ದಾವಣಗೆರೆ:
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರ ದುರುಪಯೋಗ ಪಡೆಸಿಕೊಂಡು ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲು ಪ್ರಯತ್ನಿಸುತ್ತಿದ್ದು, ಚುನಾವಣಾ ಅಧಿಕಾರಿಗಳು ಮಹಾನಗರ ಪಾಲಿಕೆಯ ಎಲ್ಲಾ 45 ವಾರ್ಡ್‍ಗಳಿಗೂ ವಿಶೇಷ ಉಸ್ತುವಾರಿಗಳನ್ನು ನೇಮಿಸಿ ಪಾರದರ್ಶಕವಾಗಿ ಚುನಾವಣೆ ನಡೆಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮೆಹಬೂಬ್ ಪಾಷಾ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಚುನಾವಣೆಗೆ ಅಧಿಸೂಚನೆ ಹೊರಡಿಸಿದ 24ರಂದೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾಧಿಕಾರಿಗಳನ್ನು ಕರೆಯಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಲ್ಲದೇ, ಸರ್ಕಾರದ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳನ್ನು ಹೊರತು ಪಡಿಸಿ, ಚಿತ್ರದುರ್ಗ ಅಥವಾ ಹಾವೇರಿಯ ವಿವಿಧ ಇಲಾಖೆಯ ಅಧಿಕಾರಿಗಳನ್ನು ದಾವಣಗೆರೆ ಮಹಾನಗರ ಪಾಲಿಕೆಯ ಎಲ್ಲಾ 45 ವಾರ್ಡ್‍ಗಳಿಗೂ ವಿಶೇಷ ಉಸ್ತುವಾರಿಗಳನ್ನು ನೇಮಿಸಿ ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರ ಸರ್ಕಾರದ ಅಧಿಕಾರವಧಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವು ಸಾಕಷ್ಟು ಅನುದಾನ ತಂದು ನಗರವನ್ನು ಅಭಿವೃದ್ಧಿ ಪಡೆಸಿದ್ದು, ಇನ್ನಷ್ಟು ಅಭಿವೃದ್ಧಿಯಾಗಬೇಕಾದರೆ, ಪಾಲಿಕೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದ ಮೆಹಬೂಬ್ ಪಾಷಾ, ಕಾಂಗ್ರೆಸ್ ಈ ಚುನಾವಣೆಯಲ್ಲಿ 35ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ವಾರದ ಬಳಿಕವೇ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ದೇಶದಲ್ಲಿ ಮುಂದೆ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದಾಗಿ ಟ್ವೀಟ್ ಮಾಡಿದ್ದರು. ಅದನ್ನು ನಾವು ಇಲ್ಲಿಯ ವರೆಗೂ ಗಮನಿಸಿಕೊಂಡು ಬಂದಿದ್ದೇವೆ. ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಏಕ ಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ದೇಶಕ್ಕೆ ಮಾರಕವಾಗಿದೆ ಎಂದು ಅವರು ದೂರಿದರು.
ಹಿರಿಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾನೂನಿಗೆ ತಿದ್ದುಪಡಿ ತಂದು ದೇಶದ ಮಾಜಿ ಪ್ರಧಾನಿಗಳ ಕುಟುಂಬಕ್ಕೆ ವಿಶೇಷ ರಕ್ಷಣ ಪಡೆಯ (ಎಸ್‍ಪಿಜಿ) ಭದ್ರತೆ ಒದಗಿಸಿದ್ದರು. ಇದರ ಅನ್ವಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರುಗಳಿಗೆ ಒದಗಿಸಿದ್ದ ಎಸ್‍ಪಿಜಿ ಭದ್ರತೆಯನ್ನು ವಾಪಾಸ್ ಪಡೆದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್.ಕೆ.ಅಡ್ವಾಣಿ, ಉಮಾ ಭಾರತಿ, ಮುರುಳಿ ಮನೋಹರ್ ಜೋಷಿ ಅವರುಗಳಿಗೆ ಎಸ್‍ಪಿಜಿ ಭದ್ರತೆ ಮುಂದುವರೆಸಿ, ಗಾಂಧಿ ಕುಟುಂಬದ ಸದಸ್ಯರುಗಳಿಗೆ ನೀಡಿದ್ದ ಎಸ್‍ಪಿಜಿ ಭದ್ರತೆಯನ್ನು ಕಡಿತಗೊಳಿಸಿ, ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುವ ಹುನ್ನಾರವನ್ನು ಪ್ರಧಾನಿ ಮೋದಿ ಸರ್ಕಾರ ನಡೆಸಿದೆ ಎಂದು ದೂರಿದರು.
ಪ್ರತ್ಯೇಕ ಖಲಿಸ್ತಾನ್ ರಾಷ್ಟ್ರ ಸ್ಥಾಪನೆಗೆ ಸಿಕ್ಖರು ಇಟ್ಟ ಬೇಡಿಕೆಯನ್ನು ಇಂದಿರಾ ಗಾಂಧಿ ವಿರೋಧಿಸಿದ ಕಾರಣಕ್ಕೆ ಅವರ ಹತ್ಯೆ ನಡೆಯಿತು. ಅಲ್ಲದೇ, ಶ್ರೀಲಂಕಾದಲ್ಲಿನ ಭಯೋತ್ಪಾದನೆಯನ್ನಿ ನಿರ್ನಾಮ ಗೊಳಿಸಲು ಮುಂದಾಗಿದ್ದ ರಾಜೀವ್ ಗಾಂಧಿಯನ್ನು ಎಲ್‍ಟಿಟಿ ಉಗ್ರರು ಕೊಂದರು. ಇವರ ಕುಟುಂಬದ ಸದ್ಯರಿಗೂ ಬೆದರಿಕೆ ಇದ್ದ ಕಾರಣಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಎಸ್‍ಪಿಜಿ ಭದ್ರತೆ ಒದಗಿಸಲಾಗಿತ್ತು. ಈ ಭದ್ರತೆಯನ್ನು ವಾಪಾಸ್ ಪಡೆದಿರುವ ಮೋದಿ ಸರ್ಕಾರ ದೇಶಕ್ಕಾಗಿ ಏನನ್ನೂ ಮಾಡದ ಅಡ್ವಾಣಿ, ಉಮಾ ಭಾರತಿ, ಮುರುಳಿ ಮನೋಹರ್ ಜೋಷಿಗೆ ಎಸ್‍ಪಿಜಿ ಭದ್ರತೆ ಮುಂದು ವರೆಸಿರುವುದು ಏಕೆ? ಎಂದು ಪ್ರಶ್ನಿಸಿದರು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ ಮಾತನಾಡಿ, ಮೋತಿಲಾಲ್ ನೆಹರು ಅವರಿಂದ ಹಿಡಿದು ಇಲ್ಲಿಯ ವರೆಗೂ ಗಾಂಧಿ ಕುಟುಂಬದ ಏಳು ತಲೆಮಾರು ದೇಶದ ಸಮಗ್ರತೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಾಗಿ ಆ ಕುಟುಂಬಕ್ಕೆ ಎಸ್‍ಪಿಜಿ ಭದ್ರತೆ ಒದಗಿಸಲಾಗಿತ್ತು. ಆದರೆ, ಪ್ರಧಾನಮಂತ್ರಿ ಚಂದ್ರ ಶೇಖರ್ ನೇತೃತ್ವದ ಕೇಂದ್ರ ಸರ್ಕಾರ ರಾಜೀವ್ ಗಾಂಧಿ ಅವರಿಗೆ ಕಲ್ಪಿಸಿದ್ದ ಎಸ್‍ಪಿಜಿ ಭದ್ರತೆಯನ್ನು ವಾಪಾಸ್ ಪಡೆದ ಕೆಲವೇ ತಿಂಗಳಲ್ಲಿ ರಾಜೀವ್ ಹತ್ಯೆ ನಡೆಯಿತು.
ಹೀಗಾಗಿ ಗಾಂಧಿ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ನಂತರ ಅಧಿಕಾರಕ್ಕೆ ಬಂದ ಪಿ.ವಿ.ನರಸಿಂಹರಾವ್ ಸರ್ಕಾರ ಅವರ ಕುಟುಂಬದ ಸದಸ್ಯರಿಗೆ ಎಸ್‍ಪಿಜಿ ಭದ್ರತೆ ಕಲ್ಪಿಸಿತ್ತು.ಮೂರು ಬಾರಿ ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಸಹ ಗಾಂಧಿ ಕುಟುಂಬಕ್ಕೆ ಕಲ್ಪಿಸಿದ್ದ ಎಸ್‍ಪಿಜಿ ಭದ್ರತೆಯನ್ನು ವಾಪಾಸ್ ಪಡೆದಿರಲಿಲ್ಲ. ಅಲ್ಲದೇ, ಅವರೆಂದೂ ಕಾಂಗ್ರೆಸ್ ಪಕ್ಷವನ್ನು ದ್ವೇಷದಿಂದ ಕಾಣಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೆಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ದ್ವೇಷ ಕಾರುತ್ತಿರುವುದಲ್ಲದೇ, ಇಡೀ ದೇಶದಲ್ಲಿ ದ್ವೇಷದ ವಾತಾವರಣ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಾಜಕುಮಾರ್, ಮುಖಂಡರಾದ ರಾಘವೇಂದ್ರರಾವ್, ವೆಂಕಟೇಶ್ ಲಿಯಾಕತ್ ಅಲಿ, ಅಬು ಸಾಲಿಯಾ, ಅಬ್ದುಲ್ ಘನಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
