ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ..!

ಬೆಂಗಳೂರು

     ದೇಶದಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿ ನಿರುದ್ಯೋಗ ಹೆಚ್ಚಳವಾಗಲು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಪುರಭವನದ ಮುಂಭಾಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸೇರಿದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ ಪ್ರಮಾದದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಆರೋಪಿಸಿದರು.

     ನೋಟ್ ರದ್ದತಿ ನಂತರ ಹಲವು ಕ್ಷೇತ್ರಗಳು ತೀವ್ರ ಸ್ವರೂಪದ ಸಮಸ್ಯೆ ಎದುರಿಸುತ್ತಿವೆ. ದಿನದಿಂದ ದಿನಕ್ಕೆ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ನೋಟುಗಳ ಅಮಾನ್ಯದಿಂದ ಮಧ್ಯಮ ವರ್ಗದವರು, ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ದೂರಿದರು.

     ನೋಟುಗಳ ರದ್ದು ನಿರ್ಧಾರ ಪ್ರಧಾನಿ ಮೋದಿ ಅವರ ಏಕಪಕ್ಷೀಯ ಕ್ರಮ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಇಂತಹ ನಿರ್ಧಾರ ಕೈಗೊಂಡ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಎರಡು ವರ್ಷಗಳಾದರೂ ದೇಶದ ಆರ್ಥಿಕ ಸ್ಥಿತಿ ಚೇತರಿಕೆ ಕಂಡಿಲ್ಲ ಎಂದು ಘೋಷಣೆಗಳನ್ನು ಕೂಗಿದರು.

     ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರ ಸರ್ಕಾರದ ನೀತಿಗಳು ಜನ ವಿರೋಧಿಗಳಾಗಿದ್ದು, ಪ್ರತಿಯೊಬ್ಬರು ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾಗಿಯೇ, ಜನಪರ ನಾವು ಹೋರಾಟ ರೂಪಿಸಿದ್ದೇವೆ ಎಂದರು.

    ಉದ್ಯಮಗಳು ಮುಚ್ಚುತ್ತಿವೆ, ಆಟೋ ಇಂಡಸ್ಟ್ರಿ ಕುಸಿಯುತ್ತಿದೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉದಾಸೀನ ಹೇಳಿಕೆ ನೀಡುತ್ತಾರೆ. ಇದನ್ನು ವಿರೋಧಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.ಅಷ್ಟೇ ಅಲ್ಲದೆ, ಆರ್ಥಿಕ ಹಿಂಜರಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

15ಕ್ಷೇತ್ರಗಳಲ್ಲಿ ಗೆಲುವು

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ಕೇಂದ್ರದ ಜನವಿರೋಧಿ ನೀತಿಗಳಿಂದ ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದರೂ ಅಚ್ಚರಿಯಿಲ್ಲ ಎಂದರು.ಅನರ್ಹ ಶಾಸಕರ ತೀರ್ಪು ಹೊರ ಬಿದ್ದಿಲ್ಲ.ಅಲ್ಲದೆ, 15 ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕನಿಷ್ಟ 12 ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ.ಒಂದು ವೇಳೆ, 15 ಗೆದ್ದರೂ ಆಶ್ಚರ್ಯವಿಲ್ಲ ಎಂದು ಹೇಳಿದರು.

     ಜನರು ಪಕ್ಷಾಂತರಿಗಳನ್ನು ಸಹಿಸಲ್ಲ, ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ.ಈಗಾಗಲೇ, ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯದ ಚುನಾವಣೆಯಲ್ಲಿ ಇದು ಸಾಬೀತಾಗಿದೆ ಎಂದ ಅವರು, ಜನ ಇವರನ್ನು ಸೋಲಿಸಿ ಪಾಠ ಕಲಿಸಬೇಕೆಂದು ಕಾಯುತ್ತಿದ್ದಾರೆ ಎಂದು ಹೇಳಿದರು.

     ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿ ದಿನ ಜಾಹೀರಾತು ನೀಡುತ್ತಿದ್ದಾರೆ.ಅದರಲ್ಲಿಛಲಗಾರ, ಜನ ನಾಯಕ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಯಡಿಯೂರಪ್ಪ ಅವರು ಹಿಂಬಾಗಿಲಿನಿಂದ ಬಂದು, ನಮ್ಮ ಶಾಸಕರನ್ನು ದುಡ್ಡು ನೀಡಿ ಪಡೆದಿದ್ದೀರಿ ಎಂದು ದೂರಿದರು.

ಬಡವರ ನಿರ್ಲಕ್ಷ್ಯ

   ಕೇಂದ್ರದಲ್ಲಿ ಸೂಕ್ತ ಆರ್ಥಿಕ ತಜ್ಞರಿಲ್ಲ, ಆರ್ಥಿಕ ನೀತಿಗಳು ಸರಿಯಾಗಿಲ್ಲ.ಈ ಅಂಶದ ಮೇಲೆ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದೆ. ಬಡವರ ಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.ಇನ್ನೂ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಏನೂ ಗೊತ್ತಿಲ್ಲ.ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

    ರಾಜ್ಯಸಭಾ ಸದಸ್ಯ ಬಿ.ಕೆ.ಹರಿ ಪ್ರಸಾದ್ ಮಾತನಾಡಿ, ಆರ್ ಸಿಇಪಿ ಸೇರಿದಂತೆ ಅನೇಕ ನೀತಿಗಳು ಜಾರಿಯಾದರೆ, ಗ್ರಾಮೀಣ ಜನರು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ. ಹಾಗಾಗಿ, ನಾವು ಜಾಗೃತರಾಗಬೇಕು.ಅಲ್ಲದೆ, ಅವರು ಸುಳ್ಳಿನ ಸರದಾರ. ಇಂತಹ ಪ್ರಧಾನಿಯನ್ನು ನಾವು ಸೋಲಿಸಬಬೇಕು ಎಂದು ಟೀಕಿಸಿದರು.ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರಾದ ರಾಮಲಿಂಗರೆಡ್ಡಿ, ಉಮಾಶ್ರೀ, ರಾಣಿ ಸತೀಶ್,ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಧ್ರುವ ನಾರಾಯಣ, ಕಾಂಗ್ರೆಸ್ ನಾಯಕರಾದ ವಿ.ಆರ್.ಸುದರ್ಶನ್ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದರು

 

Recent Articles

spot_img

Related Stories

Share via
Copy link
Powered by Social Snap