ಗ್ರಾಹಕರು ಜಾಗೃತರಾಗುವ ವರೆಗೂ ವಂಚನೆ ನಿಲ್ಲದು

ದಾವಣಗೆರೆ:

          ಗ್ರಾಹಕರು ಜಾಗೃತರಾಗದ ಹೊರತು, ವಸ್ತು ಖರೀದಿಯಲ್ಲಿ ನಡೆಯುವ ಲೋಪ, ವಂಚನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಯು.ಜಿ.ಮಾಲ್ದಾರ್ ತಿಳಿಸಿದರು.

          ನಗರದ ಜನತಾ ಬಜಾರ್ ಸಭಾಂಗಣದಲ್ಲಿ ಸೋಮವಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರು ತಮ್ಮ ಹಕ್ಕುಗಳ ಕುರಿತು ಜಾಗೃತರಾಗದ ಹೊರತು ವಸ್ತು, ಸೇವೆಗಳಲ್ಲಿನ ಲೋಪ, ವಂಚನೆ ತಡೆಯಲಾಗುವುದಿಲ್ಲ ಎಂದರು.

          ಗ್ರಾಹಕರು ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯುವ ಮೊದಲು ಅದರ ಕುರಿತು ಸಂಪೂರ್ಣ ಮಾಹಿತಿ ಹೊಂದಬೇಕು. ಏನಾದರೂ ಗೊಂದಲಗಳಿದ್ದಲ್ಲಿ ಉತ್ಪಾದಕರು ಅಥವಾ ಮಾರಾಟಗಾರರಿಂದ ಪರಿಹರಿಸಿಕೊಳ್ಳಬೇಕು. ಪಡೆದುಕೊಂಡ ಸೇವೆ, ವಸ್ತು ಅವಶ್ಯಕವೇ, ಅನುಕೂಲಕರವೇ? ಎಂಬ ಬಗ್ಗೆ ಸಾಮಾನ್ಯ ತಿಳುವಳಿಕೆಯಾದರೂ ಇರಬೇಕು. ಆಗಮಾತ್ರ ವಂಚನೆಯನ್ನು ತಡೆಯಲು ಸಾಧ್ಯ ಎಂದರು.

         ವಾಹನ ಕಳೆದುಹೋದಲ್ಲಿ ವಿಮಾ ಕಂಪನಿಯಿಂದ ಪರಿಹಾರ ಮೊತ್ತ ಪಡೆಯಬಹುದು. ಅದಕ್ಕಾಗಿ ವಾಹನ ಕಳೆದ 24 ಗಂಟೆಯೊಳಗೆ ವಿಮಾ ಕಂಪನಿ ಹಾಗೂ ಪೊಲೀಸರಿಗೆ ದೂರು ನೀಡಬೇಕು. ಪೊಲೀಸರು ಉಡಾಫೆಯಿಂದ ದೂರು ಸ್ವೀಕರಿಸಲು ನಿರಾಕರಿಸಿದಲ್ಲಿ, ಮೇಲಾಧಿಕಾರಿಗಳ ಗಮನಕ್ಕೆ ತರಬಹುದು. ಇದೆಲ್ಲವೂ ಸಾಧ್ಯವಾಗಬೇಕಾದರೆ ವಾಹನಗಳಿಗೆ ವಿಮಾ ಹೊಂದಿರುವುದು ಕಡ್ಡಾಯವಾಗಿದೆ. ವಿಮಾ ಹಾಗೂ ಲೈಸೆನ್ಸ್ ಸರಿಯಾಗಿದ್ದಲ್ಲಿ ಕಳೆದುಹೋದ ವಾಹನಕ್ಕೆ ಪರಿಹಾರ ಪಡೆದುಕೊಳ್ಳಬಹುದು ಎಂದರು.

          ಆಹಾರ ಇಲಾಖೆ ಜಂಟಿ ನಿರ್ದೇಶಕ ಬಿ.ಟಿ.ಮಂಜುನಾಥ ಮಾತನಾಡಿ, 1986 ಡಿಸೆಂಬರ್ 24ರಂದು ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರ ಪ್ರಯುಕ್ತ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಡಿ.24ನ್ನು ರಾಷ್ಟ್ರೀಯ ಗ್ರಾಹಕರ ದಿನವಾಗಿ ಆಚರಿಸಲಾಗುತ್ತಿದೆ. ಗ್ರಾಹಕರಿಗೆ ಆಗಬಹುದಾದ ಅನ್ಯಾಯ ಸರಿಪಡಿಸಲು, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದರು.

         ಗ್ರಾಹಕರ ಶಿಕ್ಷಣಕ್ಕಾಗಿ ಪ್ರತಿ ವರ್ಷ 20 ಶಾಲಾ-ಕಾಲೇಜುಗಳಲ್ಲಿ ತಲಾ 10 ಸಾವಿರ ರೂ. ಸಹಾಯಧನದಲ್ಲಿ ಗ್ರಾಹಕರ ಕ್ಲಬ್ ಸ್ಥಾಪಿಸಲಾಗುತ್ತಿದೆ. ಈಗಾಗಲೇ 40 ಗ್ರಾಹಕರ ಕ್ಲಬ್‍ಗಳನ್ನು ಯಶಸ್ವಿಯಾಗಿ ಸ್ಥಾಪಿಸಿದ್ದು, ಈ ವರ್ಷ ಇನ್ನೂ 20 ಶಿಕ್ಷಣ ಸಂಸ್ಥೆಗಳಲ್ಲಿ ಗ್ರಾಹಕರ ಕ್ಲಬ್ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

         ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಪಿ.ಅಂಜಿನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಹಾರ ಇಲಾಖೆಯ ಪಿ.ಟಿ.ಪ್ರಕಾಶ, ರವಿ, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಎನ್.ನಾಗರಾಜ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap