ಕಾಂಗ್ರಸ್ ಪಕ್ಷ ಪುನರ್ ರಚನೆ : ರಾಜ್ಯದಿಂದ ದೆಹಲಿಗೆ ತೆರಳುವವರು ಯಾರು ?

ಬೆಂಗಳೂರು

   ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಹಳೆಯ ಪಕ್ಷವಾಗಿದ್ದರೂ, ಕೇಂದ್ರದಲ್ಲಿ ಅಧಿಕೃತ ಪ್ರತಿಪಕ್ಷವಾಗಲೂ ಹೆಣಗಾಡುತ್ತಿರುವ ಕಾಂಗ್ರೆಸ್ ಎಐಸಿಸಿ ಮಟ್ಟದಲ್ಲಿ ಪಕ್ಷವನ್ನು ಪುನಾರಚನೆ ಮಾಡಲು ಸಿದ್ಧತೆ ನಡೆಸಿದೆ. ಹೀಗಾಗಿ ರಾಜ್ಯದಿಂದ ರಾಷ್ಟ್ರ ರಾಜಕಾರಣಕ್ಕೆ ಯಾರು ತೆರಳುತ್ತಾರೆ ಎನ್ನುವ ಕುತೂಹಲ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮೂಡಿದೆ.

    ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯವರ ಆರೋಗ್ಯ ಸಮಸ್ಯೆಯ ನಡುವೆಯೂ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದು, ನೂತನ ವರ್ಷಾರಂಭದೊಳಗೆ ಎಐಸಿಸಿಯನ್ನು ಪುನಾರಚಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ ನಾಯಕರು ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಾರೋ, ಯಾರು ರಾಜ್ಯದಲ್ಲಿಯೇ ಉಳಿದುಕೊಳ್ಳುತ್ತಾರೋ ಎನ್ನುವ ಚರ್ಚೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.

     ಈಗಾಗಲೇ ಎಐಸಿಸಿಯಲ್ಲಿ ರಾಜ್ಯದಿಂದ ಪಕ್ಷದ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಕಾರ್ಯದರ್ಶಿಯಾಗಿ ಮಹಾರಾಷ್ಟ್ರ ಉಸ್ತುವಾರಿಯಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ಎನ್. ಬೋಸರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಸಲೀಂ ಅಹಮದ್ ಹಾಗೂ ಯುವ ಘಟಕದ ಚಿಕ್ಕಮಗಳೂರು ಮೂಲದ ಸಂದೀಪ್ ಎಐಸಿಸಿ ಕಾರ್ಯದರ್ಶಿಗಳಾಗಿದ್ದಾರೆ. ಈಗ ಎಐಸಿಸಿ ಸಂಪೂರ್ಣ ಪುನಾರಚನೆ ಮಾಡಲು ಮುಂದಾಗಿರುವುದರಿಂದ ಹಾಲಿ ಕಾರ್ಯದರ್ಶಿಗಳಲ್ಲಿ ಯಾರನ್ನು ಮುಂದುವರೆಸುತ್ತಾರೆ ಹಾಗೂ ಯಾರನ್ನು ಕೈ ಬಿಡುತ್ತಾರೆ ಎನ್ನುವುದರ ಮೇಲೆ ಉಳಿದವರಿಗೆ ದೆಹಲಿ ರಾಜಕಾರಣದ ಬಾಗಿಲು ತೆರೆಯುತ್ತದೆ.

    ಸ್ಥಾನ ಹೊಂದಾಣಿಕೆ ಲೆಕ್ಕಾಚಾರ: ರಾಜ್ಯ ಕಾಂಗ್ರೆಸ್‍ನಲ್ಲಿ ಈಗ ರಾಜಿನಾಮೆ ಪರ್ವ ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕ ಎರಡೂ ಸ್ಥಾನಗಳಿಗೆ ಕ್ರಮವಾಗಿ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ರಾಜಿನಾಮೆ ಸಲ್ಲಿಸಿರುವುದರಿಂದ ಅವರ ರಾಜೀನಾಮೆ ಅಂಗಿಕಾರಗೊಂಡರೆ, ಅವರ ಸ್ಥಾನಗಳಿಗೆ ಬೇರೆ ನಾಯಕರ ನೇಮಕ ಮಾಡಬೇಕಾಗುತ್ತದೆ. ಆ ಕಾರಣಕ್ಕೆ ಅನೇಕ ಹಿರಿಯ ನಾಯಕರು ರಾಜ್ಯ ಕಾಂಗ್ರೆಸ್‍ನಲ್ಲಿಯೇ ಪ್ರಬಲ ಸ್ಥಾನ ಗಟ್ಟಿಗಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.

    ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರೂ, ಅವರನ್ನೂ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಬೇಡಿಕೆಯೂ ಕೇಳಿ ಬರುತ್ತಿದೆ. ಒಂದು ವೇಳೆ, ಖರ್ಗೆಯವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ, ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕರಾಗಿ ಮುಂದುವರೆಸಿದರೆ, ಎರಡೂ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಡಾ.ಜಿ.ಪರಮೇಶ್ವರ್ ಹಾಗೂ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರನ್ನು ಸಿಡಬ್ಲುಸಿ (ಕಾಂಗ್ರೆಸ್ ವರ್ಕಿಂಗ್ ಕಮಿಟಿ)ಗೆ ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ನೇಮಿಸಿ ರಾಜ್ಯ ರಾಜಕಾರಣದಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ತಡೆಗಟ್ಟುವ ಪ್ರಯತ್ನ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲವು ನಾಯಕರು ಭಾಷೆಯ ಸಮಸ್ಯೆಯಿಂದ ರಾಷ್ಟ್ರ ರಾಜಕಾರಣಕ್ಕೆ ತೆರಳಲು ಹಿಂದೇಟು ಹಾಕುತ್ತಾರೆ ಎಂದು ತಿಳಿದು ಬಂದಿದೆ.

ಕಾರ್ಯದರ್ಶಿಗಳಾಗಲು ಕಾತುರ:

    ರಾಜ್ಯ ಕಾಂಗ್ರೆಸ್‍ನಲ್ಲಿ ಸೂಕ್ತ ಸ್ಥಾನ ಮಾನ ದೊರೆಯದೆ ಇರುವ ಅನೇಕ ನಾಯಕರು ಎಐಸಿಸಿ ಕಾರ್ಯದರ್ಶಿಯಾಗುವ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ದಿನೇಶ್ ಗುಂಡೂರಾವ್ ಅವರಿಗೆ ಸೂಕ್ತ ಸ್ಥಾನ ಕಲ್ಪಿಸಲು ಅವರನ್ನು ಎಐಸಿಸಿ ಕಾರ್ಯದರ್ಶಿಯಾಗಿ ನೇಮಿಸಿ ಯಾವುದಾದರೂ ರಾಜ್ಯದ ಉಸ್ತುವಾರಿ ವಹಿಸಬಹುದು ಎನ್ನಲಾಗುತ್ತಿದೆ. ಅವರ ಜೊತೆಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ, ಬಿ.ಎಲ್.ಶಂಕರ್ ಹಾಗೂ ಅಲ್ಪ ಸಂಖ್ಯಾತ ಸಮುದಾಯದಿಂದ ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರೀಸ್, ಶಾಕೀರ್ ಸನದಿ ಅವರನ್ನು ಎಐಸಿಸಿ ಕಾರ್ಯದರ್ಶಿ ಹುದ್ದೆಯ ಮೇಲೆ ಕಣ್ಣಿಟ್ಟುಕೊಂಡು ಕಾಯುತ್ತ ಕುಳಿತಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದು ಮುಗಿಯದ ಗೊಂದಲ:

      ಈಗಾಗಲೇ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಹೈ ಕಮಾಂಡ್ ಅಂಗೀಕರಿಸಿದರೆ, ಅವರನ್ನು ಸಿಡಬ್ಲುಸಿ ಸದಸ್ಯರನ್ನಾಗಿ ನೇಮಿಸಿ ಅವರ ಸೇವೆಯನ್ನು ರಾಷ್ಟ್ರ ರಾಜಕಾರಣಕ್ಕೆ ಬಳಸಿಕೊಳ್ಳಬಹುದು. ಆದರೆ, ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿಯೇ ಮುಂದುವರೆಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ರಾಜಿನಾಮೆ ಅಂಗೀಕರಿಸಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಂಡರೆ, ರಾಜ್ಯ ರಾಜಕಾರಣದಲ್ಲಿ ಪಕ್ಷದಲ್ಲಿನ ಗೊಂದಲ ಕಡಿಮೆಯಾಗುತ್ತವೆ ಎಂದು ಅವರ ವಿರೋಧಿ ಬಣದ ನಾಯಕರು ಹೈ ಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap