ಸಂವಿಧಾನ ಬದಲಾವಣೆ ಕಪೋಲಕಲ್ಪಿತ : ಬಿ ಎಸ್ ಯಡಿಯೂರಪ್ಪ

ಬೆಂಗಳೂರು

     ಸಂವಿಧಾನ ಬದಲಾವಣೆಯಾಗಲಿದೆ ಎಂಬ ಕೂಗು ಕಪೋಲಕಲ್ಪಿತವಾಗಿದ್ದು, ಸಂವಿಧಾನವನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಪ್ರತಿಪಾದಿಸಿದ್ದಾರೆ.

    ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನ ಬದಲಾವಣೆಯ ಮಾತು ಆಗಾಗ ಕೇಳಿ ಬರುತ್ತಿದೆಯಾದರೂ ಇದು ಪೊಳ್ಳು ಹಾಗೂ ಅರ್ಥವಿಲ್ಲದ ವಾದವಾಗಿದೆ. ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.ನಮ್ಮ ಸಂವಿಧಾನ ಅತ್ಯಂತ ಚಲನಶೀಲವಾಗಿದ್ದು, ಇದನ್ನು ಬದಲಿಸಲು, ಅಳಿಸಲು ಸಾಧ್ಯವೇ ಇಲ್ಲ ಎಂದರು.

     ಅಧಿಕಾರದಲ್ಲಿರುವವರು ಯಾರೂ ಪ್ರಭುಗಳಲ್ಲ. ಎಲ್ಲರೂ ಸಮಾನರು. ವಿಚಿತ್ರ ಎಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ನಾವು ಬದುಕಿದ್ದೇವೆ ಎನ್ನುವ ವಾತಾವರಣವಿತ್ತು. ಸ್ವಾತಂತ್ರ್ಯ ಬಂದ ಮೇಲೆ ದೇಶ ಇರುವುದೇ ನಮಗಾಗಿ ಎನ್ನಲಾಗುತ್ತಿದೆ. ದೇಶ ಪ್ರೇಮ ಎಲ್ಲದಕ್ಕೂ ಮಿಗಿಲು ಎಂದರು.

     ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಉರುಳಿದರೂ ಸಹ ದೇಶದ ರೈತರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ದಲಿತರ ಪರಿಸ್ಥಿತಿ ನೋಡಿದರೆ ದೇಶಕ್ಕೆ ಸ್ವಾತಂತ್ರ್ಯ ಬಂದಿದೆಯಾ ಎಂಬ ಸಂದೇಹ ಮೂಡುತ್ತದೆ. ನಾವು ಸ್ವಲ್ಪ ಮನಸ್ಸು ಮಾಡಿದರೆ ಸಂಕಟಗಳಿಗೆ ಸ್ಪಂದಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಮನೋಧೋರಣೆಯಲ್ಲಿ ಬದಲಾವಣೆಯಾಗಬೇಕು ಎಂದು ಯಡಿಯೂರಪ್ಪ ಹೇಳಿದರು.
ದೇಶದಲ್ಲಿ ಮಹಿಳೆಯರು ರಾತ್ರಿ ವೇಳೆಯಲ್ಲಿ ಓಡಾಡುವ ಮುಕ್ತ ವಾತಾವರಣವಿಲ್ಲ. ಕೊಲೆ, ಸುಲಿಗೆ, ಭ್ರಷ್ಟಾಚಾರ ಹೆಚ್ಚುತ್ತಿದೆ.

     ವರ್ಗಾವಣೆಯೇ ಭ್ರಷ್ಟಾಚಾರದ ಮೂಲವಾಗಿದೆ. ಶೇ 63 ರಷ್ಟು ಜನ ಲಂಚ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನ ಎಚ್.ಕೆ. ಪಾಟೀಲ್ ಅವರು ಹೇಳಿರುವುದು ಸರಿಯಾಗಿದೆ. ಇಂತಹ ವ್ಯವಸ್ಥೆಗೆ ಜನಪ್ರತಿನಿಧಿಗಳಾದ ನಾವೆಲ್ಲರೂ ಕಾರಣವಾಗಿದ್ದು, ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

     ಸಂವಿಧಾನದ ಮೂಲಕ ಪ್ರತಿಯೊಬ್ಬರ ಬದುಕು ಹಸನಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಇಷ್ಟೊಂದು ಪರಿಶ್ರಮ ಪಡೆದಿದ್ದರೆ ಇಂತಹ ಸಂವಿಧಾನ ರಚನೆ ಸಾಧ್ಯವಾಗುತ್ತಿರಲಿಲ್ಲ. ಬೇರೆ ಯಾವುದೇ ದೇಶಕ್ಕೆ ಹೋಲಿಸಿದರೆ ಅತ್ಯಂತ ಎತ್ತರದ ಸ್ಥಾನದಲ್ಲಿರುವ ಸಂವಿಧಾನ ನಮ್ಮದು ಎನ್ನುವ ಹೆಮ್ಮೆ ಇದೆ ಎಂದರು.

     ಸಂವಿಧಾನದ ಮೇಲೆ ಬೇರೆ ರಾಜ್ಯಗಳಲ್ಲಿ ಚರ್ಚೆಯಾಗಿಲ್ಲ. ಇದೊಂದು ಯಶಸ್ವಿಯಾದ ಪ್ರಯತ್ನವಾಗಿದ್ದು, ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಸಂವಿಧಾನದ ಬಗ್ಗೆ ಬೆಳಕು ಚೆಲ್ಲಿದ್ದು ಉತ್ತಮ ಬೆಳವಣಿಗೆ. ಈ ಕುರಿತ ಚರ್ಚೆಗೆ ಅನುಗುಣವಾಗಿ ನಾವೆಲ್ಲರೂ ನಡೆದುಕೊಂಡಾಗ ಚರ್ಚೆ ಸಾರ್ಥಕವಾಗುತ್ತದೆ ಎಂದರು.

     ಕೆಲವೊಂದು ದೇಶಗಳಲ್ಲಿ ಸಂವಿಧಾನ ವಿರುದ್ಧದ ನಡವಳಿಕೆ ದಾಖಲಾಗಿವೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲೂ ತೊಂದರೆಯಾಗಿದೆ. ಪ್ರಾಂತೀಯ ಚುನಾವಣೆಯಲ್ಲೂ ಯಾರು ಗೆದ್ದಿದ್ದಾರೆ ಎಂದು ಹೇಳಿಲ್ಲ. ಅಂತಿಮವಾಗಿ ಜಾರ್ಜ್ ಬುಷ್ ಗೆದ್ದಿದ್ದಾರೆ ಎಂದು ಘೋಷಿಸಲಾಯಿತು. ಅಂತಹ ಪ್ರಮುಖ ದೇಶದಲ್ಲೇ ಇಂತ ಘಟನೆಗಳು ನಡೆದಿವೆ. ಆದರೆ ನಮ್ಮ ದೇಶದಲ್ಲಿ ಸಂವಿಧಾನ ಗಟ್ಟಿಯಾಗಿದ್ದು, ನಮ್ಮ ಸಂವಿಧಾನ ಬೇರೆದೇಶಕ್ಕಿಂತ ಎತ್ತರದಲ್ಲಿದೆ. ಆಂತರಿಕ ಸಂಕಷ್ಟ ಎದುರಾದಾಗ ಹೊರಬರುವುದನ್ನು ಸಂವಿಧಾನ ತೋರಿಸಿಕೊಟ್ಟಿದೆ. ಆದರೆ ಸಂವಿಧಾನದಿಂದ ಯಾರೂ ಹೊರಬರಲು ಸಾಧ್ಯವಿಲ್ಲ ಎಂಬುದು ಸಹ ಅಷ್ಟೇ ಸತ್ಯ ಎಂದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap