ಚಿತ್ರದುರ್ಗ
ಉದ್ದೇಶ ಪೂರ್ವಕವಾಗಿ ಕಾಂಗ್ರೇಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರ ವಿರುದ್ದ ಪ್ರಕರಣ ದಾಖಲಿಸಿರುವ ಜಿಲ್ಲಾಡಳಿತ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೌನ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಮುಖಂಡರು, ಸರ್ಕಾರ ಪ್ರಕರಣವನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಮನವಿ ಪತ್ರಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಕೆ ತಾಜ್‍ಪೀರ್ ಸರ್ಕಾರ ಅಧಿಕಾರ ಇರುವವರಿಗೆ ಒಂದು ರೀತಿ ಮಾಡಿದರೆ ಅಧಿಕಾರ ಇಲ್ಲದವರಿಗೆ ಮತ್ತೊಂದು ರೀತಿಯಲ್ಲಿ ಮಾಡುತ್ತಿದೆ, ಕಾನೂನು ಪಾಲಿಸಿ ಅನುಮತಿ ಪಡೆದು ಸರಳವಾಗಿ ಮದುವೆ ಮಾಡಿದ ಮಾಜಿ ಶಾಸಕರಿಗೆ ಸರ್ಕಾರ ಜಿಲ್ಲಾಡಳಿತದಿಂದ ಕಾನೂನು ಮೀರಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಆದರೆ ಸಚಿವರಾಗಿ ಇದ್ದುಕೊಂಡು ಅದರಲ್ಲೂ ಆರೋಗ್ಯ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ಗೆ ಬಾಗಿನ ಅರ್ಪಣೆಯ ನೆಪದಲ್ಲಿ ಸಾವಿರಾರು ಜನರನ್ನು ಗುಂಪು ಮಾಡಿಕೊಂಡು ಪ್ರತಿಯೊಬ್ಬರು ಮಾಸ್ಕ್ ಧರಿಸದೇ ಮೆರವಣಿಗೆ ಮಾಡಿಕೊಂಡು ಬೃಹತ್ ಹಾರ ತುರಾಯಿಗಳ ಸನ್ಮಾನ ಮಾಡಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದ್ದಾರೆ ಆದರೆ ಈ ಕುರಿತು ಜಿಲ್ಲಾಡಳಿತ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.
ಚಿತ್ರದುರ್ಗ ಜಿಲ್ಲಾಡಳಿತ ಲಾಕ್‍ಡೌನ್ ಸಂದರ್ಭದಲ್ಲಿ ಗೋವಿಂದಪ್ಪನವರ ಮಗನ ಸರಳ ಮದುವೆಯ ಒಂದು ವಿಷಯವನ್ನು ದುರುದ್ದೇಶ ಇಟ್ಟುಕೊಂಡು ಬಿಜೆಪಿ ಸರ್ಕಾರ ಸೂಚನೆ ಮೇರೆಗೆ ಕೇಸನ್ನು ದಾಖಲಿಸಿದೆ ಆದರೆ ಶ್ರೀರಾಮುಲು ಸಚಿವರಾಗಿರುವ ಕಾರಣ ಅವರು ಮಾಡಿದ ಕಾರ್ಯಕ್ರಮದ ಬಗ್ಗೆ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಟೀಕಿಸಿದರು
ಗೋವಿಂದಪ್ಪನವರು ತಮ್ಮ ಮಗನ ಮದುವೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್ ಡೌನ್ ನಿಯಮಗಳನ್ನು ಪಾಲಿಸಿದ್ದಾರೆ.
ಆದರೆ ಪೊಲಿಸರು ಹಾಗೂ ಜಿಲ್ಲಾಡಳಿತ ಪ್ರಕರಣ ದಾಖಲಿಸುವ ಮೂಲಕ ಪಕ್ಷಪಾತ ಎಸಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಬಾಗಿನ ಅರ್ಪಿಸುವ ವೇಳೆ ಸಾವಿರಾರು ಜನರನ್ನು ಸೇರಿಸಿ ದೊಡ್ಡ ಜಾತ್ರೆ ಮಾಡಿದ್ದಾರೆ. ಅದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಣ್ಣಿಗೆ ಕಾಣಲಿಲ್ಲವೇ, ಅವರ ಮೇಲೆ ಯಾಕೆ ಪ್ರಕರಣ ದಾಖಲಿಸಲಿಲ್ಲ, ಇದು ತಾರತಮ್ಯ ಅಲ್ಲವೇ ಎಂದು ಪ್ರಶ್ನಿಸಿದ ಮುಖಂಡರು, ಪ್ರಕರಣ ದಾಖಲಿಸಿದರೆ ಇಬ್ವರ ಮೇಲೂ ದಾಖಲಿಸಿ ಎಂದು ಒತ್ತಾಯಿಸಿಬಿಜೆಪಿ ಆಡಳಿತದಲ್ಲಿ ಸತ್ತ ಹೆಣದ ಮೇಲೂ ಪ್ರಕರಣ ದಾಖಲಿಸುತ್ತಾರೆ. ದೇಶಾದಾದ್ಯಂತ ದ್ವೇಷದ ರಾಜಕಾರಣವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಹಾಗೆಯೇ ಚಿತ್ರದುರ್ಗದಲ್ಲಿಯೂ ಮಾಡಿದೆ. ಜನತಂತ್ರ ವ್ಯವಸ್ಥೆ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಕುಮ್ಮಕ್ಕು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಡಿ.ಸುಧಾಕರ್, ಮುಖಂಡರಾದ ಎಮ.ಅಜ್ಜಪ್ಪ, ರಂಜನಮೂರ್ತಿ, ಡಿ.ಮೈಲಾರಪ್ಪ, ಚೋಟು, ಲಕ್ಷ್ಮಿಕಾಂತ, ಸಂಪತ್ ಕುಮಾರ್, ಮಹಬೂಬ್ ಖಾತೂನ್ ಚಾಂದ್‍ಪೀರ್, ಎನ್,ಡಿ.ಕುಮಾರ್, ಮೋಕ್ಷಾರುದ್ರಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ