ಬೆಂಗಳೂರು
ಕೃಷಿಕರು ಕಷ್ಟ ಪಟ್ಟು ದುಡಿದ ಹಣವನ್ನು ಸಾಲ ಮಾಡಿ ಓಡಿಹೋಗುವವರಿಗೆ ನೀಡುವ ಸಲುವಾಗಿ ಕರ್ನಾಟಕದ ವಿಜಯಾ ಬ್ಯಾಂಕ್ ಅನ್ನು ಕೇಂದ್ರ ಸರ್ಕಾರ ಬರೋಡಾ ಬ್ಯಾಂಕ್ ಜತೆ ವಿಲೀನಗೊಳಿಸಿದ್ದು ತಕ್ಷಣವೇ ತನ್ನ ನಿರ್ಧಾರವನ್ನು ಅದು ಕೈ ಬಿಡಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರು ಇಂದಿಲ್ಲಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಐವಾನ್ ಡಿಸೋಜಾ ಮತ್ತಿತರರು,ರಾಜ್ಯದಲ್ಲಿ ಎಂಭತ್ತೈದು ವರ್ಷಗಳ ಹಿಂದೆ ಸ್ಥಾಪನೆಯಾದ ವಿಜಯಾ ಬ್ಯಾಂಕ್ ಸಂಪೂರ್ಣವಾಗಿ ಕೃಷಿಕರ ಬ್ಯಾಂಕ್ ಎಂದೇ ಹೆಸರು ಮಾಡಿದೆ.ನಿರಂತರವಾಗಿ ಲಾಭದಲ್ಲಿದೆ.ಆದರೆ ಲಾಭದಲ್ಲಿರುವ ಈ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಬ್ಯಾಂಕ್ ಜತೆ ವಿಲೀನ ಮಾಡಲಾಗಿದೆ.ಇದು ಸರಿಯಲ್ಲ ಎಂದು ಹೇಳಿದರು.
ಕೃಷಿಕರಿಗೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಸಾಲ ನೀಡುವ ಬ್ಯಾಂಕು ಇದು.ಒಟ್ಟು 2700 ಶಾಖೆಗಳನ್ನು ಹೊಂದಿರುವ ವಿಜಯಾ ಬ್ಯಾಂಕ್ ಅನ್ನು ಬರೋಡಾ ಬ್ಯಾಂಕ್ ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ಹಿಂದೆ ಷಡ್ಯಂತ್ರವಿದೆ.ಕೃಷಿಕರು ಕಷ್ಟ ಪಟ್ಟು ದುಡಿದ ಹಣವನ್ನು ಸಾಲ ಎತ್ತಿಕೊಂಡು ಓಡಿ ಹೋಗುವ ನೀರವ್ ಮೋದಿ ತರದ ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಕೆಲಸ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವನ್ನು ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯದಿಂದ ಮಂತ್ರಿಗಳಾಗಿರುವವರು ಒಗ್ಗೂಡಿ ಪ್ರತಿಭಟಿಸಬೇಕು.ಮತ್ತು ತನ್ನ ನಿರ್ಧಾರದಿಂದ ಅದು ಹಿಂದೆ ಸರಿಯುವಂತೆ ಮಾಡಬೇಕು.ಈ ವಿಷಯದಲ್ಲಿ ರಾಜ್ಯದ ಸಂಸದರು,ಮಂತ್ರಿಗಳು ಒಗ್ಗಟ್ಟು ತೋರಿಸದೆ ಹೋದರೆ ಅವರ ವಿರುದ್ಧವೇ ನಾವು ಹೋರಾಟ ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂಬಂಧ ಮುಖ್ಯಮಂತ್ರಿಗಳಿಂದಲೂ ದೇಶದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಸಿ ಬರೋಡಾ ಬ್ಯಾಂಕ್ ಜತೆ ವಿಜಯಾ ಬ್ಯಾಂಕ್ ವಿಲೀನವನ್ನು ಕೈ ಬಿಡುವಂತೆ ಒತ್ತಡ ಹೇರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.ಲಾಭದಲ್ಲಿರುವ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಬ್ಯಾಂಕುಗಳ ಜತೆ ವಿಲೀನಗೊಳಿಸಿ ಖಾಯಂ ಆಗಿ ವಿಜಯಾ ಬ್ಯಾಂಕ್ ಎಂಬ ಹೆಸರನ್ನು ಮುಚ್ಚುತ್ತಿರುವ ಕೇಂದ್ರದ ಕ್ರಮ ಸರಿಯಲ್ಲ ಎಂದು ಅವರು ವಾದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
