ಶಾಲಾ ಆವರಣದಲ್ಲಿ ಮದ್ಯಪಾನ: ನಿಯಂತ್ರಿಸಲು ಗ್ರಾಮಸ್ಥರ ಒತ್ತಾಯ

ತುರುವೇಕೆರೆ

     ತಾಲ್ಲೂಕಿನ ಮಾಯಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಕೆಲವು ಕಿಡಿಗೇಡಿಗಳು ಪ್ರತಿ ದಿನ ಸಂಜೆ ಮದ್ಯಪಾನ ಸೇವಿಸಿ ಬಾಟಲಿ, ಪ್ಯಾಕೆಟ್‍ಗಳನ್ನು ಅಲ್ಲಿಯೇ ಬಿಸಾಡುತ್ತಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ನಿಯಂತ್ರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

     ಮಾಯಸಂದ್ರ ಗ್ರಾಮದ ರಸ್ತೆ ಸಮೀಪದಲ್ಲಿ 1 ರಿಂದ 7ನೇ ತರಗತಿಯವರೆಗಿನ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಇದೆ. ಈ ಶಾಲೆಯ ಆವರಣದಲ್ಲಿ ವಿಶಾಲವಾದ ಜಾಗವಿದೆ. ಶಾಲಾ ಸುತ್ತಲೂ ಕಾಂಪೌಂಡ್ ಸಹ ನಿರ್ಮಿಸಲಾಗಿದೆ. ಕೆಲವು ಕಿಡಿಗೇಡಿಗಳು ಮದ್ಯಪಾನವನ್ನು ಶಾಲಾ ಆವರಣದಲ್ಲಿ ಪ್ರತಿದಿನ ರಾತ್ರಿ ಕುಡಿದು ಖಾಲಿ ಬಾಟಲಿ, ಪ್ಯಾಕೆಟ್‍ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಪ್ರತಿದಿನ ಅಪರಿಚಿತ ಕಿಡಿಗೇಡಿಗಳು ಮಾಡಿರುವ ಅವಾಂತರಗಳನ್ನು ಶಾಲಾ ಶಿಕ್ಷಕರು ಸ್ವಚ್ಛ ಮಾಡಿಸುವುದೇ ಕೆಲಸವಾಗಿದೆ. ಮಕ್ಕಳು ಮೈದಾನದಲ್ಲಿ ಆಟವಾಡುವ ಸಂದರ್ಭದಲ್ಲಿ ಚೂರಾದ ಬಾಟಲಿಗಳು ಮಕ್ಕಳ ಕಾಲಿಗೆ ಚುಚ್ಚಿದರೆ ಯಾರು ಹೊಣೆ ಎನ್ನುವುದು ಶಿಕ್ಷಕರ ಅಳಲಾಗಿದೆ.

    ಶಾಲಾ ಆವರಣದಲ್ಲಿ ಕಿಡಿಗೇಡಿಗಳು ಕುಡಿದು ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ತಾಲ್ಲೂಕಿನ ಸಾರ್ವಜನಿಕ ಸ್ಥಳ ಮತ್ತು ಶಾಲಾ ಆವರಣದಲ್ಲಿ ಇಂತಹ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ, ಜಿಲ್ಲಾ ಮತ್ತು ತಾಲ್ಲೂಕು ಪೊಲೀಸ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ. ಹಾಗಾಗಿ ಸಂಬಂಧಪಟ್ಟವರು ಕೂಡಲೆ ಇತ್ತ ಗಮನ ಹರಿಸಿ ಸಮಸ್ಯೆಗೆ ಕಡಿವಾಣ ಹಾಕಬೇಕೆಂದು ವಿಶ್ವಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಆಗ್ರಹಿಸಿದ್ದಾರೆ.

      ಶಾಲಾ ಮುಖ್ಯ ಶಿಕ್ಷಕರು, ಎಸ್‍ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ಪೊಲೀಸರೊಂದಿಗೆ ಸಭೆ ನಡೆಸಿ ಶಾಲಾ ಆವರಣದಲ್ಲಿ ಇಂತಹ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ವಹಿಸಿ ಇಂತಹ ಘಟನೆಗೆ ಕಾರಣರಾದವರನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದು ಬಿ.ಇ.ಒ. ಎಸ್.ಸಿ. ಮಂಜುನಾಥ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link