ದಾವಣಗೆರೆ:
ಮಂದಿರ-ಮಸೀದಿ ಹೆಸರಿನಲ್ಲಿ ದ್ವೇಷ ಬಿತ್ತುತ್ತಿರುವ ಬಿಜೆಪಿ-ಆರ್‍ಎಸ್‍ಎಸ್‍ನ ಫ್ಯಾಸಿಸಂ ವಿರುದ್ಧ ನಾವು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಆಧಾರದ ಮೇಲೆ ಜನಾಂದೋಲನ ರೂಪಿಸಬೇಕಾದ ಅವಶ್ಯಕತೆ ಇದೆ ಎಂದು ಸಾಮಾಜಿಕ ಹೋರಾಟಗಾರ, ಗುಜರಾತ್‍ನ ವಡಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅಭಿಪ್ರಾಯಪಟ್ಟರು.
ನಗರದ ರೋಟರಿ ಬಾಲಭವನದಲ್ಲಿ ಗುರುವಾರ ಸಂಜೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಅವರು, ಬಿಜೆಪಿ ಮತ್ತು ಆರ್‍ಎಸ್‍ಎಸ್ ಕೋಮುವಾದ ಬಿತ್ತುವ ಮೂಲಕ ದೇಶವನ್ನೇ ಮುಗಿಸಲು ಹುನ್ನಾರ ರೂಪಿಸಿದ್ದು, ಇದರ ವಿರುದ್ಧ ದಲಿತ, ಆದಿವಾಸಿ, ಹಿಂದುಳಿದವರ, ಅಲ್ಪಸಂಖ್ಯಾತರ ಹೆಸರಿನಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು ಪರ್ಯಾಯ ಜನಾಂದೋಲನ ರೂಪಿಸುವ ಮೂಲಕ ದೇಶವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಶೇ.40 ರಷ್ಟು ಮಕ್ಕಳು 8ನೇ ತರಗತಿಯ ನಂತರ ಶಿಕ್ಷಣವನ್ನು ಮೊಟಕು ಗೊಳಿಸುತ್ತಿದ್ದಾರೆ. ಇವರೆಲ್ಲಾ ಬಹುತೇಕ ಆದಿವಾಸಿ, ಅಲ್ಪಸಂಖ್ಯಾತ, ಒಬಿಸಿಗಳ ಮಕ್ಕಳಾಗಿದ್ದಾರೆ. ಅಲ್ಲದೇ, ಎಷ್ಟೋ ಜನರಿಗೆ ಆರೋಗ್ಯ ರಕ್ಷಣೆ ಎನ್ನುವುದೇ ಗಗನಕುಸುಮವಾಗಿದೆ. ಅಲ್ಲದೇ, ದೇಶ ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿದೆ. ಹೀಗಾಗಿ ಜನರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಘಟನೆಗಳು ಶಿಕ್ಷಣ, ಆರೋಗ್ಯ, ಉದ್ಯೋಗವನ್ನೇ ಪ್ರಮುಖ ಬೇಡಿಕೆಯನ್ನಾಗಿಸಿಕೊಂಡು ಹೋರಾಟ ಕಟ್ಟಬೇಕಿದೆ ಎಂದರು.
ಪ್ರತಿಮೆಯಲ್ಲಿರುವ ಬಾಬಾಸಾಹೇಬರ ಕನ್ನಡಕದ ಒಂದು ಕಡ್ಡಿ ಮುರಿದರೆ ಐದು ಸಾವಿರ ಜನರು ಹೋರಾಟಕ್ಕೆ ಬರುತ್ತಾರೆ. ಆದರೆ, ಗುಣಮಟ್ಟದ ಶಿಕ್ಷಣ, ಆರೋಗ್ಯ ನೀಡಬೇಕೆಂದು ಏಕೆ ಬೃಹತ್ ಹೋರಾಟ ಕಟ್ಟುತ್ತಿಲ್ಲ?, ಈ ಎರಡೂ ವಲಯಗಳನ್ನು ಆದ್ಯತೆ ಯನ್ನಾಗಿಟ್ಟುಕೊಂಡು ಕೆಲಸ ಮಾಡುವ ಎರಡು ದಲಿತ ಸಂಘಟನೆಗಳನ್ನು ತೋರಿಸಿ ಎಂದು ಪ್ರಶ್ನಿಸಿದರು.
2014ರ ಚುನಾವಣೆಯ ನಂತರದಲ್ಲಿ ದೇಶದಲ್ಲಿ ನಡೆಯುತ್ತಿರುವ ಲೂಟಿ, ದೌರ್ಜನ್ಯದ ವಿರುದ್ಧ ಜನತಂತ್ರ ಹಾದಿಯಲ್ಲಿ ಹೋರಾಟ ಕಟ್ಟದೇ ಜನರು ಮೌನವಾಗಿದ್ದ ಕಾರಣಕ್ಕಾಗಿಯೇ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳು ಹೆಚ್ಚುತ್ತಾ ಹೋಗಿ, ಇಂದು ನಮ್ಮ ಖಾತೆಯಲ್ಲಿ ಇರುವ ಹಣವೂ ವಾಪಾಸ್ ಬರುತ್ತದೋ ಇಲ್ಲವೋ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ. ಹೀಗಾಗಿ ಈಗೀಗ ಬಿಜೆಪಿ ಸರ್ಕಾರದ ಅಸಲಿ ಮುಖ ಅರ್ಥವಾಗುತ್ತಿದೆ ಎಂದರು.
ಆಟೋ ಮೊಬೈಲ್, ಪ್ಯಾರಲೆ ಕಂಪನಿಗಳು ಸೇರಿದಂತೆ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಮುಚ್ಚಿರುವ ಕಾರಣಕ್ಕೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಉದ್ಯೋಗ ಖಾತ್ರಿಯ ಕಾಮಗಾರಿಯೂ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ದೇಶ ದಿನದಿಂದ ದಿನಕ್ಕೆ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್‍ನ ಫ್ಯಾಸಿಸ್ಟ್ ನೀತಿಯಿಂದಾಗಿ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೂ ತೂಗುಗತ್ತಿ ನೆತಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶವನ್ನು ಅದೋಗತಿಗೆ ತಳ್ಳುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ದಮನಕಾರಿ ನೀತಿಯ ವಿರುದ್ಧ ಸಮಾಜಿಕ ಸಂಘಟನೆಗಳು ನಮ್ಮ ವಿಚಾರಧಾರೆಗಳನ್ನು ಜನರಿಗೆ ರೂಪಿಸಲು ಕೇಡರ್ ಬೇಸ್ ಸಂಘಟನೆಗಳನ್ನು ಕಟ್ಟಬೇಕಾಗಿದೆ. ಸಂಘಪರಿವಾರದ ಸಂಘಟನೆಗಳು ಶಾಲೆ-ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳ ಬ್ರೇನ್ ವಾಶ್ ಮಾಡುವ ಮುನ್ನವೇ ನಮ್ಮ ವಿಚಾರಧಾರೆಗಳನ್ನು ತಲುಪಿಸಬೇಕು. ಹಾಗೂ ಸಂಘ ಪರಿವಾರದ ಸುಳ್ಳು ಹರಡುತ್ತಿರುವ ಬಗ್ಗೆ ಜಾಗೃತವಾಗಿರುವಂತೆ ವಿದ್ಯಾರ್ಥಿಗಳನ್ನು ಎಚ್ಚರಿಸಬೇಕೆಂದು ಕಿವಿಮಾತು ಹೇಳಿದರು.
ದೇಶದ 130 ಜನರ ಬಳಿಯಲ್ಲಿಯೇ 46 ಲಕ್ಷ ಕೋಟಿ ಆಸ್ತಿ ಕೇಂದ್ರೀಕೃತವಾಗಿದ್ದರೆ, ದೇಶದ 45 ಕೋಟಿ ಜನ ತಿಂಗಳಿಗೆ ಐದು ಸಾವಿರ ರೂ. ಸಂಬಳಕ್ಕೆ ದುಡಿಯುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ನಾಷ್ಟದ ಜೊತೆಗೆ ಒಂದು ಲೋಟ ಹಾಲು ಕೊಡುವ ಶಕ್ತಿ ಸಹ ಕೋಟ್ಯಂತರ ಜನರಿಗೆ ಇಲ್ಲ ಎಂದು ವಿಷಾದಿಸಿದರು.ಸಭೆಯಲ್ಲಿ ವಕೀಲ ಅನೀಸ್ ಪಾಷಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
