ಬೆಂಗಳೂರು
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸವರ್ಷ ಸಂಭ್ರಮಾಚರಣೆಗೆ ಸಿಂಗಾಪೂರ್ ಗೆ ತೆರಳಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಸಹ ವಿದೇಶಕ್ಕೆ ಹಾರಿದ್ದಾರೆ.
ಆಪರೇಷನ್ ಕಮಲ ಭೀತಿಯಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಾಸಕರು ಈ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೆಲವು ಶಾಸಕರೊಂದಿಗೆ ವಿದೇಶಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸ ವರ್ಷಾಚರಣೆಗೆ ದುಬೈಗೆ ಕುಟುಂಬದ ಸದಸ್ಯರ ಜೊತೆ ದಿನೇಶ್ ಗುಂಡೂರಾವ್ ತೆರಳಿದ್ದಾರೆ. ಗುಂಡೂರಾವ್ ಜೊತೆ ಜೀವರ್ಗಿ ಶಾಸಕ ಅಜಯ್ ಸಿಂಗ್, ಮೇಲ್ಮನೆ ಸದಸ್ಯರಾದ ವಿಜಯ್ ಸಿಂಗ್, ರಿಜ್ವಾನ್ ಅರ್ಷದ್, ಶ್ರೀನಿವಾಸ್ ಮಾನೆ ದುಬೈಗೆ ಹಾರಿದ್ದಾರೆ. ಶಾಸಕರಾದ ಮುನಿರತ್ನ, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಕೂಡ ಸಿಂಗಾಪೂರನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ. 20ರಿಂದ 30 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಆರೋಪ ಮಾಡಿದ್ದರು. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದಾರೆ. ಮಿತ್ರ ಪಕ್ಷಗಳ ನಾಯಕರು ಮೈತ್ರಿಯ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಇವೆಲ್ಲವುಗಳ ಮಧ್ಯೆ ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ