ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ : ಶಾಂತವೀರ ಸ್ವಾಮೀಜಿ

ಹೊಸದುರ್ಗ:

      ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಸ್ಥಾನಮಾನ, ಸೌಲಭ್ಯ, ಅವಕಾಶ, ಅನುದಾನ ಸಿಗಬೇಕಾಗಿದೆಯೋ ಅವರಿಗೆ
ಸರಿಯಾಗಿ ಸಿಗುತ್ತಿಲ್ಲ. ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ. ನಾಯಕ ಸರಿಯಿದ್ದರೆ ಸೇವಕರು ಸರಿಯಿರುವುದಿಲ್ಲ. ಸೇವಕರು ಸರಿ ಇದ್ದರೆ ನಾಯಕ ಸರಿ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಹೇಳಿದರು.

     ಪಟ್ಟಣದ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ಮಂಗಳವಾರ ನಡೆದ 33ನೇ ಸುಜ್ಞಾನ ಸಂಗಮ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

     ಸಂಸಾರ, ಕುಟುಂಬ ಆರ್ಥಿಕವಾಗಿ ಸಬಲವಾಗಬೇಕಾದರೆ ಎಲ್ಲರೂ ಸರ್ಕಾರಿ ಉದ್ಯೋಗವನ್ನಷ್ಟೇ ಅವಲಂಬಿಸದೇ ಸ್ವಯಂ ಉದ್ಯೋಗವನ್ನೂ ಪ್ರಾರಂಭಿಸ ಬೇಕು. ನಮ್ಮ ನಡವಳಿಕೆ, ಆಲೋಚನೆ ಸರಿಯಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ? ಎಂದು ಸಲಹೆ ನೀಡಿದ ಅವರು ಅಸಮರ್ಥರು ತಾವು ಸಮರ್ಥರೆಂದು ತೋರಿಸಿಕೊಂಡರೆ ದೇಶ ಟೊಳ್ಳಾಗುತ್ತದೆ. ಇದಕ್ಕೆ ಜನರು ಅವಕಾಶ ಕೊಡಬಾರದು. ಪ್ರತಿ ಮನೆಯಲ್ಲಿ ಸಮರ್ಥ ನಾಯಕನನ್ನು ರೂಪಿಸುವ ಕೆಲಸವಾಗಬೇಕು. ಹಣ, ಆಸ್ತಿ, ಅಧಿಕಾರ ಸಂಪಾದನೆಯ ಹಿಂದೆ ಬಿದ್ದಿರುವುದರಿಂದ ಜನರ ಆರೋಗ್ಯ, ಆಲೋಚನೆ ದೂರಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

    ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ. ಹನುಮಂತಪ್ಪ, ನಿವೃತ್ತ ಮುಖ್ಯಶಿಕ್ಷಕ ಎಚ್. ಓಂಕಾರಪ್ಪ, ಡಾ.ಎಸ್.ಕೆ. ಶ್ವೇತಾ ಅವರನ್ನು ಸನ್ಮಾನಿಸಲಾಯಿತು. ಎನ್.ಜಿ. ಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಟಿ.ಪ್ರಕಾಶ್ ಉಪನ್ಯಾಸ ನೀಡಿದರು.ಕಬ್ಬಳ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಆರ್. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್ ಉದ್ಘಾಟಿಸಿದರು. ವಾಗ್ದೇವಿ ಮಹಿಳಾ ಭಜನಾ ಮಂಡಳಿಯವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಹೊನ್ನಾಳಿ ಕುಂಚಿಟಿಗ ಸಮಾಜದ ಅಧ್ಯಕ್ಷ ಚಂದ್ರಪ್ಪ, ಪುರಸಭೆ ಸದಸ್ಯ ಎಂ. ಶ್ರೀನಿವಾಸ್, ಎಂ. ಮಂಜುನಾಥ್, ಕೆ.ಸಿ.ಸಿದ್ದಪ್ಪ, ಎಚ್.ಬಿ. ಯೋಗೀಶ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link