ಸಂವಿಧಾನದಿಂದ ಶೋಷಿತರಿಗೆ ನ್ಯಾಯ : ಗುಡ್ಡದೇಶ್ವರಪ್ಪ

ಚಿತ್ರದುರ್ಗ 

       ಬಸವಣ್ಣ, ವಾಲ್ಮೀಕಿ ಹಾಗೂ ಅಂಬೇಡ್ಕರ್‍ರವರು ತಮ್ಮ ಜೀವನ ಪೂರ್ತಿ ಶೋಷಿತರ ಪರವಾಗಿ ಹೋರಾಟವನ್ನು ಮಾಡುವುದರ ಮೂಲಕ ಜಾತಿಯ ಸೊಂಕನ್ನು ಅಳಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಗುಡದೇಶ್ವರಪ್ಪ ತಿಳಿಸಿದರು.

          ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭೀವೃದ್ದಿ ಸಂಘದವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್, ವಾಲ್ಮೀಕಿ ಮಹರ್ಷಿ ಮತ್ತು ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

         ಈ ಮೂರು ಜನರು ಸಹಾ ತಮ್ಮ ಕಾಲಘಟ್ಟದಲ್ಲಿ ಅಂದಿನ ದಿನಮಾನಕ್ಕೆ ತಕ್ಕಂತೆ ಶೋಷಿತರ ಪರವಾಗಿ ಹೋರಾಟವನ್ನು ಮಾಡಿದ್ದಾರೆ 12ನೇ ಶತಮಾನದಲ್ಲಿ ಬಸವಣ್ಣರವರು ಜಾತಿ ಪದ್ದತಿಯನ್ನು ಚಿಕ್ಕವಯಸ್ಸಿನಲ್ಲಿಯೇ ತಿರಸ್ಕಾರ ಮಾಡುವುದರ ಮೂಲಕ ತಮ್ಮ ಹುಟ್ಟಿದ ಧರ್ಮವನ್ನು ಬಿಟ್ಟು ಸಮಾನತೆಯನ್ನು ಸಾರುವ ಬೇರೆ ಧರ್ಮವನ್ನು ಅನುಸರಿಸಿದ್ದಲ್ಲದೆ ಬೇರೆಯವರನ್ನು ಸಹಾ ಅನುಸರಿಸುವಂತೆ ಮಾಡಿದರು ಎಂದರು.

         16 ಶತಮಾನದ ದಾಸ ಪರಂಪರೆಯಲ್ಲಿ ಕನಕದಾಸರು ಸಹಾ ಜಾತಿಯ ವಿರುದ್ದ ಹೋರಾಟವನ್ನು ಮಾಡುವುದರ ಮೂಲಕ ತಮ್ಮ ತತ್ವಪದಗಳಲ್ಲಿ ಅದರ ವಿರುದ್ದ ರಚನೆ ಮಾಡಿ ಹಾಡುವುದರ ಮೂಲಕ ಜಾತಿಯನ್ನು ತೊಲಗಿಸುವ ಕಾರ್ಯವನ್ನು ಮಾಡಿದರು, ಇವರು ಬರೀ ಒಂದು ಜನಾಂಗ ಶೋಷಿತರನ್ನು ಪರವಾಗಿ ಮಾತ್ರವೇ ಹೇಳದೆ ಎಲ್ಲಾ ಜನಾಂಗದ ಶೋಷಿತರ ಪರವಾಗಿ ಹೋರಾಟವನ್ನು ಮಾಡಿದವರಾಗಿದ್ದಾರೆ ಎಂದು ಗುಡದೇಶ್ವರಪ್ಪ ತಿಳಿಸಿದರು.

        ಸ್ವಾತಂತ್ರ ನಂತರ ಅಂಬೇಡ್ಕರ್ ರವರು ಉತ್ತಮವಾದ ಸಂವಿಧಾನವನ್ನು ನೀಡದೇ ಇದ್ದಿದ್ದರೆ ಇಂದು ಶೋಷಿತರ ಜೀವನ, ಬದುಕು ಬಹಳ ಕಠಿಣವಾಗುತಿತು, ಜೀತದಾಳಿಗಿಂತ ಕಡೆಯಾಗಿ ಜೀವನ ಮಾಡಬೇಕಿತ್ತು ಅವರು ಸಹಾ ಚಿಕ್ಕ ವಯಸ್ಸಿನಲ್ಲಿ ವಿವಿಧ ರೀತಿಯ ಕಷ್ಟಗಳನ್ನು ಅನುಭವಿಸಿದ್ದರಿಂದಲೇ ಉತ್ತಮವಾದ ಸಂವಿಧಾನವನ್ನು ನೀಡಿದರು ಎಂದ ಅವರು ಸಂವಿಧಾನ ನೀಡಿದ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆದು ಪ್ರಗತಿಯನ್ನು ಸಾಧಿಸಲಾಗಿದೆ ಇದನ್ನು ಸಮಾಜಕ್ಕೆ ಮರಳಿ ನೀಡುವ ಕಾರ್ಯವನ್ನು ಮಾಡಬೇಕಿದೆ ಆಗ ಮಾತ್ರ ಜನಾಂಗ ಪ್ರಗತಿಯನ್ನು ಕಾಣಲು ಸಾಧ್ಯವಿದೆ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಕರಿಯಪ್ಪ ಮಾಳಿಗಿ, ಚಿತ್ರದುರ್ಗ ಆಕಾಶವಾಣಿ ಕಾರ್ಯ ನಿರ್ವಹಕ ಅಧಿಕಾರಿಗಳಾದ ಅರಕಲಗೂಡು ಮಧುಸೂಧನ್, ಅಹಿಂದ ಮುಖಂಡ ಮುರುಘರಾಜೇಂದ್ರ ಒಡೆಯರ್, ರೈತ ಮಖಂಡ ಭೂತಯ್ಯ, ಹೋರಾಟಗಾರ ನಿರಂಜನ ಮೂರ್ತಿ, ಸಮಿತಿಯ ಮಲ್ಲಿಕಾರ್ಜನ್ ಬರಗೂರು ಗೌರವಾಧ್ಯಕ್ಷ ಬಾಬುರಾಜು ಅಧ್ಯಕ್ಷ ರವಿ, ರಾಜಪ್ಪ ಪಾರ್ವತಮ್ಮ, ಉಮಾದೇವಿ ಅಮೃತ ಧನಂಜಯ ಭಾಗವಹಿಸಿದ್ದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನ ಕುಮಾರ್ ಅಧ್ಯಕ್ಷತೆವಹಿಸಿದ್ದರೆ, ಛಲವಾದಿ ಗುರು ಪೀಠದ ಬಸವನಾಗ್ತಿದೇವ ಸಾನಿಧ್ಯವಹಿಸಿದ್ದರು, ಕಾಲ್ಕೆರೆ ಚಂದ್ರಪ್ಪ ತಂಡದಿಂದ ಗೀತಾಗಾಯನ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap