ದಾವಣಗೆರೆ :
ಲೋಕಸಭಾ ಚುನಾವಣೆಗಾಗಿ ಫೆ.25ರಂದು ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷದ ನಡುವೆ ಸೀಟು ಹಂಚಿಕೆ ಕುರಿತು ಪ್ರಾಥಮಿಕ ಹಂತದ ಸಮಾಲೋಚನೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.ನಗರದ ಸಕ್ರ್ಯೂಟ್‍ಹೌಸ್‍ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿರುವ ಕಾರಣಕ್ಕೆ ಒಟ್ಟಾಗಿಯೇ ಚುನಾವಣೆ ಎದುರಿಸಲಿದ್ದೇವೆ. ಪಕ್ಷದ ತೀರ್ಮಾನದಂತೆ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ತಾವು ಈ ಪ್ರಾಥಮಿಕ ಹಂತದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದೇವೆ. ಜೆಡಿಎಸ್ ನಿಂದಲೂ ಇಬ್ಬರು ವರಿಷ್ಠರು ಭಾಗವಹಿಸಲಿದ್ದಾರೆಂದು ಹೇಳಿದರು.
ಸೀಟು ಹಂಚಿಕೆ ಕುರಿತು ಇನ್ನೂ ನಿರ್ದಿಷ್ಟ ಸಂಖ್ಯೆ ನಿಗದಿಯಾಗಿಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದವರು ತೀರ್ಮಾನಿಸಿದ ನಂತರ ಅಧಿಕೃತವಾಗಲಿದೆ. ಚರ್ಚೆ ಬಳಿಕ ಅಂತಿಮವಾಗಿ ಹಂಚಿಕೆ ಬಗೆಹರಿಯಲಿದೆ. ಒಂದೆರಡು ಸೀಟಿನಲ್ಲಿ ವ್ಯತ್ಯಾಸವಾದಲ್ಲಿ ರಾಹುಲ್ ಗಾಂಧಿ ಹಂತದಲ್ಲಿ ನಿರ್ಧಾರವಾಗಲಿದೆ. ಅಲ್ಲಿಯ ತನಕ ಹೋಗದೆ ಸ್ಥಳೀಯ ಹಂತದಲ್ಲೆ ಇತ್ಯರ್ಥವಾಗುವ ವಿಶ್ವಾಸವಿದೆ ಎಂದು ಹೇಳಿದರು.
ಔರಾದ್ಕರ್ ವರದಿ ಜಾರಿ ವಿಚಾರವನ್ನು ಸಾಮಾನ್ಯ ವಾಗಿಯೇ ಬಗೆಹರಿಸುವ ಕಾರಣಕ್ಕೆ ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಏರ್ ಶೋ ವೇಳೆ ಅಗ್ನಿದುರಂತ ದುರದೃಷ್ಟಕರ, ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಹಾನಿ ಸಂಬಂಧ ಪರಿಹಾರ ಒದಗಿಸುವ ಬಗ್ಗೆ ಸರ್ಕಾರ ಪ್ರಯತ್ನದಲ್ಲಿದೆ ಎಂದರು.ಆಪರೇಷನ್ ಕಮಲ ಆಡಿಯೋ ಪ್ರಕರಣ ಎಸ್‍ಐಟಿ ತನಿಖೆಗೆ ವಹಿಸುವ ವಿಚಾರದಲ್ಲಿ ಸರ್ಕಾರದ ಹಿಂದೆ ಬಿದ್ದಿಲ್ಲ. ರಾಜ್ಯದ ಬರಗಾಲ ಹಿನ್ನೆಲೆಯಲ್ಲಿ 2500 ಕೋಟಿ ರೂ.ನೆರವು ಕೇಳಿದಾಗ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಸಿಆರ್‍ಎಫ್ ಹಣದ ಹೊರತಾಗಿ ಬೇರಾವ ಅನುದಾನ ನೀಡಲಿಲ್ಲ. ರೈತರ ಸಾಲಮನ್ನಾವನ್ನೂ ಮಾಡಲಿಲ್ಲ. ಇದೀಗ ಪ್ರಧಾನಮಂತ್ರಿ ಕಿಸಾನ್ ಹೆಸರಲ್ಲಿ ವಾರ್ಷಿಕ 6000 ರೂ. ನೀಡುವ ನಿರ್ಧಾರ ಚುನಾವಣೆ ಗಿಮಿಕ್ ಆಗಿದೆ ಎಂದು ಆರೋಪಿಸಿದರು.ನನಗೆ ಯಾವ ಜೀವಬೆದರಿಕೆ ಇಲ್ಲ. ನಮಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ತಾವಾಗಲೀ, ಮುಖ್ಯಮಂತ್ರಿಯಾಗಲಿ ಕೇಳುವುದಿಲ್ಲ. ಇದು ಶಿಷ್ಟಾಚಾರದ ಭಾಗ ಮಾತ್ರ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








