ದಾವಣಗೆರೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು? ಎಂಬುದರ ಬಗ್ಗೆ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದು ಸೋಲಿನ ಸತ್ಯ ಶೋಧನೆ ಮಾಡಿ, ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿಯ ಸದಸ್ಯ ಧೃವನಾರಾಯಣ್ ತಿಳಿಸಿದ್ದಾರೆ.
ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಗಿರುವಷ್ಟು ಹಿನ್ನಡೆ, ಹಿಂದೆಂದೂ ಆಗಿರಲಿಲ್ಲ. ಈ ಹಿನ್ನಡೆಗೆ ಕಾರಣ ಏನು ಎಂಬುದರ ಸತ್ಯ ಶೋಧನೆಯೇ ನಮ್ಮ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದರು.
ನಮ್ಮ ಸಮಿತಿ ಈಗಾಗಲೇ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಅಲ್ಲಿಯ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿರುವ ನಿಟ್ಟಿನಲ್ಲಿಯೇ ಇನ್ನುಳಿದ 24 ಕ್ಷೇತ್ರಗಳಿಗೂ ಭೇಟಿ ನೀಡಿ, ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಅಭಿವೃದ್ಧಿಯ ಮಾನದಂಡದ ಮೇಲೆ ಚುನಾವಣೆ ನಡೆಸಿತು. ಆದರೆ, ದೇಶದ ಜನತೆ ಅಭಿವೃದ್ಧಿಗಿಂತ ಬಿಜೆಪಿಯ ಭಾವನಾತ್ಮಕ ಮಾನದಂಡವನ್ನು ಸ್ವೀಕರಿಸಿದ್ದಾರೆ. ಅಲ್ಲದೇ, ಕಾಂಗ್ರೆಸ್ ವೈಫಲ್ಯಕ್ಕೆ ಹಲವು ಕಾರಣಗಳಿವೆ ಎಂದರು.
ಸಮಿತಿಯ ಮತ್ತೋರ್ವ ಸದಸ್ಯ ವಿ.ಆರ್.ಸುದರ್ಶನ್ ಮಾತನಾಡಿ, ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಆದ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದೆ. ಹಾಗೂ ಒಪ್ಪಿಕೊಂಡಿದೆ. ಬಿಜೆಪಿಯವರು ಸಂವಿಧಾನದ ಆಶಯಗಳನ್ನು ದುರ್ಬಲ ಗೊಳಿಸಿ, ರಾಷ್ಟ್ರೀಯತೆಯ ಮೇಲೆ ಚುನಾವಣೆ ನಡೆಸಿದರೆ, ಕಾಂಗ್ರೆಸ್ ಅಭಿವೃದ್ಧಿಯ ಆಧಾರದ ಮೇಲೆ ಚುನಾವಣೆ ನಡೆಸಿತು. ಆದರೆ, ಬಿಜೆಪಿಯ ಹುಸಿ ರಾಷ್ಟ್ರೀಯತೆ ಹಾಗೂ ಭಾವನಾತ್ಮಕ ವಿಷಯಕ್ಕೆ ಜನರು ಮರುಳಾಗಿದ್ದಾರೆ. ಆದರೆ, ವಾಸ್ತವದಲ್ಲಿ ರಾಷ್ಟ್ರೀಯತೆಗೆ ಏನೂ ಕೊಡುಗೆ ನೀಡದ ಬಿಜೆಪಿಗೆ ರಾಷ್ಟ್ರೀಯತೆಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ, ಸತ್ಯಶೋಧನಾ ಸಮಿತಿ ಉಪಾಧ್ಯಕ್ಷ ವೀರಣ್ಣ ಮತ್ತಿಕಟ್ಟೆ, ಒಂದೇ ಒಂದು ಧರ್ಮದ ಪರವಾಗಿರುವ ಬಿಜೆಪಿ ಎಂದೂ ಸಂವಿಧಾನದ ಆಶಯದಂತೆ, ಭಾರತವನ್ನು ಕಟ್ಟಿಲ್ಲ. ಆದರೆ, ಎಲ್ಲರನ್ನೂ ಒಂದಾಗಿ ಕರೆದೊಯ್ಯುವ ಹಾಗೂ ಸಮಗ್ರ ಭಾರತ ಕಟ್ಟುವುದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
