ಬೆಂಗಳೂರು
ಮೇ 19ರಂದು ನಡೆಯಲಿರುವ ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ. ನಾಳೆ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಹೈಕಮಾಂಡ್ ಪ್ರಕಟಿಸಲಿದ್ದು,ಎರಡು ಕ್ಷೇತ್ರಗಳಲ್ಲಿ ಪಕ್ಷದ ಗೆಲುವು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂವಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಎರಡು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಕ್ಷದ ಹೈಕಮಾಂಡ್ ಗೆ ಪಟ್ಟಿ ರವಾನಿಸಲಾಗಿದೆ. ನಾಳೆ ಒಳಗಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾಗಲಿದೆ.ಕುಂದಗೋಳ ಕ್ಷೇತ್ರ ಹಾಗೂ ಚಿಂಚೋಳಿ ಎರಡು ಕಾಂಗ್ರೆಸ್ ಪಕ್ಷದ ಕ್ಷೇತ್ರಗಳಾಗಿದ್ದು ಎರಡರಲ್ಲಿಯೂ ಕಾಂಗ್ರೆಸ್ ಮತ್ತೆ ಗೆಲುವು ಸಾಧಿಸಲಿದೆ ಎಂದರು.
ಚಿಂಚೋಳಿ ಕ್ಷೇತ್ರ ಕಾಂಗ್ರೆಸ್ ನ ಭದ್ರ ಕೋಟೆಯಾಗಿದೆ. ಉಮೇಶ್ ಜಾಧವ್ ಅವರು ಕುದುರೆ ವ್ಯಾಪಾರಕ್ಕೆ ಒಳಗಾಗಿ ಬಿಜೆಪಿಗೆ ಮಾರಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಅವರಿಗೆ ಚಿಂಚೋಳಿ ಜನತೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ನಾಯಕರು ಜಾಧವ್ ಪುತ್ರನಿಗೆ ಟಿಕೆಟ್ ನೀಡಿದ್ದಾರೆ. ಇದ್ಯಾವ ರೀತಿಯ ನೀತಿ ಎಂದು ಅವರು ಪ್ರಶ್ನಿಸಿದರು.
ಲೋಕಸಭಾ ಚುನಾವಣೆ ಬಗ್ಗೆ ಜಿಲ್ಲಾ ಉಸ್ತುವಾರಿಗಳು, ಹಾಗೂ ಸಚಿವರಿಂದ ವರದಿಯನ್ನು ಪಡೆಯಲಾಗಿದ್ದು, ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ದೇಶದಲ್ಲಿಯೂ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ,ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್ ಸೇರಿದಂತೆ ಪಕ್ಷದ ಎಲ್ಲಾ ಸಚಿವರು ,ಪ್ರಮುಖ ನಾಯಕರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಉಪ ಚುನಾವಣೆಗೆ ಸಚಿವರು ಹಾಗೂ ಪ್ರಮುಖ ನಾಯಕರಿಗೆ ಉಸ್ತುವಾರಿ ವಹಿಸಲಾಗಿದೆ. ಅವರು ಕ್ಷೇತ್ರದಲ್ಲಿ ಚುನಾವಣಾ ಜವಾಬ್ದಾರಿ ,ನಾಮಪತ್ರ ಸಲ್ಲಿಕೆ ,ಸಮಾವೇಶಗಳು ಸೇರಿದಂತೆ ಎಲ್ಲಾ ಚಟುವಟಿಕೆಗಳು ನಾಳೆಯಿಂದಲೇ ಆರಂಭವಾಗಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್ , ಎಲ್ಲಾ ಸಮಸ್ಯೆಗಳು ಬಗೆಹರಿದಿವೆ. ಗೊಂದಗಳಿಲ್ಲ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳುವ ಮೂಲಕ ಬಂಡಾಯ ಶಮನವಾಗಿದೆ ಎಂಬ ಸಂದೇಶ ನೀಡಿದರು. ಕೆ.ಸಿ.ವೇಣುಗೋಪಾಲ್ ಮಾತನಾಡಿ, ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ನಿಜವಾದ ಪರಿಣಾಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಎದುರಿಸಲಿದ್ದಾರೆ ಎಂದು ಸೂಕ್ಷ್ಮವಾಗಿ ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮೈತ್ರಿ ಸರ್ಕಾರದಿಂದ ಭಾರೀ ಗಂಡಾತರ ಎದುರಾಗಲಿದೆ ಎಂಬ ಸಂದೇಶ ನೀಡಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಸ್ಥಿತ್ವಕ್ಕೆ ಬರಲಿದ್ದು, ನರೇಂದ್ರ ಮೋದಿ ನಾಟಕ ಈ ಬಾರಿ ನಡೆಯಲ್ಲ.ದೇಶದ ಜನರು ಬದಲಾವಣೆ ಬಯಸಿದ್ದಾರೆ.ಅದು ಈ ಚುನಾವಣೆಯಲ್ಲಿ ಸಾಬೀತಾಗಲಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ,ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಘಟನಾಘಟಿ ನಾಯಕರು ಸೋಲಲಿದ್ದಾರೆ ಎಂಬ ಬಿಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಕೆ.ಸಿ.ವೇಣುಗೋಪಾಲ್, ಯಡಿಯೂರಪ್ಪ ಅವರು ಭ್ರಮೆಯಲ್ಲಿದ್ದಾರೆ. ಮೇ 23ರ ಫಲಿತಾಂಶದ ಬಳಿಕ ಸಂಭ್ರಮಾಚರಣೆಯಲ್ಲಿ ಭಾಗವಹಿಸುತ್ತೇವೆ ಆಗ ತಮಗೆ ತಿಳಿಯಲಿದೆ ಎಂದು ಚಟಾಕಿ ಹಾರಿಸಿದರು. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಅದೊಂದು ಉಹಾತ್ಮಕ ಪ್ರಶ್ನೆ ಆಗ ಬಗ್ಗೆ ತಾವು ಉತ್ತರಿಸುವ ಅಗತ್ಯವಿಲ್ಲ ಎಂದರು.
ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಪ್ರಿಯಾಂಕ ಖರ್ಗೆ,ರಾಜಶೇಖರ್ ಪಾಟೀಲ್ ಹುಮನಾಬಾದ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಎರಡೂ ಕ್ಷೇತ್ರಗಳಿಗೆ ನಾಲ್ಕರಿಂದ ಆರು ಆಕಾಂಕ್ಷಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ. ಆದರೆ ಕುಂದಗೋಳದಲ್ಲಿ ಏಕೈಕ ಹೆಸರು ಕೇಳಿ ಬರುತ್ತಿದ್ದು ಸಿ.ಎಸ್.ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಟಿಕೆಟ್ ನೀಡಲು ಬಹುತೇಕ ನಾಯಕರು ಸಮ್ಮತಿ ಸೂಚಿಸಿದ್ದಾರೆ. ಅಲ್ಲದೆ ಅನುಕಂಪದ ಅಲೆ ಹಾಗು ಶಿವಳ್ಳಿ ಅವರ ಅಭಿಮಾನ ,ವರ್ಚಸ್ಸನ್ನು ಬಳಸಿಕೊಳ್ಳುವುದು ಸೂಕ್ತವಾಗಿದೆ.ಹೀಗಾಗಿ ಕುಸುಮಾಗೆ ಟಿಕೆಟ್ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಿದ್ದು ಅವರ ಹೆಸರನ್ನು ಹೈಕಮಾಂಡ್ ಗೆ ಶಿಫಾರಸ್ಸು ಮಾಡಲಾಗಿದೆ.
ಕುರುಬ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಯಾರೇ ಅಭ್ಯರ್ಥಿಯನ್ನು ಹಾಕಿದರೂ ಗೆಲುವು ನಮ್ಮದೆ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಪ್ರಸ್ತಾಪ. ಸಿದ್ದರಾಮಯ್ಯ ಅವರ ಪ್ರಸ್ತಾಪಕ್ಕೆ ದಿನೇಶ್ ಗುಂಡೂರಾವ್, ಪರಮೇಶ್ವರ್ ,ಇತರೆ ಸಚಿವರು ಧ್ವನಿಗೂಡಿಸಿದರು ಎನ್ನಲಾಗಿದೆ.
ಚಿಂಚೋಳಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರ ಒಲವು ವ್ಯಕ್ತಪಡಿಸಿದ್ದು, ಬಂಜಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದರೆ ಮಾತ್ರ ಚಿಂಚೋಳಿಯಲ್ಲಿ ಗೆಲುವು ಸಾಧ್ಯ.ಅಲ್ಲದೆ ಬಿಜೆಪಿ ಪಕ್ಷದಲ್ಲಿರುವ ಗೊಂದಲಗಳು, ಸುನೀಲ್ ವಲ್ಯಾಪುರೆಗೆ ಟಿಕೆಟ್ ಕೈ ತಪ್ಪಿರುವ ಅಸಮಾಧಾನವನ್ನು ಬಳಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
ಈಗಾಗಲೇ ಮೂವರು ಲಂಬಾಣಿ ಸಮುದಾಯದವ ಆಕಾಂಕ್ಷಿಗಳನ್ನು ಪಟ್ಟಿ ಮಾಡಿದ್ದು, ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಅಂತಿಮಗಾಗಿ ಅಭ್ಯರ್ಥಿಯನ್ನು ಅಖೈರು ಗೊಳಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ ಸುಭಾಷ್ ರಾಥೋಡ್ ಬಗ್ಗೆ ಒಲವಿದ್ದು ಅವರೇ ಬಹುತೇಕ ಅಭ್ಯರ್ಥಿಯಾಗುವುದು ಸಾಧ್ಯತೆ ಹೆಚ್ಚಿದೆ.ಈ ಪ್ರಸ್ತಾವನೆಗೆ ಪಿ.ಟಿ.ಪರಮೇಶ್ವರ್ ನಾಯಕ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ರಾಜಶೇಖರ್ ಪಾಟೀಲ್ ಹುಮನಾಬಾದ್ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸಭೆಯಲ್ಲಿ ಪ್ರಿಯಾಂಕ ಖರ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸುನೀಲ್ ವಲ್ಯಾಪುರೆ ಅವರನ್ನು ಪಕ್ಷಕ್ಕೆ ಸೆಳೆದುಕೊಂಡರೆ ರಾಜಕೀಯವಾಗಿ ಲಾಭವಾಗಲಿದೆ. ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಅನುಕೂಲವಾಗಬಹುದು ಎಂಬ ಸಲಹೆಗೆ ನೀಡಿದರು.
ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಶಾಸಕಾಂಗ ನಾಯಕ ಸಿದ್ದರಾಮಯ್ಯ, ವಲ್ಯಾಪುರೆ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಬಹುದು. ಅದಕ್ಕೇನು ಅಡ್ಡಿಯಿಲ್ಲ ಆದರೆ ಮುಂದೆ ತೊಂದರೆಯಾಗಬಹುದು. ಯಾವುದೇ ಷರತ್ತುಗಳಿಲ್ಲದೆ ಪಕ್ಷಕ್ಕೆ ಬಂದರೆ ಆಹ್ವಾನಿಸೋಣ , ಇಲ್ಲದಿದ್ದರೆ ಬೇಡ. ವಲ್ಯಾಪುರೆ ಯಡಿಯೂರಪ್ಪನ ಖಾಸಾ ದೋಸ್ತಾಗಿದ್ದು, ಹೆಚ್ಚಿನ ದಿನ ಪಕ್ಷದಲ್ಲಿ ಉಳಿಯುವುದಿಲ್ಲ ಎಂದು ಅವರು ಹೇಳಿದರು.
ಸುನೀಲ್ ಕಾಂಗ್ರೆಸ್ ಸೇರ್ಪಡೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರೆ, ಪ್ರಿಯಾಂಕ ಖರ್ಗೆ ಅವರು ಸಿದ್ದರಾಮಯ್ಯ ಹಾಗೂ ಕೆ.ಸಿ.ವೇಣುಗೋಪಾಲ್ ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದರು.
ಇದೇ ವೇಳೆ ಚಿಂಚೋಳಿ, ಕುಂದಗೋಳ ಚುನಾವಣೆ ಉಸ್ತುವಾರಿಯನ್ನು ಹಂಚಿಕೆ ಮಾಡಲಾಗಿದೆ. ಕುಂದಗೋಳಕ್ಕೆ ಕುರುಬ ಹಾಗೂ ಲಿಂಗಾಯತ ಸಮುದಾಯದ ಸಚಿವರಿಗೆ ಉಸ್ತುವಾರಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಚಿವ ಎಂಟಿಬಿ. ನಾಗರಾಜು, ಗೃಹ ಸಚಿವ ಎಂ.ಬಿ.ಪಾಟೀಲ್,ಶಿವಾನಂದಪಾಟೀಲ್ ಅವರಿಗೆ ಉಸ್ತುವಾರಿ ನೀಡಲಾಗಿದ್ದು, ಪ್ರತಿ ಜಿಲ್ಲಾ ಪಂಚಾಯತ್ ಗೆ ಒಬ್ಬರು ಸಚಿವರು ಹಾಗೂ ಇಬ್ಬರು ಶಾಸಕರನ್ನು ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಕುಂದಗೋಳ ಕ್ಷೇತ್ರದ ಉಪ ಚುನಾವಣಾ ಸಂಪೂರ್ಣ ಜವಾಬ್ದಾರಿ ಸಚಿವ ಡಿ.ಕೆ.ಶಿವಕುಮಾರ್ ಹೆಗಲಿಗೆ ಹೊರಿಸಲಾಗಿದೆ.
ಅಂತೆಯೇ ಚಿಂಚೋಳಿ ಕ್ಷೇತ್ರದ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಪರಮೇಶ್ವರ್ ಜವಾಬ್ದಾರಿ ವಹಿಸಲಾಗಿದ್ದು, ಲಂಬಾಣಿ, ದಲಿತ, ಲಿಂಗಾಯತ ಸಮುದಾಯದ ಸಚಿವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಸಚಿವರಾದ ಪ್ರಿಯಾಂಕ ಖರ್ಗೆ, ರಾಜಶೇಖರ್ ಪಾಟೀಲ್, ತುಕಾರಾಂ, ಪಿ.ಟಿ.ಪರಮೇಶ್ವರ್ ನಾಯಕ್, ರಹೀಂಖಾನ್ ಗೆ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಪ್ರತಿ ಜಿ.ಪಂಚಾಯ್ತಿ ವ್ಯಾಪ್ತಿಗೆ ಒಬ್ಬರು ಸಚಿವರು ಹಾಗು ಓರ್ವ ಸಚಿವರಿಗೆ ಇಬ್ಬರು ಶಾಸಕರು ಸಹಕಾರ ನೀಡಲಿದ್ದಾರೆ.
ಒಟ್ಟಾರೆ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಕೈವಶ ಮಾಡಿಕೊಳ್ಳಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ.