ಗುತ್ತಿಗೆ ಅಡುಗೆ ಸಿಬ್ಬಂದಿಗೆ ತಿಂಗಳಾಂತ್ಯಕ್ಕೆ 3 ತಿಂಗಳ ವೇತನ

ಪಾವಗಡ

        ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ಅಡುಗೆ ಸಿಬ್ಬಂದಿಗೆ ಕಳೆದ 1 ವರ್ಷದಿಂದ ಸಂಬಳ ನೀಡದೆ ದುಡಿಸಿಕೊಳ್ಳುತ್ತಿರುವುದು ಯಾವ ನ್ಯಾಯ? ಯಾರಾದರೂ ಮಾನವ ಹಕ್ಕುಗಳಿಗೆ ದೂರು ನೀಡದರೆ ನೀವೇನು ಮಾಡುತ್ತೀರಾ ಎಂದು ಸಮಾಜ ಕಲ್ಯಾಣ ಇಲಾಖಾಧಿಕಾರಿ ಶಿವಣ್ಣನವರಿಗೆ ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್ ಏರು ಧ್ವನಿಯಲ್ಲಿ ಪ್ರಶ್ನಿಸಿದ ಘಟನೆ ಬುಧವಾರ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡು ಬಂದಿತು.

        ಪಾವಗಡ ತಾ.ಪ. ಕಚೇರಿ ಆವರಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಸೊಗಡುವೆಂಕಟೇಶ್ ಮಾತನಾಡಿದರು.

        ಕಳೆದ ಜನವರಿ 1 ರಿಂದ ನೌಕರರ ಸಂಬಳ ಸರ್ಕಾರದಿಂದ ಮಂಜೂರಾಗದೆ ಸರ್ಕಾರ ತಡೆಹಿಡಿದಿದ್ದು, ಈ ತಿಂಗಳ ಅಂತ್ಯದೊಳಗೆ 3 ತಿಂಗಳ ಸಂಬಳವನ್ನು ನೀಡುವುದಾಗಿ ಶಿವಣ್ಣ ಉತ್ತರಿಸಿದರು.

         ಅಂಗನವಾಡಿ ಮತ್ತು ಶಾಲೆಗಳ ಬಿಸಿಯೂಟಕ್ಕೆ ಸರಬರಾಜಾಗುವ ಗ್ಯಾಸ್ ಸಿಲಿಂಡರ್ ನಲ್ಲಿ 2 ರಿಂದ 3 ಕೆ.ಜಿ. ತೂಕ ಕಡಿಮೆ ಇರುವ ಮಾಹಿತಿ ಬಂದಿದ್ದು, ಕೂಡಲೆ ತನಿಖೆ ನಡೆಸಬೇಕು ಎಂದು ತಾ.ಪಂ. ಅಧ್ಯಕ್ಷ ಆಹಾರ ಇಲಾಖಾ ಶಿರಸ್ಥೆದಾರ್ ಬಸವರಾಜ್ ಗಮನಕ್ಕೆ ತಂದರು.

         ಸರಬರಾಜಿಗೆ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಪಡೆಯುವುದು, ತೂಕದಲ್ಲಿ ಮೋಸ ಮಾಡುತ್ತಿರುವುದು, ಅಲ್ಲದೆ ಅರಣ್ಯ ಇಲಾಖೆಯ ಗ್ಯಾಸ್ ವಿತರಣೆ ಹಾಗೂ ಉಜ್ವಲ ಗ್ಯಾಸ್ ವಿತರಣೆಯಲ್ಲಿಯೂ ಸಹ ದೂರುಗಳು ಕೇಳಿ ಬಂದಿದ್ದು ತಕ್ಷಣ ತನಿಖೆಗೆ ಒಳಪಡಿಸಬೇಕು ಎಂದು ತಾಕೀತು ಮಾಡಿದರು.

          ಕೃಷಿ ಇಲಾಖೆಯಲ್ಲಿ ವಿವಿಧ ಸಲಕರಣೆಗಳನ್ನು ವಿತರಿಸುವ ಏಜೆನ್ಸಿಯು ರೈತರಿಗೆ ಸರಿಯಾದ ಸಮಯಕ್ಕೆ ವಿತರಿಸದೆ ರೈತರನ್ನು ಅಲೆದಾಡಿಸುತ್ತಿರುವ ವರದಿ ಪ್ರಜಾಪ್ರಗತಿಯಲ್ಲಿ ವರದಿಯಾಗಿತ್ತು. ಈ ಬಗ್ಗೆ ಏಜೆನ್ಸಿ ವಿರುದ್ದ ಕ್ರಮ ತೆಗೆದುಕೊಂಡು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಕೃಷಿ ಅಧಿಕಾರಿ ಹನುಮಂತರಾಜುಗೆ ಅಧ್ಯಕ್ಷರು ಸೂಚಿಸಿದರು.

        ಸಮಾಜಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖೆ ವಸತಿನಿಲಯಗಳಲ್ಲಿ ಮಕ್ಕಳಿಗೆ ಕಳಪೆ ಊಟ ಹಾಕುತ್ತಿರುವ ದೂರುಗಳು ಕೇಳಿ ಬಂದಿವೆ. ಇಲಾಖಾಧಿಕಾರಿಗಳು ಎಚ್ಚರ ವಹಿಸಬೇಕು. ಶಿಕ್ಷಣ ಇಲಾಖೆಯ ಶಿಕ್ಷಕರಿಂದ ವಸತಿನಿಲಯದ ಮಕ್ಕಳಿಗೆ ಟ್ಯೂಶನ್ ತರಗತಿಗಳನ್ನು ನಡೆಸಬೇಕೆಂದು ಸಭೆಯಲ್ಲಿ ಹೇಳುತ್ತಿದ್ದರೂ, ಬಿಇಓ ಕುಮಾರಸ್ವಾಮಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳ ಪಟ್ಟಿಯನ್ನು ನೀಡದೆ ಇರುವ ಬಿಇಓ ಗೆ ನೋಟೀಸ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

        ಹಾಜರಿದ್ದ ಶಿಕ್ಷಣ ಇಲಾಖೆಯ ಇಸಿಓ ಶಿವಮೂರ್ತಿನಾಯ್ಕ ಟ್ಯೂಶನ್ ವ್ಯವಸ್ಥೆಗೆ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದರು.
ಅಂಗನವಾಡಿ, ಶಾಲೆಗಳು ಮತ್ತು ವಸತಿನಿಲಯಗಳ ವಿದ್ಯುತ್ ಬಿಲ್ ನಿಗಧಿತ ಅವಧಿಯೊಳಗೆ ಕಟ್ಟದಿದ್ದ ಪಕ್ಷದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದು, ಕೆಲಕಾಲ ಸಮಯಾವಕಾಶ ನೀಡಬೇಕೆಂದು ಬೆಸ್ಕಾಂ ಎಇಇ ಹರೀಶ್‍ಗೆ ಸೂಚಿಸಿದರು.

        ಜಿಪಂ ಉಪಕಾರ್ಯದರ್ಶಿ ಮಹಾಂಕಾಳಪ್ಪ, ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬಗ್ಗೆ ತಾತ್ಸಾರ ಮನೋಭಾವ ತಾಳದೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಶುಧ್ದ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಯಾಗುತ್ತಿಲ.್ಲ ಕೆಲವೊಂದು ಘಟಕಗಳಲ್ಲಿ ವಾಟರ್‍ಮೆನ್ ಇಲ್ಲ. ನ್ಯಾಯದಗುಂಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ 8 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ನೀರು- ನೈರ್ಮಲ್ಯ ವಿಭಾಗದ ಎಂಜಿನಿಯರ್ ಬಿ.ಪಿ.ನಾಗರಾಜ್‍ಗೆ ತಾಕೀತು ಮಾಡಿದರು.

        ಲೋಕೋಪಯೋಗಿ, ಅಬಕಾರಿ, ಬಿಸಿಎಂ, ಶಿಶು ಅಭಿವೃದ್ದಿ, ಅರಣ್ಯ, ಸಾಮಾಜಿಕ ಅರಣ್ಯ, ಅಬಕಾರಿ, ಜಿಪಂ, ರೇಷ್ಮೆ, ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಅಧ್ಯಕ್ಷರು ನಡೆಸಿದರು.

        ಇ.ಓ. ನರಸಿಂಹಮೂರ್ತಿ, ತಾ.ಪಂ. ಉಪಾಧ್ಯಕ್ಷೆ ಕೃಷ್ಣವೇಣಿ ಆದಿನಾರಾಯಣ, ಜಿ.ಪಂ. ಎ.ಇ.ಇ. ಈಶ್ವರಯ್ಯ, ತೋಟಗಾರಿಕಾ ಅಧಿಕಾರಿ ಸುಧಾಕರ್, ಸಿಡಿಪಿಓ ಶಿವಕುಮಾರಯ್ಯ, ಲೋಕೋಪಯೋಗಿ ಇಲಾಖೆಯ ಲಕ್ಷ್ಮಯ್ಯ, ಬೂಸೇನಾ ಎಂಜಿನಿಯರ್ ಹನುಮಂತರಾಯಪ್ಪ, ಎಸ್.ಟಿ. ಇಲಾಖೆಯ ದಿವಾಕರ್, ಬಿ.ಸಿ.ಎಂ.ನ ಸುಬ್ಬರಾಯ, ತಾ.ಪಂ. ಗುಜ್ಜಾರಪ್ಪ, ಪಾಶಾ, ಲಕ್ಷ್ಮಮ್ಮ, ಜಯಮ್ಮ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link