ತುಮಕೂರು
ವಿಶೇಷ ಲೇಖನ : ಆರ್.ಎಸ್.ಅಯ್ಯರ್
ತುಮಕೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಮೊದಲ ಕಾಮಗಾರಿಯೆಂಬಂತೆ ಆರಂಭಗೊಂಡು ಸಾರ್ವಜನಿಕರ ಗಮನ ಸೆಳೆದಿದ್ದ ಎಂ.ಜಿ.ರಸ್ತೆಯ ನಿಗದಿತ ಮೂರು ಕನ್ಸರ್‍ವೆನ್ಸಿಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಯೋಜನೆ ಸಂಪೂರ್ಣ ವಿಫಲವಾಗಿದೆ. ಈಗ ಈ ಕನ್ಸರ್‍ವೆನ್ಸಿಗಳು ನಿರುಪಯುಕ್ತವಾಗಿದ್ದು, ಈ ಯೋಜನೆಗಾಗಿ ವಿನಿಯೋಗಿಸಿದ ಒಟ್ಟು 32.96 ಲಕ್ಷ ರೂ. ವ್ಯರ್ಥವಾದಂತಾಗಿದೆ.
2019 ರ ಜನವರಿ-ಫೆಬ್ರವರಿಯಲ್ಲಿ ಎಂ.ಜಿ.ರಸ್ತೆಯ ಮೊದಲ ಮೂರು ಕನ್ಸರ್‍ವೆನ್ಸಿಗಳನ್ನು ಗುರುತಿಸಿ, ದ್ವಿಚಕ್ರ ವಾಹನಗಳ ಪಾರ್ಕಿಂಗ್‍ಗಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಸ್ಮಾರ್ಟ್‍ಸಿಟಿ ಕಂಪನಿ ಕೈಗೊಂಡಿತ್ತು. ಒಟ್ಟು 32.96 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮೂರು ಕನ್ಸರ್‍ವೆನ್ಸಿಗಳಲ್ಲಿ ಚರಂಡಿ ಸುವ್ಯವಸ್ಥೆ, ಹೊಸದಾಗಿ ಕಾಂಕ್ರಿಟೀಕರಣ, ಎರಡೂ ಬದಿಯ ಗೋಡೆಗಳಿಗೆ ಬಿಳಿ ಮತ್ತು ತಿಳಿನೀಲಿ ಬಣ್ಣದ ಪಟ್ಟಿ ಬಳಿಯುವುದು, ಪ್ರತಿ ಕನ್ಸರ್‍ವೆನ್ಸಿಯ ಎರಡೂ ತುದಿಗಳಲ್ಲಿ ಸೆಕ್ಯೂರಿಟಿ ಕ್ಯಾಬಿನ್ ನಿರ್ಮಿಸುವುದು, ಉದ್ದಕ್ಕೂ ಹೂವಿನ ಕುಂಡಗಳನ್ನಿಡುವುದು ಇತ್ಯಾದಿ ಕಾಮಗಾರಿಗಳ ಮೂಲಕ ಒಟ್ಟಾರೆ ಅಲ್ಲಿ 502 ವಾಹನಗಳ ನಿಲುಗಡೆಗೆ ಯೋಜನೆ ರೂಪಿಸಲಾಗಿತ್ತು. ಎಂ.ಜಿ. ರಸ್ತೆ ಮತ್ತು ಜನರಲ್ ಕಾರಿಯಪ್ಪ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ವಿಶಾಲ ಕನ್ಸರ್‍ವೆನ್ಸಿಗಳಾಗಿದ್ದುದರಿಂದ ಸಾರ್ವಜನಿಕರ ಗಮನ ಸೆಳೆದು, ಕುತೂಹಲ ಕೆರಳಿಸಿತ್ತು. (ಈ ಬಗ್ಗೆ ದಿನಾಂಕ 16-02-2019 ರ ಪ್ರಜಾಪ್ರಗತಿಯಲ್ಲಿ ಸವಿವರ ಲೇಖನ ಪ್ರಕಟವಾಗಿದ್ದುದನ್ನು ನೆನಪಿಸಿಕೊಳ್ಳಬಹುದು).
ನೆನೆಗುದಿಗೆ ಬಿದ್ದ ಯೋಜನೆ
ಈ ಯೋಜನೆಯ ಕಾಮಗಾರಿಗಳೆಲ್ಲ ಬಹುತೇಕ ನಿಗದಿತ ಅವಧಿಯಲ್ಲಿ ಪೂರ್ಣಗೊಂಡವು. ನಂತರದಲ್ಲಿ ಕನ್ಸರ್‍ವೆನ್ಸಿ ಪಾರ್ಕಿಂಗ್ ವ್ಯವಸ್ಥೆಯ ಉಸ್ತುವಾರಿಗೆ ಏಜೆನ್ಸಿ ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ದರವೂ ನಿಗದಿಗೊಂಡಿತು. ಇನ್ನು ಮುಂದೆ ಎಂ.ಜಿ.ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶವಿಲ್ಲವೆಂದೂ, ನಿಗದಿತ ಶುಲ್ಕ ನೀಡಿ ಕನ್ಸರ್‍ವೆನ್ಸಿಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕೆಂದೂ ಸ್ಮಾರ್ಟ್‍ಸಿಟಿ ಕಂಪನಿ ಪ್ರಕಟಿಸಿತು. ಟ್ರಾಫಿಕ್ ಪೊಲೀಸರೂ ಕ್ರಮಕ್ಕೆ ಮುಂದಾದರು. ಆದರೆ ಅಷ್ಟರಲ್ಲಿ ಸ್ಥಳೀಯ ವ್ಯಾಪಾರಸ್ಥರು ತಮ್ಮ ವ್ಯಾಪಾರಕ್ಕೆ ತೊಡಕಾಗುತ್ತದೆಂದು ಇದನ್ನು ವಿರೋಧಿಸಿದರು. ಟ್ರಾಫಿಕ್ ಪೊಲೀಸರಿಗೂ ತಾಂತ್ರಿಕ ಸಮಸ್ಯೆ ಎದುರಾಯಿತು. ವಿವಾದವು ಜಿಲ್ಲಾಡಳಿತದ ಹಂತದವರೆಗೂ ಹೋಯಿತು. ಕೊನೆಗೆ ಸದ್ಯಕ್ಕೆ ಈ ಯೋಜನೆಯ ಜಾರಿ ಬೇಡವೆಂಬ ತೀರ್ಮಾನಕ್ಕೆ ಬರಲಾಯಿತು. ಅದರೊಂದಿಗೆ ಕನ್ಸರ್‍ವೆನ್ಸಿ ಪಾರ್ಕಿಂಗ್ ಯೋಜನೆ ನೆನೆಗುದಿಗೆ ಬಿದ್ದಿದೆ.
ಈಗೇನಾಗಿದೆ?
ಸ್ಮಾರ್ಟ್‍ಸಿಟಿ ಕಂಪನಿಯಿಂದ ಅಭಿವೃದ್ಧಿಪಡಿಸಲಾದ ಎಲ್ಲ ಮೂರು ಕನ್ಸರ್‍ವೆನ್ಸಿಗಳೂ ಬಹುತೇಕ ನಿರುಪಯುಕ್ತವಾಗಿವೆ. ಕನ್ಸರ್‍ವೆನ್ಸಿಗಳ ಎರಡೂ ತುದಿಗಳಲ್ಲಿ ನಿರ್ಮಿಸಲಾಗಿದ್ದ ಸೆಕ್ಯೂರಿಟಿ ಕ್ಯಾಬಿನ್‍ಗಳು ಪಾಳುಬಿದ್ದಂತಾಗಿವೆ. ಮೊದಲನೇ ಕನ್ಸರ್‍ವೆನ್ಸಿಯಲ್ಲಿ ಪಾದಚಾರಿಗಳು ಓಡಾಡುತ್ತಿರುತ್ತಾರೆ ಹಾಗೂ ಕೆಲವೊಮ್ಮೆ ದ್ವಿಚಕ್ರ ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿರುವುದು ಕಂಡುಬರುತ್ತದೆ. ಎರಡನೇ ಮತ್ತು ಮೂರನೇ ಕನ್ಸರ್‍ವೆನ್ಸಿ ಬಳಕೆಯೇ ಆಗದೆ ನಿಷ್ಪ್ರಯೋಜಕವಾಗಿವೆ.
ಎಂ.ಜಿ.ರಸ್ತೆ ಭಾಗದಲ್ಲಿ ಮಾತ್ರ ಕೆಲವು ದ್ವಿಚಕ್ರ ವಾಹನಗಳು ನಿಲುಗಡೆ ಆಗಿರುತ್ತವೆ. ಇನ್ನು ಜನರಲ್ ಕಾರಿಯಪ್ಪ ರಸ್ತೆಯ ಕಡೆ ಮೊದಲನೇ ಕನ್ಸರ್‍ವೆನ್ಸಿಯ ತಿರುವಿನಲ್ಲೇ ಕಾಂಪ್ಲೆಕ್ಸ್ ನಿರ್ಮಾಣವಾಗಿದ್ದು, ವಾಣಿಜ್ಯ ಮಳಿಗೆಗಳು ಕನ್ಸರ್‍ವೆನ್ಸಿಯ ದಾರಿಯಲ್ಲೇ ಆರಂಭವಾಗಿವೆ. ಹೀಗೆ ಇಡೀ ಕನ್ಸರ್‍ವೆನ್ಸಿ ಅಭಿವೃದ್ಧಿಯ ಮೂಲ ಉದ್ದೇಶಗಳೇ ವಿಫಲವಾಗಿದ್ದು, ಜನರ ತೆರಿಗೆಯ ಹಣವಾದ 32 ಲಕ್ಷ ರೂ. ವ್ಯರ್ಥವಾಗಿದೆ.
ಈಗ ಜನರಲ್ ಕಾರಿಯಪ್ಪ ರಸ್ತೆ ಅಭಿವೃದ್ಧಿಯಾಗುತ್ತಿದೆ. ಇಡೀ ರಸ್ತೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲ. ಅದೇ ರೀತಿ ಅಶೋಕ ರಸ್ತೆಯಲ್ಲೂ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣ ಮತ್ತು ಸ್ಮಾರ್ಟ್‍ಸಿಟಿ ಕಾಮಗಾರಿ ಇತ್ಯಾದಿ ನಡೆಯುತ್ತಿರುವುದರಿಂದ ಅಲ್ಲೂ ಟ್ರಾಫಿಕ್ ಅವ್ಯವಸ್ಥೆಯುಂಟಾಗಿ, ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಇತ್ತ ವಿವೇಕಾನಂದ ರಸ್ತೆಯನ್ನು ಅಗೆದುಹಾಕಿರುವುದರಿಂದ ಇಡೀ ರಸ್ತೆಯಲ್ಲಿ ವಾಹನ ನಿಲುಗಡೆ ತಲೆನೋವಾಗಿದೆ.
ಇವೆಲ್ಲದರ ಪರಿಣಾಮ ಪ್ರಸ್ತುತ ಎಂ.ಜಿ.ರಸ್ತೆಯ ಮೇಲೆ ಉಂಟಾಗುತ್ತಿದೆ. ಅಕ್ಕ ಪಕ್ಕದ ರಸ್ತೆಗೆ ಹೋಗಬೇಕಿರುವವರು ಸುರಕ್ಷಿತ ವಾಹನ ನಿಲುಗಡೆಗೆ ಇದೀಗ ಎಂ.ಜಿ.ರಸ್ತೆಯನ್ನೇ ಅವಲಂಬಿಸುತ್ತಿದ್ದಾರೆ. ಹೀಗಾಗಿ ಎಂ.ಜಿ. ರಸ್ತೆಯಲ್ಲಿ ಪೀಕ್ ಅವರ್‍ಗಳಲ್ಲಿ ವಾಹನ ನಿಲುಗಡೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಎಂ.ಜಿ. ರಸ್ತೆಯ ಕ್ರಾಸ್‍ಗಳಲ್ಲೂ ವಾಹನ ನಿಲುಗಡೆ ಕಷ್ಟಕರವಾಗಿರುವುದರಿಂದ ಇದೊಂದು ದೊಡ್ಡ ಸಮಸ್ಯೆಯೇ ಆಗುತ್ತಿದೆ. ಇಂತಹುದೊಂದು ಪರಿಸ್ಥಿತಿಯಲ್ಲಿ ಇತ್ತೀಚೆಗಷ್ಟೇ ಸುಸಜ್ಜಿತಗೊಂಡಿದ್ದ ಈ ಕನ್ಸರ್‍ವೆನ್ಸಿಗಳೂ ನಿರುಪಯೋಗವಾಗಿವೆ. ಇವುಗಳನ್ನು ಉಪಯೋಗಿಸಿಕೊಳ್ಳುವ ವಿಷಯ ತಕ್ಷಣಕ್ಕೆ ಅನಿಶ್ಚಿತವಾಗಿದೆ.
3 ಫೋಟೋಗಳು ಹೇಳುವ ಕಥೆ
ಮೊದಲನೇ ಕನ್ಸರ್‍ವೆನ್ಸಿಯಲ್ಲಿ ಕಾಮಗಾರಿ ಅಂತಿಮ ಹಂತ ಪಡೆಯುತ್ತಿದ್ದಾಗ ಅಂದರೆ 2019 ರ ಫೆಬ್ರವರಿಯಲ್ಲಿ ಆ ಸ್ಥಳ ಇದ್ದ ರೀತಿಯನ್ನು ಮೊದಲನೇ ಫೋಟೋ ಹೇಳುತ್ತದೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ ಆ ಕನ್ಸರ್‍ವೆನ್ಸಿಯ ಕಾರ್ನರ್‍ನಲ್ಲಿ ವಾಣಿಜ್ಯ ಮಳಿಗೆ ತಲೆಯೆತ್ತಿರುವುದನ್ನು ಎರಡನೇ ಫೋಟೋ ತೋರ್ಪಡಿಸುತ್ತಿದೆ. ಇನ್ನು ಮೂರನೇ ಕನ್ಸರ್‍ವೆನ್ಸಿಯ ದುಸ್ಥಿತಿಯನ್ನು ಮೂರನೇ ಫೋಟೋ ವರ್ಣಿಸುತ್ತಿದೆ.
ಎಲ್ಲ ಮೂರು ಕನ್ಸರ್‍ವೆನ್ಸಿಗಳೂ ಬಹುತೇಕ ನಿರುಪಯುಕ್ತವಾಗಿವೆ. ಕನ್ಸರ್‍ವೆನ್ಸಿಗಳ ಎರಡೂ ತುದಿಗಳಲ್ಲಿ ನಿರ್ಮಿಸಲಾಗಿದ್ದ ಸೆಕ್ಯೂರಿಟಿ ಕ್ಯಾಬಿನ್‍ಗಳು ಪಾಳುಬಿದ್ದಂತಾಗಿವೆ. ಮೊದಲನೇ ಕನ್ಸರ್‍ವೆನ್ಸಿಯಲ್ಲಿ ಪಾದಚಾರಿಗಳು ಓಡಾಡುತ್ತಿರುತ್ತಾರೆ ಹಾಗೂ ಕೆಲವೊಮ್ಮೆ ದ್ವಿಚಕ್ರ ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿರುವುದು ಕಂಡುಬರುತ್ತದೆ. ಎರಡನೇ ಮತ್ತು ಮೂರನೇ ಕನ್ಸರ್‍ವೆನ್ಸಿ ಬಳಕೆಯೇ ಆಗದೆ ನಿಷ್ಪ್ರಯೋಜಕವಾಗಿವೆ. ಎಂ.ಜಿ.ರಸ್ತೆ ಭಾಗದಲ್ಲಿ ಮಾತ್ರ ಕೆಲವು ದ್ವಿಚಕ್ರ ವಾಹನಗಳು ನಿಲುಗಡೆ ಆಗಿರುತ್ತವೆ. ಇನ್ನು ಜನರಲ್ ಕಾರಿಯಪ್ಪ ರಸ್ತೆಯ ಕಡೆ ಮೊದಲನೇ ಕನ್ಸರ್‍ವೆನ್ಸಿಯ ತಿರುವಿನಲ್ಲೇ ಕಾಂಪ್ಲೆಕ್ಸ್ ನಿರ್ಮಾಣವಾಗಿದ್ದು, ವಾಣಿಜ್ಯ ಮಳಿಗೆಗಳು ಕನ್ಸರ್‍ವೆನ್ಸಿಯ ದಾರಿಯಲ್ಲೇ ಆರಂಭವಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ