2.90 ಕೋಟಿ ವೆಚ್ಚದಲ್ಲಿ ಗಾಜಿನಮನೆಗೆ ಎ.ಸಿ
ತುಮಕೂರು

ತುಮಕೂರು ನಗರದ ಅಮಾನಿಕೆರೆ ಅಂಗಳದಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ವತಿಯಿಂದ ತಲೆಯೆತ್ತಿರುವ `ಗಾಜಿನ ಮನೆ’ಯನ್ನು 2.90 ಕೋಟಿ ರೂ. ವೆಚ್ಚದಲ್ಲಿ ಹವಾನಿಯಂತ್ರಿತ (ಏರ್ ಕಂಡೀಷನ್ಡ್)ಗೊಳಿಸುವ ವಿವಾದಾಸ್ಪದ ನಿರ್ಧಾರವನ್ನು ತುಮಕೂರು ಸ್ಮಾರ್ಟ್‍ಸಿಟಿ ಕಂಪನಿ ಕೈಗೊಂಡಿದೆ. ಈ ವಿಷಯ ಇದೀಗ ತುಮಕೂರು ನಗರದ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಆಸ್ಪದವಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರವು ಈ `ಗಾಜಿನ ಮನೆ’ಯನ್ನು ಸುಮಾರು 5.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿದೆ. ಸುಮಾರು ಎರಡು ವರ್ಷಗಳ ಹಿಂದೆ ಇದು ಉದ್ಘಾಟನೆಗೊಂಡಿದ್ದು, ದಿನವೊಂದಕ್ಕೆ 35,000 ರೂ. ಬಾಡಿಗೆಯನ್ನು ಪ್ರಾಧಿಕಾರ ನಿಗದಿಪಡಿಸಿದೆ.
ಸರ್ಕಾರದಿಂದ ಸ್ವಾತಂತ್ರೃ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಇಲ್ಲಿ ನಡೆದರೆ ಅದಕ್ಕೆ ಮಾತ್ರ ಉಚಿತವಾಗಿ ಈ ಸ್ಥಳ ಲಭಿಸಲಿದ್ದು, ಮಿಕ್ಕಂತೆ ಸರ್ಕಾರಿ ಇಲಾಖೆಗಳು ಅಥವಾ ಖಾಸಗಿಯವರು ಈ ಸ್ಥಳ ಬಳಸಿಕೊಂಡರೆ ನಿಗದಿತ ಬಾಡಿಗೆಯನ್ನು ಪಾವತಿಸಲೇಬೇಕು. ವಿವಿಧ ಸಮಾರಂಭಗಳು ಹಾಗೂ ವಿವಿಧ ವಸ್ತುಪ್ರದರ್ಶನ ಗಳು ಇಲ್ಲಿ ನಡೆಯುತ್ತಿವೆ. ಇಂತಹುದೊಂದು ಸ್ಥಳಕ್ಕೆ ಇದೀಗ ಎ.ಸಿ. ಅಳವಡಿಸಲು ಸ್ಮಾರ್ಟ್‍ಸಿಟಿ ಕಂಪನಿಯು ಉತ್ಸುಕತೆಯಿಂದ ಮುಂದಾಗಿದೆ.
ಅನಪೇಕ್ಷಿತ, ದುಂದುವೆಚ್ಚ
“ಈ ಗಾಜಿನ ಮನೆ ನಿರ್ಮಾಣವಾಗಿರುವುದೇ ಅಮಾನಿಕೆರೆಯ ಅಂಗಳದಲ್ಲಿ. ಅಲ್ಲಿನ ವಾತಾವರಣ ಸಹಜವಾಗಿಯೇ ತಂಪಾಗಿರುತ್ತದೆ. ಅಲ್ಲದೆ ಈ ಗಾಜಿನ ಮನೆಯು ಓಪನ್ ಸ್ಪೇಸ್ ಆಗಿರುವುದರಿಂದ ಗಾಳಿಗೇನೂ ಕೊರತೆ ಇರದು. ವಾಸ್ತವ ಸಂಗತಿ ಹೀಗಿದ್ದರೂ, ಇಲ್ಲಿ ಎ.ಸಿ. ಅಳವಡಿಕೆ ಅನಪೇಕ್ಷಿತವಾಗಿದೆ. ಅಕ್ಷರಶಃ ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಿದಂತೆ” ಎಂಬ ಅಭಿಪ್ರಾಯ ಪ್ರಜ್ಞಾವಂತರಿಂದ ವ್ಯಕ್ತವಾಗುತ್ತಿದೆ.
“ಇಷ್ಟು ದೊಡ್ಡ ಗಾಜಿನ ಮನೆಯನ್ನು ಹವಾನಿಯಂತ್ರಿತಗೊಳಿಸಲು 70 ಟನ್ ಸಾಮರ್ಥ್ಯದ ಎ.ಸಿ. ಉಪಕರಣವನ್ನು ಅಳವಡಿಸಬೇಕಾಗುತ್ತದೆ. ಇದು ಸದಾ ಕಾಲ ಚಾಲನೆಯಲ್ಲಿರಬೇಕೆಂದರೆ ನಿರಂತರ ವಿದ್ಯುಚ್ಛಕ್ತಿ ಬಳಕೆಯಾಗುತ್ತದೆ. ಮಾಸಿಕ ವಿದ್ಯುತ್ ಬಿಲ್ ಎಷ್ಟು ಬರಬಹುದು? ಅದನ್ನು ಭರಿಸುವುದು ಹೇಗೆ? ಒಟ್ಟಾರೆ ಈ ಎ.ಸಿ. ವ್ಯವಸ್ಥೆಯನ್ನು ನಿರ್ವಹಿಸುವುದು ಹೇಗೆ? ನಿರ್ವಹಣೆ ಮಾಡುವವರು ಯಾರು?” ಎಂಬುದು ಇಂಜಿನಿಯರ್ ಒಬ್ಬರು ಕೇಳುವ ಪ್ರಶ್ನೆ.
“ಗಾಜಿನ ಮನೆಗೆ ಈಗ ಒಂದು ಹಂತದ ಬಾಡಿಗೆಯನ್ನು ನಿಗದಿಪಡಿಸಲಾಗಿದೆ. ಇನ್ನು ಎ.ಸಿ. ಅಳವಡಿಸಿದರೆ ಮತ್ತೆ ಬಾಡಿಗೆ ದುಬಾರಿ ಆಗುತ್ತದೆ. ಸಾರ್ವಜನಿಕರ ಪಾಲಿಗೆ ಹೊರೆ ಆಗುತ್ತದೆ. ಪ್ರಸ್ತುತ ಇದು ವರ್ಷದ 365 ದಿನಗಳೂ ಬಳಕೆಯಾಗುತ್ತಿಲ್ಲ. ಅಪರೂಪಕ್ಕೆ ಮಾತ್ರ ಬಳಸಲ್ಪಡುತ್ತಿದೆ. ವಾಸ್ತವ ಹೀಗಿರುವಾಗ ಇಲ್ಲಿ ಎ.ಸಿ. ಅಳವಡಿಸಿದರೆ, ಕಾರ್ಯಕ್ರಮ ಇರಲಿ, ಬಿಡಲಿ, ಎ.ಸಿ. ವ್ಯವಸ್ಥೆ ತಾಂತ್ರಿಕ ಕಾರಣಗಳಿಂದ ಚಾಲನೆಯಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಗಾಜಿನ ಮನೆಯ ಈಗಿನ ಸ್ಥಿತಿಗತಿ ಪ್ರಕಾರ ಎ.ಸಿ. ಇಲ್ಲಿಗೆ ಬೇಕಿರಲಿಲ್ಲ” ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
