ಚಳ್ಳಕೆರೆ
ಜನತೆಯ ಆಶೀರ್ವಾದಿಂದ ದೇವರ ದಯದಿಂದ ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ನಂ.1 ಅಭಿವೃದ್ಧಿ ಕ್ಷೇತ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳ ಮೂಲಕ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಕ್ಷೇತ್ರದ ಸರ್ವರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ಷೇತ್ರ ಮಟ್ಟದಲ್ಲಿ ಬೃಹತ್ ಆರೋಗ್ಯ ಮೇಳವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿ.ಬೇಗೂರಿನ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಡಾ.ಬಿ.ರಮಣರಾವ್ ನೇತೃತ್ವದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದ್ಧಾರೆ.
ಅವರು, ಭಾನುವಾರ ಟಿ.ಬೇಗೂರಿನ ಟಿ.ರಮಣರಾವ್‍ರವರ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ಅಲ್ಲಿ ವೈದ್ಯರು ಪ್ರತಿನಿತ್ಯ ಸಾವಿರಾರು ರೋಗಿಗಳನ್ನು ಪರಿಶೀಲಿಸಿ ಉಚಿತವಾಗಿ ಅವರಿಗೆ ಚಿಕಿತ್ಸೆ ಹಾಗೂ ಔಷದೋಪಚಾರಗಳನ್ನು ನೀಡುತ್ತಿದ್ದು, ಅವರನ್ನು ಬೃಹತ್ ಆರೋಗ್ಯ ಮೇಳಕ್ಕೆ ಆಹ್ವಾನಿಸುವ ಹಿನ್ನೆಲೆಯಲ್ಲಿ ಭೇಟಿ ಮಾಡಿ ಮಾತನಾಡಿದರು.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಶಾಸಕ ಟಿ.ರಘುಮೂರ್ತಿ, ಇಂದು ಸಾರ್ವಜನಿಕ ಆರೋಗ್ಯವನ್ನು ಕೇವಲ ಸರ್ಕಾರಿ ಆಸ್ಪತ್ರೆಗಳಿಂದಲೇ ಸುಧಾರಣೆ ಮಾಡಲು ಸಾಧ್ಯವಿಲ್ಲ. ಬದಲಾಗಿ ಖಾಸಗಿ ಆಸ್ಪತ್ರೆಗಳು ಸಹ ಜನರ ಆರೋಗ್ಯ ಉತ್ತಮ ಪಡಿಸಲು ತಮ್ಮದೇಯಾದ ಕಾರ್ಯಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ನಿಗಧಿತ ಶುಲ್ಕವನ್ನು ಪಡೆದು ಅವರಿಗೆ ಆರೋಗ್ಯವನ್ನು ನೀಡುತ್ತವೆ.
ಆದರೆ, ಇಲ್ಲಿನ ಜನಸಮೂಹದ ವೈದ್ಯರೆಂದು ಗುರುತಿಸಿಕೊಂಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಡಾ.ಬಿ.ರಮಣರಾವ್ ಹೆಚ್ಚಿನ ಆರ್ಥಿಕ ಹೊರೆಯಿಲ್ಲದೆ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡುವ ಮೂಲಕ ವೈದ್ಯ ವೃತ್ತಿಯ ಗೌರವ, ಘನತೆಯನ್ನು ಹೆಚ್ಚಿಸಿದ್ದರಲ್ಲದೆ ವೈದ್ಯಕೀಯ ಕ್ಷೇತ್ರಕ್ಕೂ ಮಾರ್ಗದರ್ಶಿಯಾಗಿದ್ಧಾರೆ. ತನ್ನ ವೃತ್ತಿಯಲ್ಲಿ ದೈವತ್ವವನ್ನು ಕಾಣುವ ಅಪರೂಪದ ವೈದ್ಯರಲ್ಲಿ ಡಾ.ಬಿ.ರಮಣರಾವ್ ಮೊದಲಿಗರು.
ಇಂತಹ ಗುಣಾತ್ಮಕ ವೈದ್ಯರ ಸೇವೆ ನಮ್ಮ ಕ್ಷೇತ್ರದ ಜನತೆಗೆ ಸಿಗುವಂತಾಗಲಿ ಎಂಬ ದೃಷ್ಠಿಯಿಂದ ಇವರನ್ನು ಕ್ಷೇತ್ರದ ಜನತೆಯ ಪರವಾಗಿ ಅಹ್ವಾನಿಸಲು ಇಲ್ಲಿಗೆ ಆಗಮಿಸಿದ್ದೇನೆ. ಅವರು, ನೀಡುವ ದಿನಾಂಕದಂದು ಚಳ್ಳಕೆರೆಯಲ್ಲಿ ಉತ್ತಮ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗುವುದು. ಜನರು ಆರೋಗ್ಯವಂತರಾದಲ್ಲಿ ಮಾತ್ರ ನಮ್ಮ ಸಮಾಜ ಮತ್ತಷ್ಟು ವೇಗವಾಗಿ ಅಭಿವೃದ್ಧಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ವೈದ್ಯ ಲೋಕದಲ್ಲಿ ಬಹು ಅಪರೂಪದ ವೈದ್ಯರಾದ ಇವರು ಪ್ರತಿನಿತ್ಯ ಸಾವಿರಾರು ರೋಗಿಗಳ ಪರೀಕ್ಷೆ ನಡೆಸಿದರೂ ಸಹ ಸದಾಕಾಲ ತಾಳ್ಮೆಯಿಂದಲೇ ಕಾರ್ಯನಿರ್ವಹಿಸುತ್ತಾರೆ. ಯಾವುದೇ ರೋಗಿಗಳಲ್ಲಿ ಬೇದಭಾವವಿಲ್ಲದೆ ಬರುವ ಎಲ್ಲಾ ರೋಗಿಗಳನ್ನು ಪರೀಕ್ಷಿಸುತ್ತಾರೆ. ಆಸ್ಪತ್ರೆಯ ವಾತಾವರಣವೂ ಸಹ ಹರ್ಷದಾಯಕವಾಗಿದ್ದು, ಸುತ್ತಲು ಹಸಿರಿನ ಸಿರಿಯೇ ನಮ್ಮೆಲ್ಲರನ್ನು ಸ್ವಾಗತಿಸುತ್ತದೆ. ಇಂತಹ ಪರಿಸರದಲ್ಲಿರುವ ಡಾ.ರಮಣರಾವ್ ಚಿಕಿತ್ಸೆ ವ್ಯಕ್ತಿಯ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.
ಈಗಾಗಲೇ ನಾಡಿನ ವಿವಿಧ ಭಾಗಗಳಿಂದ ಹಲವಾರು ರೋಗಗಳಿಂದ ನರಳುತ್ತಿರುವ ಚಿಕಿತ್ಸೆ ಪಡೆದರೂ ಗುಣಮುಖರಾಗದ ಹಲವಾರು ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ಧಾರೆ. ಇವರಲ್ಲಿ ಚಿಕಿತ್ಸೆ ಪಡೆಯುವ ಬಹುತೇಕ ರೋಗಿಗಳು ಗುಣಮುಖರಾಗಿ ಜೀವನ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಕ್ಷೇತ್ರದ ಜನರು ಸಹ ಯಾವುದೇ ಕಾಯಿಲೆ ಇದ್ದಲ್ಲಿ, ಯಾವುದೇ ಸಂಕೋಚವಿಲ್ಲದೆ ಇವರ ಚಿಕಿತ್ಸಾ ಕೇಂದ್ರಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
