ಹರಪನಹಳ್ಳಿ:
ಹರಪನಹಳ್ಳಿ ವಿಧಾನಸಭಾ ಸಾಮಾನ್ಯ ಕ್ಷೇತ್ರವಿರುವರಿಗೂ ನಾನಾಗಲಿ, ನನ್ನ ಮಗನಾಗಲಿ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಮುಜುರಾಯಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಪಟ್ಟಣದ ಎಚ್.ಪಿ.ಎಸ್. ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ನಿಧನ ನಂತರ ಪಿ.ಟಿ. ಪರಮೇಶ್ವರನಾಯ್ಕ ಅಥವಾ ಪುತ್ರ ಪಿ.ಟಿ.ಭರತ್ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಗುಮಾನಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಸಚಿವರು `ಸಾಮಾನ್ಯ ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡುವುದಿಲ್ಲ’ ಎಂದು ಘೋಷಿಸಿ ವೂಹಾಪೊಹಗಳಿಗೆ ತೆರೆ ಎಳೆದಿದ್ದಾರೆ.
`ರಾಜಕಾರಣದ ಗಂಧ-ಗಾಳಿ ಗೊತ್ತಿಲ್ಲದ ಕುಟುಂಬದಿಂದ ಬಂದ ವ್ಯಕ್ತಿ ನಾನು. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯನಾಗಿ ಎರಡು ಬಾರಿ ಶಾಸಕ ಹಾಗೂ ಎರಡು ಬಾರಿ ಸಚಿವನಾಗಿದ್ದೇನೆ. ಇಷ್ಟಕ್ಕೆಲ್ಲ ಹರಪನಹಳ್ಳಿ ತಾಲ್ಲೂಕಿನ ಜನತೆ ನೀಡಿದ ಭಿಕ್ಷೆಯೇ ಕಾರಣ’ ಎಂದರು.
11 ವರ್ಷದ ಬಳಿಕ ಹೈಕಮಾಂಡ್ ಆದೇಶದಂತೆ ಹರಪನಹಳ್ಳಿ ಉಸ್ತುವಾರಿ ವಹಿಸಿಕೊಂಡಿದ್ದೇನೆ. ಪುರಸಭೆ ಚುನಾವಣೆಗೆ ಇರುವ 27 ವಾರ್ಡ್ಗಳಿಗೆ 75 ಅಭ್ಯರ್ಥಿಗಳು ಅರ್ಜಿಸಲ್ಲಿಸಿದ್ದಾರೆ. ಪಕ್ಷದ ನಿಯಮದಂತೆ ಗೆಲ್ಲುವವರ ಸಾಮರ್ಥ್ಯ ಗುರುತಿಸಿ ಟಿಕೆಟ್ ನೀಡಲಾಗುವುದು. ಯಾರಿಗೇ ಟಿಕೆಟ್ ಸಿಕ್ಕರೂ ಅವರ ಗೆಲುವಿಗೆ ಶ್ರಮಿಸಬೇಕು. ಈ ಬಾರಿ ಪುರಸಭೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ದೊರೆಯುವುದು ಖಚಿತ’ ಎಂದು ಭವಿಷ್ಯ ನುಡಿದರು.
ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿ ಕಂಕಣಬದ್ಧನಾಗಿದ್ದೇನೆ. ಬೇಸಿಗೆಯಲ್ಲಿ ನೀರಿನ ತೊಂದರೆ ಆಗದಂತೆ ಬಳ್ಳಾರಿ, ಗದಗ ಜಿಲ್ಲೆಯ ತಾಲ್ಲೂಕುಗಳಿಗೆ ತುಂಗಭದ್ರಾ ನದಿ ನೀರು ಹರಿಸಿದ್ದೇನೆ. ಹರಪನಹಳ್ಳಿಗೆ ಹೈಕ ಸವಲತ್ತು ಕಲ್ಪಿಸಲು ಸಚಿವ ಸಂಪುಟ ಉಪಸಮಿತಿಯಲ್ಲಿ ಬುನಾದಿ ಹಾಕಿ, ಅಂದಿನ ಶಾಸಕ ರವೀಂದ್ರರನ್ನು ಸಿಎಂ ಬಳಿ ಕರೆದುಕೊಂಡು ಹೋಗಿದ್ದೆ. ಆ ನಂತರ
ಸರ್ಕಾರ ಘೋಷಿಸಿತು. ಈಗಲೂ ಉಪವಿಭಾಗ, ಡಿವೈಎಸ್ಪಿ, ಕೃಷಿ ಕಚೇರಿ ಉಳಿಸಿರುವುದಾಗಿ ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ರಾಜಶೇಖರ ಮಾತನಾಡಿ, ಪುರಸಭೆ ಹಿಂದೆ ಎರಡು ಬಾರಿ ಕಾಂಗ್ರೆಸ್ ಆಡಳಿತ ನಡೆಸಿದೆ. ಪಕ್ಷದ ಕಾರ್ಯಕರ್ತರು ವೈಯಕ್ತಿಕ ಗೌರವ ಕಾಪಾಡಿಕೊಳ್ಳುವ ಜತೆಗೆ ಅಭ್ಯರ್ಥಿ ಗೆಲುವಿಗೆ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಬಳ್ಳಾರಿ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಶಿವಯೋಗಿ ಮಾತನಾಡಿ, ಕೆಪಿಸಿಸಿ ಆದೇಶದ ಮೇಲೆ ಸಾಮಾಜಿಕ ನ್ಯಾಯ, ಜನಪರತೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಗುರುತಿಸುತ್ತೇವೆ. ಯಾರು ಮನಸ್ತಾಪ ಮಾಡಿಕೊಳ್ಳದೇ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ದಾವಣಗೆರೆ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಟಿಕೆಟ್ ತಪ್ಪಿದರೆ ಪಕ್ಷ ವಿರೋಧಿ ಕೆಲಸ ಮಾಡಬೇಡಿ. ಗೆದ್ದವರು ಅಧ್ಯಕ್ಷರ ಆಯ್ಕೆಯಲ್ಲಿ ಆಟವಾಡದೇ ಪಕ್ಷಕ್ಕೆ ನಿಷ್ಠೆಯಿಂದಿರಿ ಎಂದು ಹೇಳಿದರು.
ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಎಂ.ಪಿ.ವೀಣಾ ಮಹಾಂತೇಶ್, ಮುಖಂಡರಾದ ಟಿ.ಎಚ್.ಎಂ.ವಿರೂಪಾಕ್ಷಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಭಟ್, ಅಂಜಪ್ಪ, ಪೂಜಾರ ಶಶಿಧರ್, ಹಲಗೇರಿ ಮಂಜಪ್ಪ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಎಸ್.ಮಂಜುನಾಥ, ಬಿ.ಕೆ.ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ .ಪರಶುರಾಮಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಮುಖಂಡರಾದ ಅಂಬ್ಲಿ ಮಂಜುನಾಥ, ಎ.ಎಂ.ವಿಶ್ವನಾಥ್, ಮಲ್ಲಿಸ್ವಾಮಿ, ಉಮಾಪತಿ, ರೆಹಮಾನ್, ಜಾವೇದ್, ವಾಗೀಶ್, ಮತ್ತಿಹಳ್ಳಿ ಅಜ್ಜಪ್ಪ, ಚನ್ನಪ್ಪ, ಬಸವನಗೌಡ, ಕೆಂಚನಗೌಡ್ರು, ವಸಂತಪ್ಪ, ಜಂಬಣ್ಣ, ಇಜಾರಿ ಮಹಾವೀರ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
