ದಾವಣಗೆರೆ:
ಮಹಾನಗರ ಪಾಲಿಕೆಯ 45 ಸ್ಥಾನಗಳಲ್ಲಿ 40ಕ್ಕೂ ಹೆಚ್ಚು ಸ್ಥಾನ ಪಡೆದು ಕಾಂಗ್ರೆಸ್ ಮತ್ತೆ ಪಾಲಿಕೆಯನ್ನು ವಶಪಡಿಸಿಕೊಳ್ಳಲಿದೆ ಎಂದು ಮಾಜಿ ಸಚಿವ, ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಇನ್ನೂ ಎರಡು, ಮೂರು ದಿನಗಳಲ್ಲಿ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳ ಸಮ್ಮುಖದಲ್ಲಿ ಸಭೆ ನಡೆಸಿ, ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಇಡೀ ರಾಜ್ಯದಲ್ಲೇ ದಾವಣಗೆರೆಯಲ್ಲಿ ಮಾದರಿಯಾಗಿ ಅಭಿವೃದ್ಧಿಯಾಗಿದ್ದು, ಯಾವುದೇ ಜಿಲ್ಲಾ ಕೇಂದ್ರವೂ ಕಾಣದಷ್ಟು ಅನುದಾನವನ್ನು ತಂದು ಅಭಿವೃದ್ಧಿ ಕೆಲಸ ಮಾಡಿದ್ದಂತಹ ಎಸ್.ಎಸ್. ಮಲ್ಲಿಕಾರ್ಜುನ್ ಅವವನ್ನು ಉತ್ತರ ಕ್ಷೇತ್ರದ ಮತದಾರರು ಕೈ ಬಿಟ್ಟಿರುವುದು ಅತ್ಯಂತ ಬೇಸರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಉತ್ತರ ಕ್ಷೇತ್ರದ ಚುನಾವಣೆಯಲ್ಲಿ ಎದುರಾಳಿಯ ಠೇವಣಿ ಕಳೆದು ಹೆಚ್ಚು ಮತಗಳ ಅಂತರದಲ್ಲಿ ಮಲ್ಲಿಕಾರ್ಜುನ್ ಅವರನ್ನು ಮತದಾರರು ಗೆಲ್ಲಿಸಬೇಕಿತ್ತು. ಅಷ್ಟೊಂದು ಅಭಿವೃದ್ಧಿ ಕಾರ್ಯವನ್ನು ದಾವಣಗೆರೆಯಲ್ಲಿ ಅವರು ಕೈಗೊಂಡಿದ್ದಾರೆ ಎಂದ ಅವರು, ದಾವಣಗೆರೆ ಮಹಾನಗರ ಪಾಲಿಕೆಗೆ ನ.12ರಂದು ನಡೆಯುವ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನಮ್ಮ ಪಕ್ಷವನ್ನು ಪಾಲಿಕೆಯಲ್ಲಿ ಅಧಿಕಾರಕ್ಕೆ ತರಬೇಕು. ಉತ್ತರ ಕ್ಷೇತ್ರದ ಚುನಾವಣೆಯಲ್ಲಿ ಮಾಡದ ತಪ್ಪನ್ನು ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಮತದಾರರು ಮಾಡಬಾರದು ಎಂದು ಮನವಿ ಮಾಡಿದರು.
ಹತ್ತಿದ ಏಣಿ ಮರೆಯೊ ಬಿಜೆಪಿ:
ಅನರ್ಹ ಶಾಸಕರಿಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಇದರಿಂದಲೇ ಬಿಜೆಪಿಯವರು ಹತ್ತಿದ ಏಣಿಯನ್ನೇ ಒದೆಯುವಂತಹ ಮನಸ್ಥಿತಿಯವರು ಎಂಬುದು ಸ್ಪಷ್ಟವಾಗುತ್ತದೆ. ಹತ್ತಿದ ಏಣಿಯನ್ನು ಒದೆಯುವುದನ್ನು ಬಿಜೆಪಿ ಹಿಂದಿನಿಂದಲೂ ಮಾಡಿಕೊಂಡೇ ಬಂದಿದೆ ಎಂದರು.
ಸ್ವತಂತ್ರ ಅಭ್ಯರ್ಥಿಯಾಗಿ ಹಿಂದೆ ಗೆದ್ದು, ಬಿಜೆಪಿ ಬೆಂಬಲಿಸಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ ಸ್ಥಿತಿ ಆ ಪಕ್ಷದಲ್ಲಿ ಇಂದು ಏನಾಗಿದೆ ಎಂಬುದನ್ನು ನಾಡಿನ ಜನತೆ ಗಮನಿಸುತ್ತಿದ್ದಾರೆ. ಬೇರೆ ಪಕ್ಷದ ಶಾಸಕರನ್ನು ಸೆಳೆದು ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಅನೈತಿಕ ಸರ್ಕಾರವಾಗಿದೆ ಎಂದು ಅವರು, ಅನರ್ಹ ಶಾಸಕರಿಗೆ ನಾವು ಸಾಕಷ್ಟು ತಿಳಿ ಹೇಳಿದರೂ ಅರ್ಥ ಮಾಡಿಕೊಳ್ಳಲಿಲ್ಲ. ಈಗ ಅವರಿಗೆ ಜ್ಞಾನೋದಯವಾಗಿರಬೇಕೆಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ