ಬೆಂಗಳೂರು
ಸರ್ಕಾರ ಪತನವಾಗಬಾರದು ಎಂದರೆ ಲಿಂಗಾಯತ ಮತದಾರರು ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವ ಪಕ್ಷಕ್ಕೂ ಮತ ನೀಡಬಾರದು ಎಂದಿರುವ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಇಂದಿಲ್ಲಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಈ ಸಂಬಂಧ ಏಕಕಾಲಕ್ಕೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಕೆಪಿಸಿಸಿ ಅದೇ ಕಾಲಕ್ಕೆ ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ತರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಆಯೋಗದ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದೆ.ಬೆಳಗಾಂ ಜಿಲ್ಲೆ ಗೋಕಾಕ್ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ,ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬೇಕು ಎಂದರೆ ಲಿಂಗಾಯತ ಸಮುದಾಯದ ಮತಗಳು ಒಗ್ಗೂಡಬೇಕು.ಭಿನ್ನಾಭಿಪ್ರಾಯ ಮರೆತು ಸಮುದಾಯದ ಮತಗಳು ಬಿಜೆಪಿಗೆ ದಕ್ಕಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಒಂದು ವೇಳೆ ಲಿಂಗಾಯತ ಸಮುದಾಯದ ಮತಗಳು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಹೋಗಿ ಬಿಜೆಪಿ ಸೋಲಿಗೆ ಕಾರಣವಾದರೆ ಸರ್ಕಾರ ಉಳಿಯುವುದಿಲ್ಲ ಎಂದು ಕೂಡಾ ಯಡಿಯೂರಪ್ಪ ಅವರು ಬಹಿರಂಗವಾಗಿ ಹೇಳಿದ್ದಾರೆ.ಹೀಗೆ ಜಾತಿ,ಸಮುದಾಯಗಳನ್ನು ನಿರ್ದಿಷ್ಟವಾಗಿ ಉದ್ದೇಶಿಸಿ ಯಡಿಯೂರಪ್ಪ ಮಾತನಾಡಿರುವುದು ಪ್ರಜಾಪ್ರತಿನಿಧಿ ಕಾಯ್ದೆಯಡಿ ಅಪರಾಧ.ಹಾಗೆಯೇ ಭಾರತೀಯ ದಂಡಸಂಹಿತೆಯಡಿಯಲ್ಲೂ ಅಪರಾಧ.
ಇದೇ ಯಡಿಯೂರಪ್ಪ ಅವರು ಮತ್ತೊಂದು ಕಡೆ ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಲಕ್ಷ್ಮಣ ಸವದಿ ಅವರು ಪೂರ್ಣಾವಧಿ ಕಾಲ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ.ಇದು ಕೂಡಾ ಲಕ್ಷ್ಮಣ ಸವದಿ ಅವರನ್ನು ಒಲಿಸಲು ಪಂಚಮಸಾಲಿ ಲಿಂಗಾಯತರ ಮೇಲೆ ಬೀರಿದ ಪ್ರಭಾವ.
ಹೀಗೆ ಜಾತಿ,ಉಪಜಾತಿಗಳ ಆಧಾರದ ಮೇಲೆ ಮತ ಕೇಳುವುದು ಅಪರಾಧ.ಉಪಚುನಾವಣೆ ನಡೆಯುತ್ತಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯ ಗಣನೀಯ ಪ್ರಮಾಣದಲ್ಲಿದೆ.ಆ ಸಮುದಾಯದ ಮೇಲೆ ಪ್ರಭಾವ ಬೀರಲು ಯಡಿಯೂರಪ್ಪ ಅವರು ಆಡಿರುವ ಮಾತು ಸರಿಯಲ್ಲ.ಹೀಗಾಗಿ ಚುನಾವಣಾ ಆಯೋಗ ಅವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಒತ್ತಾಯಿಸಿದೆ.
ಪ್ರತಿಭಟನೆ
ಇದೇ ಕಾಲಕ್ಕೆ ಕೆಪಿಸಿಸಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಆರೋಪ ಮಾಡಿದರು.ಬಿಜೆಪಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಚುನಾವಣಾ ಆಯೋಗಕ್ಕೆ ಧಿಕ್ಕಾರ,ಧಿಕ್ಕಾರ ಎಂದು ಘೋಷಣೆ ಮೊಳಗಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಪಾತದ ಧೋರಣೆಯಿಂದ ಚುನಾವಣಾ ಆಯೋಗ ವರ್ತಿಸುತ್ತಿದೆ ಎಂದು ದೂರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








