ಏಕತೆ ಇರುವ ಪ್ರಜಾಪ್ರಭುತ್ವ ರಾಷ್ಟ್ರ. ಮೋದಿಯವರ ಈ ನಡೆ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಅಪಾಯಗಳಿವೆ.
ಕೋಮುವಾದಿ ಪಕ್ಷವನ್ನು ದೂರವಿಡಲೆಂದೇ ನಾವು ಒಗ್ಗೂಡಿದ್ದೇವೆ ಎಂದರು.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ ಮಾತನಾಡಿ ಲೋಕಸಭೆಯಲ್ಲಿ ಹಿರಿಯರಾದ ಎಲ್.ಕೆ.ಅಡ್ವಾಣಿ, ಮನಮೋಹನಸಿಂಗ್, ದೇವೇಗೌಡರು ಸೇರಿದಂತೆ ತುಂಬಾ ಹಿರಿಯರು ಇರಬೇಕಿತ್ತು. ಅಂತಹವರು ಇದ್ದರೆ ಅದಕ್ಕೊಂದು ಅರ್ಥ ಬರುತ್ತದೆ. ತುಮಕೂರಿನಿಂದ ದೇವೇಗೌಡರು ಗೆಲುವು ಸಾಧಿಸಿದರೆ ರಾಷ್ಟ್ರಮಟ್ಟದಲ್ಲಿ ಬೆಳವಣಿಗೆಯಾಗುತ್ತದೆ ಎಂದರು.
ಜಿಲ್ಲೆಗಿಂದು ದೋಸ್ತಿ ಮುಖಂಡರು
ಏಪ್ರಿಲ್ 10 ರಂದು ತುಮಕೂರು ಜಿಲ್ಲೆಯ ತಿಪಟೂರು, ಚಿ.ನಾ.ಹಳ್ಳಿ ಹಾಗೂ ಮಧುಗಿರಿ ಕ್ಷೇತ್ರಗಳಲ್ಲಿ ದೇವೇಗೌಡರು, ಸಿದ್ದರಾಮಯ್ಯ ಸೇರಿದಂತೆ ಮುಖಂಡರುಗಳು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಬಂಡೆಪ್ಪ ಕಾಶಂಪುರ್, ಬಸವರಾಜ ಹೊರಟ್ಟಿ ಸೇರಿದಂತೆ ಇತರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ವಿ.ಪ.ಸದಸ್ಯ ತಿಪ್ಪೇಸ್ವಾಮಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
