ಹರಪನಹಳ್ಳಿ:
ಸಂವಿಧಾನ ದೇಶದ ಬಹುತ್ವದ ಸಂಕೇತವಾಗಿದೆ. ಸರ್ವಜನಾಂಗದ ಆಶಯ ಬಯಸುವ ಏಕೈಕ ಗ್ರಂಥ ಸಂವಿಧಾನ ಎಂದು ಅರಸೀಕೆರೆ ಎಸ್‍ಎಂಸಿಕೆ ಪಿಯು ಕಾಲೇಜು ಉಪನ್ಯಾಸಕ ದುರುಗೇಶ್ ಪೂಜಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಬಾಲಕರ ಕಾಲೇಜು ವಿದ್ಯಾರ್ಥಿನಿಲಯ ನಂ.1ರಲ್ಲಿ ಮಂಗಳವಾರ ಸಂಜೆ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು. `ಸಂವಿಧಾನದ ರಚನೆಯಲ್ಲಿ ಡಾ.ಅಂಬೇಡ್ಕರ್ ಅವರು ಪಟ್ಟ ಶ್ರಮ, ಕಂಡ ಕನಸು ನನಸು ಮಾಡುವ ಹೊಣೆ ದೇಶದ ಯುವ ಸಮುದಾಯದ ಮೇಲಿದೆ’ ಎಂದರು.
`ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಜ್ಞಾನದ ಸಂಕೇತ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿದೆ. ಅಲ್ಲದೇ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ತೆರೆಯಲು ಅಮೆರಿಕಾ ಮುಂದಾಗುತ್ತಿದೆ. ದೇಶದಲ್ಲೇ ಜನಿಸಿ ದೇಶಕ್ಕಾಗಿಯೇ ಜೀವನವನ್ನೇ ದಾರೆ ಎರೆದ ಅಂಬೇಡ್ಕರ್ ಅವರನ್ನು ಭಾರತೀಯರು ಒಂದೇ ಜಾತಿಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ’ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ವೈ.ಡೊಳ್ಳಿನ ಅಧ್ಯಕ್ಷತೆ ವಹಿಸಿದ್ದರು. ನಿಲಯ ಪಾಲಕರಾದ ಎನ್.ಜಿ. ಬಸವರಾಜ, ಅಮರೇಶ್, ಜುಂಜಪ್ಪ, ಗುರುಮೂರ್ತಿ, ಸಿಬ್ಬಂದಿ ಹಾಗೂ ನಿಲಯಾರ್ಥಿಗಳು ಇದ್ದರು.