ಬೆಂಗಳೂರು
ಪಂಚರಾಜ್ಯಗಳ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಬಲವರ್ಧಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಜೆಡಿಎಸ್ ಮೇಲೆ ಸವಾರಿ ಮಾಡಲು ಮುಂದಾಗಿದೆ. ಮತ್ತೊಂದೆಡೆ ಜೆಡಿಎಸ್ ಕೂಡ ಕಾಂಗ್ರೆಸ್‍ಗೆ ತಿರುಗೇಟು ನೀಡಲು ಕಾರ್ಯೋನ್ಮುಖವಾಗಿದೆ. ನಂಬಿಕೆ ಇದೀಗ ಅಪನಂಬಿಕೆಯಾಗಿ ಪರಿವರ್ತನೆಯಾಗುತ್ತಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಸಹ ವ್ಯಕ್ತವಾಗಿದೆ.
ಕಾಂಗ್ರೆಸ್‍ನ ವರ್ತನೆ ಜೆಡಿಎಸ್‍ಗೆ ಕಿರಿಕಿರಿ ಉಂಟು ಮಾಡಿದ್ದು, ಅಗತ್ಯಬಿದ್ದರೆ ಸರ್ಕಾರದಿಂದ ಹೊರ ಬರಲು ಸಿದ್ಧ ಎನ್ನುವ ರೀತಿಯಲ್ಲಿ ಜಾತ್ಯತೀತ ಜನತಾದಳ ಮುಖಂಡರು ಮಾತನಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡುತ್ತಿರುವುದನ್ನು ಇದು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿದೆ. ಕಾಂಗ್ರೆಸ್ ನಾಯಕರ ನಡೆಯಿಂದ ಮುಖ್ಯಮಂತ್ರಿ ಕುಮಾರ ಸ್ವಾಮಿ ಬೇಸರಗೊಂಡಿದ್ದರೆ, ರೇವಣ್ಣ ಹೇಳಿಕೆಯಿಂದ ಕಾಂಗ್ರೆಸ್ ನಾಯಕರು ಸಿಡಿಮಿಡಿಗೊಂಡಿದ್ದಾರೆ. ಪರಸ್ಪರ ಟೀಕೆ ಜತೆಗೆ ಅಪನಂಬಿಕೆಯೂ ಹೆಚ್ಚಾಗುತ್ತಿದೆ.
ಡಾ. ಜಿ. ಪರಮೇಶ್ವರ್ ಅವರನ್ನು ಸಮರ್ಥಿಸಿಕೊಂಡು ಜೆಡಿಎಸ್ ಮುಖಂಡ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿರುವುದು, ಅವರ ಹೇಳಿಕೆಗೆ ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ ನೀಡಿರುವ ತಿರುಗೇಟು, ದಲಿತ ಸಮುದಾಯದ ಆರ್.ಬಿ. ತಿಮ್ಮಾಪುರ್ ಕೊಟ್ಟಿರುವ ಪ್ರತಿಕ್ರಿಯೆ ” ಇಲ್ಲಿ ಏನೋ ನಡೆಯುತ್ತಿದೆ ” ಎನ್ನುವುದನ್ನು ಧ್ವನಿಸುತ್ತಿದೆ.
ಜತೆಗೆ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುವ ಆತಂಕ ಸಹ ವ್ಯಕ್ತವಾಗುತ್ತಿದೆ. ಖಾತೆಗಳ ಹಂಚಿಕೆ, ನಿಗಮ, ಮಂಡಳಿಗಳಂತಹ ರಾಜಕೀಯ ನೇಮಕಾತಿ ವಿಚಾರದಲ್ಲಿ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರುತ್ತಿರುವ ಬೆಳವಣಿಗೆಯಿಂದ ಜೆಡಿಎಸ್ ನಾಯಕರು ರೋಸಿ ಹೋಗಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ನಾಯಕರು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೂಚನೆಗೂ ಕ್ಯಾರೆ ಎನ್ನದೇ ವರ್ತಿಸುತ್ತಿರುವ ಬಿಗಿ ಧೋರಣೆಗೆ ಕಾಂಗ್ರೆಸ್‍ನಲ್ಲೂ ಅಸಮಾಧಾನ ಮೊಳೆಯುತ್ತಿದೆ. ಪರಸ್ಪರ ಅಪನಂಬಿಕೆ ಹೆಚ್ಚುತ್ತಿದ್ದು, ಇದು ಮುಂಬರುವ ಲೋಕಸಭಾ ಚುನಾವಣೆಯ ಮೈತ್ರಿ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳು ಕಾಣಿಸಿಕೊಂಡಿವೆ.
ಒಂದೆಡೆ ಬಿಜೆಪಿ ವರ್ಚಸ್ಸು ಕಳೆದುಕೊಳ್ಳುತ್ತಿದೆ. ಬಿಜೆಪಿಯೇತರ ಪಕ್ಷಗಳು ಲೋಕಸಭೆ ಚುನಾವಣೆಗೆ ಒಗ್ಗೂಡುತ್ತಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸಿದ ನಂತರ ರಾಜ್ಯ ಕಾಂಗ್ರೆಸ್ ನಾಯಕರ ವರ್ತನೆ ಬದಲಾಗುತ್ತಿದೆ. 2018 ರ ಅತಂತ್ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಬೇಷರತ್ತಾಗಿ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಿತು. ಆದರೀಗ ಕಾಂಗ್ರೆಸಿಗೆ ಜೆಡಿಎಸ್ ಬೇಡವಾದಂತೆ ಕಾಣಿಸುತ್ತಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆ ಸಾಧಿಸಬೇಕಾಗಿದ್ದ ಸಿದ್ದರಾಮಯ್ಯ ಮೈತ್ರಿ ಸರ್ಕಾವನ್ನು ಕಟ್ಟಿ ಹಾಕಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಆದರೂ ಸಿದ್ದರಾಮಯ್ಯ ಒಂದಲ್ಲಾ ಒಂದು ರೀತಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ತಮ್ಮ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಸಂಪುಟ ಪುನಾರಚನೆ ಸದ್ಯಕ್ಕೆ ಬೇಡ ಎಂದು ಕುಮಾರಸ್ವಾಮಿ ಹೇಳಿದ್ದರೂ ಕೂಡ ಸಿದ್ದರಾಮಯ್ಯ ಹಠಕ್ಕೆ ಬಿದ್ದು ಕಾಂಗ್ರೆಸ್ ಪಾಲಿನ ಸಚಿವ ಸ್ಥಾನಗಳನ್ನು ತುಂಬಿದರು. ಜತೆಗೆ ತಮಗೆ ವಿರುದ್ಧವಾಗಿ ಖಾತೆ ಹಂಚಿಕೆ ಮಾಡಿದ್ದಾರೆ. ಇನ್ನೊಂದೆಡೆ ಕುಮಾರಸ್ವಾಮಿ ಒಪ್ಪಿಗೆಯಿಲ್ಲದೇ ರಾಜಕೀಯ ಕಾರ್ಯದರ್ಶಿಗಳನ್ನು ಸಹ ನೇಮಕ ಮಾಡಲಾಗಿದೆ. ಇವೆಲ್ಲಾ ಜೆಡಿಎಸ್‍ನ ನಾಯಕರ ತಾಳ್ಮೆ ಕೆಣಕುವ ಪ್ರಯತ್ನ ಎನ್ನಲಾಗಿದೆ.
ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಹೋರಾಟದ ಸಮಯದಲ್ಲಿ ಸರ್ಕಾರದ ಬೆನ್ನಿಗೆ ನಿಲ್ಲಬೇಕಾಗಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಧಿವೇಶನದಿಂದ ದೂರ ಉಳಿದಿದ್ದರು. ನಂತರ ರಂಗ ಪ್ರವೇಶಿಸಿ ತಮ್ಮ ಪ್ರತಾಪ ತೋರಿಸುತ್ತಿದ್ದಾರೆ.
ಆರಂಭದಲ್ಲಿ ಕಾಂಗ್ರೆಸ್ ನಾಯಕರು ಉತ್ತಮವಾಗಿ ಸಹಕಾರ ನೀಡಿದ್ದರು. ಈಗ ಎಲ್ಲದಕ್ಕೂ ಷರತ್ತು ವಿಧಿಸುತ್ತಿದ್ದಾರೆ. ಪರಮೇಶ್ವರ್ ಬಳಿಯಿದ್ದ ಗೃಹ ಖಾತೆಯನ್ನು ಬದಲಾಯಿಸಿ ಸಿದ್ದರಾಮಯ್ಯ ಆಪ್ತ ಎಂ.ಬಿ.ಪಾಟೀಲರಿಗೆ ನೀಡಲಾಗಿದೆ. ಹೀಗಾಗಿ ಈ ಎಲ್ಲ ಬೆಳವಣಿಗೆಗಳು ಕುಮಾರಸ್ವಾಮಿ ಅಸಮಾಧಾನಕ್ಕೆ ಕಾರಣವಾಗಿದೆ.
ಮೊದಲಿನಿಂದಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ಬಾಂಧವ್ಯ ಅಷ್ಟಕ್ಕಷ್ಟೆ. ಸಮ್ಮಿಶ್ರ ಸರ್ಕಾರ ರಚನೆಯ ಆರಂಭದಲ್ಲಿ ಸಿದ್ದರಾಮಯ್ಯ ಕಾಂಗ್ರೆಸಿನಲ್ಲಿ ಮೂಲೆಗುಂಪಾಗುತ್ತಾರೆ ಎನ್ನಲಾಗುತ್ತಿತ್ತಾದರೂ ನಂತರ ಪಕ್ಷದಲ್ಲಿ ಹಿಡಿತ ಸಾಧಿಸುವಲ್ಲಿ ಸಫಲರಾದರು. ಇದನ್ನೇ ಮುಂದಿಟ್ಟುಕೊಂಡು ಕುಮಾರಸ್ವಾಮಿ ಅವರ ಪ್ರತಿಯೊಂದು ನಡೆ, ನಿರ್ಧಾರಕ್ಕೂ ಸಿದ್ದರಾಮಯ್ಯ ಅಡ್ಡಗಾಲಾಗುತ್ತಿದ್ದಾರೆ.
ಈಗ ಪರಮೇಶ್ವರ್ ಅವರನ್ನು ಗೃಹಖಾತೆಯಿಂದ ಇಳಿಸಿದ್ದರ ಆರೋಪ ಸಚಿವ ಹೆಚ್.ಡಿ.ರೇವಣ್ಣ ಮೇಲೆ ಹೊರಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಖುದ್ದು ರೇವಣ್ಣ, ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳಿಂದಲೇ ಒಂದು ದಿನ ಕಾಂಗ್ರೆಸ್ ಪಕ್ಷ ತೊಂದರೆಗೆ ಸಿಲುಕುವ ಸ್ಥಿತಿ ತಲೆದೋರಬಹುದು ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾಳ್ಮೆಯಿರುವವರೆಗೆ ಮಾತ್ರ ಕಾಂಗ್ರೆಸಿನ ವರ್ತನೆಯನ್ನು ಸಹಿಸಿಕೊಳ್ಳುತ್ತಾರೆ ಎಂದು ರೇವಣ್ಣ ಹೇಳಿಕೆ ನೀಡುವ ಮೂಲಕ ಪೆÇರೋಕ್ಷವಾಗಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.
ಈ ಎಲ್ಲ ಬೆಳವಣಿಗೆಯನ್ನು ನೋಡಿದರೆ ಲೋಕಸಭೆ ಚುನಾವಣೆ ವೇಳೆಗೆ ಇದು ಇನ್ನಷ್ಟು ಪ್ರಕೋಪಕ್ಕೆ ಹೋಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ. ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಾಬಲ್ಯವಿರುವ ಭಾಗಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಹಾಕುವ ಜವಾಬ್ದಾರಿಯನ್ನು ದೇವೇಗೌಡ ಮತ್ತು ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ವಹಿಸಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರವೂ ಸಹ ಎರಡೂ ಪಕ್ಷಗಳಲ್ಲಿ ಮತ್ತಷ್ಟು ತಲೆಬಿಸಿ ತಂದೊಡ್ಡಬಹುದು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸಿನ ಬದಲಾದ ನಡೆಯಿಂದ ಕುಮಾರಸ್ವಾಮಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಭೆ, ಸಮಾರಂಭಗಳಲ್ಲಿ ಭಾವೋದ್ವೇಗದಿಂದ ಮಾತನಾಡುತ್ತಿದ್ದಾರೆ. ತಾವು ಸಾಂದರ್ಭಿಕ ಶಿಶು, ತಂತಿಯ ಮೇಲೆ ನಡಿಗೆ ಹೀಗೆ ಏನೇನೋ ಹೇಳುತ್ತಿದ್ದಾರೆ. ತಮಗೆ ಮುಖ್ಯಮಂತ್ರಿ ಹುದ್ದೆಯೇ ಬೇಡ ಎನ್ನುವ ರೀತಿಯಲ್ಲಿ ಮಾತನಾಡುವುದನ್ನು ಸಹ ಅಲ್ಲಿಲ್ಲಿ ನೋಡುತ್ತಿದ್ದೇವೆ. ರಾಹುಲ್ ಗಾಂಧಿ ಆಶೀರ್ವಾದ, ಕಾಂಗ್ರೆಸಿನ ಋಣದಲ್ಲಿ ಎಂಬೆಲ್ಲ ಹೇಳಿಕೆಗಳು ಕುಮಾರ ಸ್ವಾಮಿ ಡಿಸ್ಟರ್ಬ್ ಆಗಿರುವುದನ್ನು ಸೂಚಿಸುತ್ತದೆ. ಇದನ್ನೇ ಮುಂದಿಟ್ಟುಕೊಂಡು ಸರ್ಕಾರ ಹೋದರೂ ಪರವಾಗಿಲ್ಲ ಎಂದು ಕಾಂಗ್ರೆಸ್ಸಿಗರ ನಿದ್ದೆ ಕೆಡಿಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಇದು ಯಾವ ತಿರುವು ಪಡೆಯುತ್ತದೆಯೋ ನೋಡಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ