ಬೆಂಗಳೂರು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ನೀಡಿರುವ ಯೋಜನೆಗಳು ಜನಪರ ಕಾರ್ಯಕ್ರಮಗಳು ಸಂಘಟನೆಯ ಬಗ್ಗೆ ರಾಜ್ಯದ ಜನತೆಗೆ ಮಾಹಿತಿ ನೀಡಲು ನಮ್ಮ ಕಾಂಗ್ರೆಸ್ ಹೆಸರಿನ ಪತ್ರಿಕೆ ತರಲು ಕಾಂಗ್ರೆಸ್ ಮುಂದಾಗಿದೆ.
ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಮೋದಿ ಸರ್ಕಾರದ ವೈಫಲ್ಯತೆಗಳನ್ನು ಜನತೆಗೆ ಮುಟ್ಟಿಸುವ ದೃಷ್ಠಿಯಿಂದ ಕಾಂಗ್ರೆಸ್ ಕನ್ನಡದಲ್ಲಿ ಹೊಸ ಪತ್ರಿಕೆಯೊಂದನ್ನು ತರಲು ನಿರ್ಧರಿಸಿದೆ. ಲೋಕಸಭಾ ಚುನಾವಣೆಗೆ 3 ತಿಂಗಳು ಬಾಕಿ ಇರುವಂತೆಯೇ ಕಾಂಗ್ರೆಸ್ ಹೊಸ ಪತ್ರಿಕೆಯನ್ನು ನಿರ್ಧರಿಸಿದ್ದು, ಫೆ. 6 ರಿಂದ ನಮ್ಮ ಕಾಂಗ್ರೆಸ್ ಹೆಸರಿನ ಪತ್ರಿಕೆ ಆರಂಭಗೊಳ್ಳಲಿದೆ.
ಕಳೆದ 7 ದಶಕಗಳಲ್ಲಿ ದೇಶಕ್ಕೆ ಮತ್ತು ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ, ಪಕ್ಷಕ್ಕಾಗಿ ದುಡಿದವರು. ರಾಜಕೀಯ ವಿಶ್ಲೇಷಣೆ, ವಿರೋಧ ಪಕ್ಷಗಳ ವೈಫಲ್ಯತೆ ಮುಂತಾದವುಗಳು ನಮ್ಮ ಕಾಂಗ್ರೆಸ್ ಪತ್ರಿಕೆಯಲ್ಲಿ ಪ್ರಕಟಗೊಳ್ಳಲಿವೆ.
ಕೆಲ ಮಾಧ್ಯಮಗಳು ಬಿಜೆಪಿ ಪರ ನಿಲುವನ್ನು ಹೊಂದಿರುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಬಾರದೆನ್ನುವ ಉದ್ದೇಶದಿಂದ ಪಕ್ಷದ ಒಡೆತನದ ಪತ್ರಿಕೆಯನ್ನು ಹೊರ ತರಲು ನಿರ್ಧರಿಸಲಾಗಿದೆ. ನಮ್ಮ ಕಾಂಗ್ರೆಸ್ ಪತ್ರಿಕೆ ಪ್ರಾಕ್ಷಿಕ ಪತ್ರಿಕೆಯಾಗಿ ಹೊರ ಬರಲಿದ್ದು, ಪ್ರತಿ ಸಂಚಿಕೆಯಲ್ಲಿ ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರ ಅಭಿಪ್ರಾಯದೊಂದಿಗೆ ಪ್ರಕಟವಾಗಲಿರುವ ಪತ್ರಿಕೆಯನ್ನು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಡ್ಡಾಯವಾಗಿ ಪ್ರತಿಗಳನ್ನು ಪಡೆದುಕೊಳ್ಳುವ ಕುರಿತು ಕೆಪಿಸಿಸಿ ಅಧ್ಯಕ್ಷರು ಆದೇಶ ಹೊರಡಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
