ಶಿರಾ
ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಬಿಲ್ ಪಾವತಿ ಮಾಡದೆ ಪೌರಾಯುಕ್ತರು ದೌರ್ಜನ್ಯ ಮಾಡುತ್ತಿದ್ದು, ಈ ಕೂಡಲೆ ಬಿಲ್ ಪಾವತಿ ಮಾಡುವಂತೆ ಹಾಗೂ ಪೌರಾಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುತ್ತಿಗೆದಾರರೊಬ್ಬ ನಗರಸಭೆಯ ಮುಂದೆ ವಿಷದ ಡಬ್ಬಿ ಹಿಡಿದುಕೊಂಡು ಪ್ರತಿಭಟನೆಗೆ ಕುಳಿತ ಪ್ರಸಂಗ ಶಿರಾ ನಗರದಲ್ಲಿ ಬುಧವಾರ ನಡೆದಿದೆ.
ಶಿರಾ ನಗರಸಭಾ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಟೆಂಡರ್ ಹಾಕಿ ಅನೇಕ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಿದ್ದರೂ ಇಲ್ಲಿನ ಪೌರಾಯುಕ್ತರು ಬಿಲ್ ಪಾವತಿಸಿದೆ ನನ್ನನ್ನು ದೌರ್ಜನ್ಯದಿಂದ ಹೆದರಿಸುತ್ತಾ, ಬಾಯಿಗೆ ಬಂದಷ್ಟು ಕಮಿಷನ್ ಕೇಳುತ್ತಾ ನನ್ನನ್ನು ಬೀದಿಗೆ ಬರುವಂತೆ ಮಾಡಿದ್ದಾರೆಂದು ಗುತ್ತಿಗೆದಾರ ಸುಬ್ಬಾಸಿಂಗ್ ಪ್ರತಿಭಟನೆಗೆ ಕೂತರು.
ಬೆಳಗ್ಗೆ 10.30ಕ್ಕೆ ನಗರಸಭೆಯಲ್ಲಿ ಬಜೆಟ್ ಸಭೆ ನಡೆಯುತ್ತದೆ, ಸದಸ್ಯರೆಲ್ಲರೂ ಸಭೆಗೆ ಬರುತ್ತಾರೆ, ನಾನು ನ್ಯಾಯ ಕೇಳಬೇಕು ಎಂದು ಸುಬ್ಬಾಸಿಂಗ್ ಪ್ರತಿಭಟನೆಗೆ ಕೂತಿದ್ದರು. ನಗರಸಭೆಯ ಅಧ್ಯಕ್ಷರೂ ಸೇರಿದಂತೆ ನಗರಸಭಾ ಸದಸ್ಯರು ಕಚೇರಿಗೆ ಆಗಮಿಸುತ್ತಿದ್ದಂತೆ ತನಗಾದ ಅನ್ಯಾಯಗಳನ್ನು ಬಿಚ್ಚಿಡುತ್ತಾ ಕಾಮಗಾರಿ ಕೈಗೊಂಡ ಸಮಗ್ರ ದಾಖಲೆಗಳನ್ನು ಹಿಡಿದುಕೊಂಡು ನನಗೆ ನ್ಯಾಯ ಸಿಗದಿದ್ದರೆ ವಿಷ ಸೇವಿಸುವುದಾಗಿ ಎಲ್ಲರನ್ನೂ ಬೆಚ್ಚಿ ಬೀಳಿಸಿದರು.
ಶಿರಾ ನಗರದ ಶಿವಾಜಿ ನಗರ ಬಡಾವಣೆಯಲ್ಲಿ ಈ ಹಿಂದೆ ಬೆಂಕಿ ಬಿದ್ದಾಗ ಕೈಗೊಂಡ ಸುಮಾರು 44 ಲಕ್ಷ ರೂ. ಗಳ ಕಾಮಗಾರಿ ಬಿಲ್‍ನ್ನು ಮಾಡಿಕೊಡದೆ 5 ರಿಂದ 10 ಪರ್ಸೆಂಟ್ ಕಮೀಷನ್ ಕೇಳುತ್ತಾ ನನ್ನ ಮೇಲೆ ಧಮಕಿ ಹಾಕುತ್ತಿದ್ದಾರೆ. ಬಿಲ್‍ಗಳಿಗೆ ಅಧ್ಯಕ್ಷರು ಸಹಿ ಮಾಡಿದ್ದರೂ ಆಯುಕ್ತರು ಸಹಿ ಹಾಕುತ್ತಿಲ್ಲ. ಆಯುಕ್ತರು ಕೇಳಿದಷ್ಟು ಕಮೀಷನ್ ಕೊಡದಿದ್ದರೆ ಬಿಲ್ ಪಾವತಿಸುವುದೇ ಇಲ್ಲ. ಈಗಾಗಲೇ ಅನೇಕ ಕಾಮಗಾರಿಗಳ ಬಿಲ್‍ಗೆ ಶೇ.5 ರಿಂದ 10 ಪರ್ಸೆಂಟ್‍ನಂತೆ ಕಮಿಷನ್ ಕೂಡ ಪೌರಾಯುಕ್ತರಿಗೆ ಕೊಟ್ಟಿದ್ದೇನೆ. ನಗರಸಭೆಯಲ್ಲಿ ಕೂತು ಈ ಅಧಿಕಾರಿ ಹಣದ ಸುಲಿಗೆ ಮಾಡುತ್ತಿದ್ದಾರೆಂದು ಗುತ್ತಿಗೆದಾರ ಸುಬ್ಬಾಸಿಂಗ್‍ಆರೋಪಿಸಿದರು.
ನಗರಸಭಾಧ್ಯಕ್ಷ ಅಮಾನುಲ್ಲಾಖಾನ್ ಮಾತನಾಡಿ, ಗುತ್ತಿಗೆದಾರರು ಪೂರ್ಣಗೊಳಿಸಿದ ಕಾಮಗಾರಿಗಳ ಬಿಲ್ ಪಾವತಿಸಲು ನಾನು ಸಹಿ ಹಾಕಿದ್ದೇನೆ, ಆಯುಕ್ತರಿಗೂ ಬಿಲ್ ಪಾವತಿಸಲು ತಿಳಿಸಿದ್ದೇನೆ ಎಂದರು. ಕಚೇರಿಯಲ್ಲಿಯೇ ಇದ್ದ ಆಯುಕ್ತರು ಸುದ್ದಿಗಾರರೊಂದಿಗೆ ಮಾತನಾಡಿ, ಗುತ್ತಿಗೆದಾರ ಸುಬ್ಬಾಸಿಂಗ್ ಶಿವಾಜಿ ನಗರದಲ್ಲಿ ಕೈಗೊಂಡ ಕಾಮಗಾರಿ 2013-14ನೇ ಸಾಲಿನದ್ದು. ತುಂಬಾ ಹಳೆಯದಾದ ಕಾಮಗಾರಿಗೆ ಬಿಲ್ ಪಾವತಿಸುವ ಹಕ್ಕು ನನಗಿಲ್ಲ. ಈ ಕಡತವನ್ನು ಜಿಲ್ಲಾಧಿಕಾರಿಗಳ ಸಮಕ್ಷಮಕ್ಕೆ ಕಳಿಸುತ್ತೇನೆ ಎಂದರು.
2013-14ರಿಂದಲೂ ಬಿಲ್ ನೀಡುವಂತೆ ಎಲ್ಲರನ್ನೂ ಗೋಗರೆಯುತ್ತಿದ್ದೇನೆ. ಸಾಲ ಮಾಡಿ ಕಾಮಗಾರಿ ಕೈಗೊಂಡಿದ್ದು ನನಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಮೊದಲು ಬಿಲ್ ಪಾವತಿಸಿ ಇಲ್ಲವಾದಲ್ಲಿ ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದರು. ಸುಬ್ಬಾಸಿಂಗ್ ಜೊತೆ ಮತ್ತೊಬ್ಬ ಗುತ್ತಿಗೆದಾರ ತಿಮ್ಮೇಗೌಡ ಕೂಡ ಸಾಥ್ ನೀಡಿ ನ್ಯಾಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೈಗೊಂಡ ಸ್ಥಂಭದ ಕಾಮಗಾರಿಯ ಹಣವನ್ನೂ ನೀಡದೆ ಪೌರಾಯುಕ್ತರು ಸತಾಯಿಸುತ್ತಿದ್ದು ಕಮಿಷನ್ ಆಸೆಗಾಗಿ ಈ ಪೌರಾಯುಕ್ತರು ಕಾನೂನಿನ ಚೌಕಟ್ಟನ್ನೂ ಮುರಿಯುತ್ತಾರೆ ಎಂದು ಆರೋಪಿಸಿದರು.
ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕೆ ಆಗಮಿಸಿದ ನಗರಠಾಣಾ ಸಿ.ಪಿ.ಐ. ರಂಗಸ್ವಾಮಿ ಅನ್ಯಾಯದ ವಿರುದ್ಧ ಹೋರಾಟ ಮಾಡಿ, ಆದರೆ ವಿಷದ ಡಬ್ಬಿ ಹಿಡಿದು ದುಡುಕುವ ಪ್ರಯತ್ನ ಮಾಡಬೇಡಿ ಎಂದು ತಿಳುವಳಿಕೆ ಮೂಡಿಸಿದರು.ಪ್ರತಿಭಟನೆಗೆ ಕೂತಿದ್ದ ಗುತ್ತಿಗೆದಾರ ಸುಬ್ಬಾಸಿಂಗ್‍ನನ್ನು ಮನವೊಲಿಸಿ ಒಳಗೆ ಕರೆದೊಯ್ದ ಸದಸ್ಯರು ಹಾಗೂ ನಗರಸಭೆಯ ಅಧ್ಯಕ್ಷರು ಆಯುಕ್ತರು ಹಾಗೂ ಇತರೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಬಿಲ್ ಪಾವತಿಸುವ ಸಂಬಂಧ ಚರ್ಚೆ ನಡೆದ ನಂತರ ಗುತ್ತಿಗೆದಾರರು ಪ್ರತಿಭಟನೆ ವಾಪಸ್ ಪಡೆದರು.