ದಾವಣಗೆರೆ
ಮಹಾತ್ಮ ಗಾಂಧೀಜಿ ಅವರ ಪ್ರತಿಕೃತಿಗೆ ಗುಂಡಿಟ್ಟ, ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಮತ್ತು ಆ ಸಂಘಟನೆಯ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಇಲ್ಲಿನ ಪಾಲಿಕೆಯ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಪ್ರತಿಕೃತಿಗೆ ಗುಂಡಿಟ್ಟ ಹಿಂದೂ ಮಹಾಸಭಾ ಸಂಘಟನೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ, ಇಡೀ ವಿಶ್ವವೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 71ನೇ ಪುಣ್ಯತಿಥಿಯನ್ನು ಹುತ್ತಾತ್ಮರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಲಿಘಡ್‍ದಲ್ಲಿ ಹಿಂದು ಮಹಾಸಭಾ ಸಂಘಟನೆಯ ಪ್ರಧಾನಕಾರ್ಯದರ್ಶಿ ಪೂಜಾ ಶಕುನ್ ಹಾಗೂ ಆ ಸಂಘಟನೆಯ ಸುಮಾರು 15 ಜನ ಸದಸ್ಯರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಕೃತಿಗೆ ಗುಂಡೇಟು ಹೊಡೆದು ಗಾಂಧೀ ದೇಹದಿಂದ ರಕ್ತ ಬರುವಂತೆ ಮರು ಸೃಷ್ಟಿಸಿ ವಿಕೃತಿ ಮರೆದಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ, ಇದೇ ಸಂದರ್ಭದಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೆ, ಮಹಾತ್ಮ ನಾಥೂರಾಮ್ ಗೋಡ್ಸ್ ಅಮರ್ ರಹೇ ಎಂಬ ಘೋಷಣೆ ಕೂಗಿದ್ದಾರೆ. ಇದೆಲ್ಲದರ ಹಿಂದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಯೋಗಿ ಸರ್ಕಾರದ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
ಗೋಡ್ಸೆ ಈ ದೇಶದ ಮೊದಲ ಮೊದಲ ಭಯೋತ್ಪಾದಕನ್ನಾಗಿದ್ದಾನೆ. ನರೇಂದ್ರ ಮೋದಿಯವರು ಗಾಂಧೀ ಪ್ರತಿಮೆಗೆ ನಾಟಕೀಯವಾಗಿ ನಮಿಸುತ್ತಾರೆ. ಇಂದಿಗೂ ಆರ್.ಎಸ್.ಎಸ್. ಕೇಂದ್ರ ಕಛೇರಿ ನಾಗಪೂರದಲ್ಲಿ ಗಾಂಧಿ ಭಾವಚಿತ್ರ ಇಲ್ಲ ಮತ್ತು ರಾಷ್ಟ್ರಧ್ವಜವಿಲ್ಲ. ಮೋದಿಯವರ ಅನುಯಾಯಿಗಳು ಗಾಂಧೀ ಪ್ರತಿಮೆಗೆ ಗುಂಡೇಟು ಹೊಡೆಯುತ್ತಿದ್ದಾರೆ. ದೇಶದಲ್ಲಿ ಆಂತರಿಕ ಭದ್ರತೆಗೆ ಧಕ್ಕೆ ಬಂದಿದೆ. ಇದಕ್ಕೆಲ್ಲಾ ಮೋದಿ ದುರಾಡಳಿತವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಗಾಂಧಿ ಪ್ರತಿಕೃತಿಗೆ ಗುಂಡೇಟು ಹೊಡೆದು ನಾಲ್ಕೈದು ದಿನ ಕಳೆದರೂ, ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೇಂದ್ರ ಸರ್ಕಾರ ದುರಾಡಳಿತದಿಂದ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮೊನ್ನೆ ಮಂಡಿಸಿದ ಕೇಂದ್ರ ಬಜೆಟ್ ಸುಳ್ಳಿನಿಂದ ಕೂಡಿದೆ. ರೈತರಿಗೆ ಅಪಮಾನ ಮಾಡಲಾಗಿದೆ. ಬರಲಿರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಸೋಲು ಗ್ಯಾರೆಂಟಿ. ಹಾಗಿದ್ದರೂ ಇನ್ನು ಹತ್ತು ವರ್ಷ ಅಧಿಕಾರ ನಡೆಸುವ ಭ್ರಮೆಯಲ್ಲಿ ಬಜೆಟ್ ಮಂಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಗಾಂಧೀಜಿ ಪುಣ್ಯತಿಥಿಯೆಂದು ಒಬ್ಬ ಮಹಿಳೆ ನಡೆದುಕೊಂಡ ರೀತಿ ಹೆಣ್ಣುಕುಲಕ್ಕೆ ಅಪಮಾನವಾಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಉಪಮೇಯರ್ ಕೆ. ಚಮನ್ ಸಾಬ್, ಪಾಲಿಕೆ ಸದಸ್ಯ ಎಂ. ಹಾಲೇಶ್, ಕಾಂಗ್ರೆಸ್ ಮುಖಂಡರಾದ ಇಮ್ತಿಯಾಜ್ ಹುಸೇನ್, ಎಸ್. ಮಲ್ಲಿಕಾರ್ಜುನ್, ಎ. ನಾಗರಾಜ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಪಿ. ರಾಜಕುಮಾರ್, ಕೆ.ಜಿ. ಶಿವಕುಮಾರ್, ಶಾಮನೂರು ಟಿ. ಬಸವರಾಜ್, ಅಯೂಬ್ ಪೈಲ್ವಾನ್, ಸೈಯದ್ ಖಾಲಿದ್, ಶ್ರೀಕಾಂತ್ ಬಗೇರ, ಅಲ್ಲಾವಲ್ಲಿ ಘಾಜಿಖಾನ್, ಹೆಚ್. ಜಯಣ್ಣ, ಅಣಜಿ ಅಂಜನಪ್ಪ, ಮೈನ್ನೂದ್ದೀನ್, ಮುಜಾಯಿದ್, ಲಿಯಾಖತ್ ಅಲಿ, ಅಬ್ದುಲ್ ಜಬ್ಬಾರ್, ಟೋಲಿ ಚಂದ್ರು, ಖಾಜಿ ಖಲೀಲ್, ಹರೀಶ್, ಸಾಧೀಕ್ ಖಾನ್, ನವೀನ್, ಅಯಾಜ್, ಡಿ. ಶಿವಕುಮಾರ್, ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
