ಬೆಂಗಳೂರು
ಐದು ರಾಜ್ಯಗಳ ಚುನಾವಣಾ ಪಲಿತಾಂಶ ದಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ತೋರಿರುವ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಇಂದು ಸಂಭ್ರಮಾಚರಣೆ ನಡೆಸಲಾಯಿತು.
ಎಐಸಿಸಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಪ್ರಮುಖ ರಾಜ್ಯಗಳ ಚುನಾವಣೆ ಎದುರಿಸಿ ಯಶಸ್ವಿಯಾಗಿರುವ ರಾಹುಲ್ ಗಾಂಧಿ ಅವರಿಗೆ ಪಕ್ಷದ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು. ಬಿಜೆಪಿ ಅಧಿಕಾರದಲ್ಲಿದ್ದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಾಧನೆ ತೋರಿದ್ದು ಗೆಲುವಿನ ಹೊಸ್ತಿಲಲ್ಲಿ ಇರುವುದಕ್ಕೆ ಕಾರ್ಯಕರ್ತರು ಸಂಭ್ರಮಿಸಿದರು.
ಮಧ್ಯಪ್ರದೇಶ ರಾಜಸ್ಥಾನ ಹಾಗೂ ಛತ್ತೀಸ್ ಗಡ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಾಧನೆ ತೋರಿಸಿದ್ದು ತೆಲಂಗಾಣ ಹಾಗೂ ಮಿಜೋರಂನಲ್ಲಿ ಕೂಡ ತನ್ನ ಅಸ್ತಿತ್ವವನ್ನು ಪ್ರದರ್ಶಿಸಿದೆ. ಐದು ರಾಜ್ಯಗಳ ಚುನಾವಣೆಯಲ್ಲಿ ಬಹುತೇಕ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಸ್ಥಿತಿಯಲ್ಲಿರುವುದರಿಂದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆ ನಡೆಸಿದರು.
ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಹಲವು ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು. ಸಚಿವರು ಶಾಸಕರು ಬೆಳಗಾವಿ ಯಲ್ಲಿರುವ ಕಾರಣ ಯಾರೊಬ್ಬರೂ ಕಾಂಗ್ರೆಸ್ ಕಚೇರಿಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿರಲಿಲ್ಲ. 50ರಿಂದ 100 ಮಂದಿ ಕಾರ್ಯಕರ್ತರು ಮಾತ್ರ ಪಾಲ್ಗೊಂಡು ಸಂಭ್ರಮಾಚರಣೆ ನಡೆಸಿದರು ಬೆಂಗಳೂರು ನಗರದ ಕಾಪೆರ್ರೇಟರ್ ಗಳು ಕೂಡ ಈ ಸಂದರ್ಭ ಹಾಜರಾಗದಿರುವುದು ಅಚ್ಚರಿ ಮೂಡಿಸಿತು.
ಮಾಜಿ ಸಚಿವೆ ರಾಣಿ ಸತೀಶ್ ಈನಾಡು ಇಂಡಿಯಾ ಜೊತೆ ಮಾತನಾಡಿ, ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಿಕ್ಕ ಮುನ್ನಡೆ ಸಂತಸ ತಂದಿದೆ. 3 ರಾಜ್ಯವನ್ನು ಕಳೆದುಕೊಳ್ಳುವ ಮೂಲಕ ಬಿಜೆಪಿ ಬ್ರಮೆಯಿಂದ ಆಚೆಗೆ ಬಂದಿದೆ. 5 ರಾಜ್ಯಗಳ ಪೈಕಿ ಯಾವ ಒಂದು ರಾಜ್ಯದಲ್ಲಿ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ವಿಫಲವಾಗಿದ್ದು ಶೂನ್ಯ ಸಾಧನೆ ಮಾಡಿದೆ. ಕಾಂಗ್ರೆಸ್ನ ಜಾತ್ಯತೀತ ಸಿದ್ದಾಂತಕ್ಕೆ ಜನ ಮನ್ನಣೆ ನೀಡಿದ್ದು ಬಿಜೆಪಿಯವರು ಇದನ್ನ ಅರ್ಥ ಮಾಡಿಕೊಳ್ಳಬೇಕಿದೆ.
ಚುನಾವಣೆ ಸಂದರ್ಭದಲ್ಲಿಯೇ ಆಯೋಧ್ಯ ವಿಚಾರವನ್ನು ಪ್ರಸ್ತಾಪಿಸುವ ಮೂಲಕ, ಅಯ್ಯಪ್ಪಸ್ವಾಮಿ ವಿಚಾರ ಪ್ರಸ್ತಾಪಿಸುವ ಮೂಲಕ ಜನರ ಭಾವನೆಯನ್ನು ನಕ್ಷೆ ಉಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಅತ್ಯಂತ ಸೂಕ್ಷ್ಮ ವಿಚಾರಗಳನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಬಾರದು. ಭಾರತ ಅನೇಕ ಧರ್ಮಗಳನ್ನು ಒಳಗೊಂಡ ಜಾತ್ಯಾತೀತ ರಾಷ್ಟ್ರ. ಆದರೆ ಬಿಜೆಪಿ ಮತ್ತೆ ವಿಚಾರದಲ್ಲಿ ದೊಡ್ಡ ಅಂತರವನ್ನು ತರುವ ಕಾರ್ಯವನ್ನು ಮಾಡುತ್ತಿದೆ. ಈ ರೀತಿ ನಡೆದುಕೊಳ್ಳುವುದು ಪ್ರಜಾಪ್ರಭುತ್ವದ ಮೌಲ್ಯಕ್ಕೆ ವಿರೋಧಿಯಾಗಿದೆ. ಈ ಚುನಾವಣೆ ಫಲಿತಾಂಶ ಬಿಜೆಪಿಗೆ ತಕ್ಕ ಪಾಠ ಕಲಿಸಿದೆ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ