ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಿಸಿ

ದಾವಣಗೆರೆ

    ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಕಾರ್ಯ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೂಚನೆ ನೀಡಿದರು.ಸೋಮವಾರ ವಿಡಿಯೋ ಸಂವಾದದ ಮೂಲಕ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಅವರು, ಇನ್ನೂ ಪರಿಣಾಮಕಾರಿಯಾಗಿ ಕೋವಿಡ್-19 ಸೋಂಕು ನಿಯಂತ್ರಿಸುವುದರ ಜೊತೆಗೆ ಸ್ವಚ್ಛತೆ ಮತ್ತು ಅಭಿವೃದ್ದಿ ಕಡೆ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿಗಳು, ಸಿಇಓ, ಎಸ್‍ಪಿ, ಪಾಲಿಕೆ ಆಯುಕ್ತರಿಗೆ ಸಚಿವರು ತಾಕೀತು ಮಾಡಿದರು.

    ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ. ಇನ್ನೂ ಹೆಚ್ಚಿನ ರೀತಿಯಲ್ಲಿ, ಪರಿಣಾಮಕಾರಿಯಾಗಿ ಕಟ್ಟೆಚ್ಚರ ವಹಿಸಿ ಕಾರ್ಯೋನ್ಮುಖರಾಗಬೇಕು. ಮನೆ ಮನೆ ಸರ್ವೇ ಕಾರ್ಯ ಹೆಚ್ಚಿಸಬೇಕು ಎಂದು ಹೇಳಿದರು.

     ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಣ ಟಾಸ್ಕ್‍ಫೋರ್ಸ್ ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ಕೋವಿಡ್ ನಿಯಂತ್ರಿಸಬೇಕು. ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಆರಂಭಿಸಬೇಕು ಎಂದು ಸೂಚನೆ ನೀಡಿದರು.

      ಮಳೆಗಾಲ ಚುರುಕಾಗಿರುವುದರಿಂದ ನಗರದಲ್ಲಿ ರೋಗ ರುಜಿನಗಳು ಹೆಚ್ಚಾಗುವ ಸಂಭವ ಇರುತ್ತದೆ. ಆದ ಕಾರಣ ಪಾಲಿಕೆ ವತಿಯಿಂದ ನಗರ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ಪೌರಕಾರ್ಮಿಕರ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಬೇಕು. ಅವರಿಗೆ ಸುರಕ್ಷತಾ ಸಾಮಗ್ರಿಗಳೊಂದಿಗೆ ಕೋವಿಡ್ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಖಾದ್ಯಗಳನ್ನು ನೀಡಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.ಮಾಸ್ಕ್ ಧರಿಸದೇ ಇರುವವರ ವಿರುದ್ದ ದಂಡ ವಿಧಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕ್ರಮ ವಹಿಸಬೇಕು. ಗುಂಪು ಸೇರುವುದನ್ನು ತಡೆಯಬೇಕು ಎಂದರು.

     ಜಿಲ್ಲೆಯ ಮಳೆ ವಿವರ ಪಡೆದುಕೊಂಡ ಅವರು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಇತರೆ ವಸ್ತುಗಳ ಪೂರೈಕೆಯಲ್ಲಿ ಲೋಪ ಬಾರದಂತೆ ಕ್ರಮ ವಹಿಸಬೇಕು. ತೋಟಗಾರಿಕೆ ಬೆಳೆಗಳಾದ ತರಕಾರಿ ಮತ್ತು ಹೂವು ಪರಿಹಾರ ಧನ ಸಮರ್ಪಕವಾಗಿ ರೈತರಿಗೆ ವಿತರಣೆಯಾಗಬೇಕು. ಎಪಿಎಂಸಿ ವಹಿವಾಟುಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರಾತಂಕವಾಗಿ ನಡೆಯುವಂತೆ ಕ್ರಮ ವಹಿಸಬೇಕು. ಜೊತೆಗೆ ನರೇಗಾ ಯೋಜನೆಯಡಿ ಕಾಮಗಾರಿಗಳು ಸುಸೂತ್ರವಾಗಿ ನಡೆಯುವಂತೆ ಹಾಗೂ ಕಾರ್ಮಿಕರಿಗೆ ವೇತನ ಸಮರ್ಪಕವಾಗಿ ಪಾವತಿಯಾಗುವಂತೆ ಸಿಇಓ ಕ್ರಮ ವಹಿಸಬೇಕೆಂದು ತಿಳಿಸಿದರು.

    ಬೇರೆ ಜಿಲ್ಲೆಗಳಲ್ಲಿ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದು, ನಮ್ಮ ಜಿಲ್ಲೆಯಲ್ಲಿ ಯಾವುದೇ ರೋಗಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಹಾಗೂ ಯಾವುದೇ ಲೋಪ ಬಾರದಂತೆ ಅಂತ್ಯಸಂಸ್ಕಾರ ಕೈಗೊಳ್ಳಬೇಕೆಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.3.3 ರಷ್ಟಿದೆ. ಇದುವರೆಗೆ ಒಟ್ಟು 35952 ಸ್ವಾಬ್ ಸಂಗ್ರಹಿಸಿ ಪರೀಕ್ಷಿಸಿದ್ದು 31648 ನೆಗೆಟಿವ್ ವರದಿ ಬಂದಿದೆ. ಫಲಿತಾಂಶ ಬರುವುದು ಬಾಕಿ 2997 ಇದೆ. ಇದುವರೆಗೆ 29 ಮರಣ ಸಂಭವಿಸಿದ್ದು ಇದರಲ್ಲಿ 5 ಹೊರ ಜಿಲ್ಲೆಯವರಾಗಿದ್ದಾರೆ. ಕೇವಲ ಒಂದು ಪ್ರಕರಣ ಮಾತ್ರ ಕೋವಿಡ್ ಮರಣವಾಗಿದ್ದು ಉಳಿದ ಪ್ರಕರಣಗಳು ಕೋಮಾರ್ಬಿಡಿಟಿ ಇರುವಂತಹವಾಗಿವೆ.

    ಇದುವರೆಗೆ 807 ಪ್ರಕರಣಗಳು ದೃಢಪಟ್ಟಿದ್ದು, ಪ್ರಸ್ತುತ 207 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಒಟ್ಟು 225 ಕಂಟೈನ್‍ಮೆಂಟ್ ವಲಯಗಳನ್ನು ಸ್ಥಾಪಿಸಿದ್ದು 64 ವಲಯಗಳನ್ನು ಡಿನೋಟಿಫೈ ಮಾಡಲಾಗಿದೆ. 162 ಸಕ್ರಿಯ ವಲಯಗಳಿವೆ. ಸಿಜಿ ಆಸ್ಪತ್ರೆಯಲ್ಲಿ 140 ಬೆಡ್‍ಗಳ ಐಸೋಲೇಷನ್ ವಾರ್ಡ್‍ಗಳಲ್ಲಿ ಚಿಕಿತ್ಸೆ ನಡೆಯುತ್ತಿದ್ದು. 7 ಜನರು ವೆಂಟಿಲೇಟರ್ ಮೇಲೆ ಅವಲಂಬಿತರಾಗಿದ್ದರೆ 12 ಜನರು ಹೈಫ್ಲೋ ನ್ಯಾಸಲ್ ಆಕ್ಸಿಜನ್ ಪೂರೈಕೆಯಲ್ಲಿದ್ದಾರೆ. ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ವೆಂಟಿಲೇಟರ್ ಅವಲಂಬಿತರಿದ್ದಾರೆ. ಎಸ್‍ಎಸ್ ಆಸ್ಪತ್ರೆಯಲ್ಲಿ 24 ಜನರು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು ಸಿಇಓ ಮುಂದಾಳತ್ವದಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಜಿಲ್ಲೆಗೆ 1000 ರ್ಯಾಪಿಡ್ ಆಂಟಿಜೆನ್ ಕಿಟ್‍ಗಳು ಬಂದಿದ್ದು ಇದರ ಬಳಕೆ ಕುರಿತು ಜು.18 ರಂದು ತರಬೇತಿ ನೀಡಲಾಗಿದೆ. ಕಳೆದ ಒಂದು ವಾರದಲ್ಲಿ 5 ರಿಂದ 6 ಮರಣ ಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ತಜ್ಞರನ್ನೊಳಗೊಂಡ ಮರಣ ಆಡಿಟ್ ಸಮಿತಿ ರಚಿಸಿ ವಿಶ್ಲೇಷಣೆ ನಡೆಸಲಾಗಿದೆ. ಹೈ ಡೆತ್ ಪಾಕೆಟ್ಸ್‍ಗನ್ನು ಗುರುತಿಸಿ ತಂಡಗಳನ್ನು ರಚಿಸಿ ಸರ್ವೇ ಕಾರ್ಯ, ಸ್ವಾಬ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

     ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಪ್ರತಿ ಗ್ರಾ.ಪಂ ಮತ್ತು ಗ್ರಾಮಗಳಲ್ಲಿ ಒಂದೊಂದು ಟಾಸ್ಕ್‍ಫೋರ್ಸ್ ಸಮಿತಿ ರಚಿಸಿದ್ದು ಪಿಡಿಓ ಮತ್ತು ಆಡಳಿತಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ನರೇಗಾ ಯೋಜನೆಯಡಿ ದಿನವೊಂದಕ್ಕೆ 12 ಸಾವಿರ ಕಾರ್ಮಿಕರು ವಿವಿಧ ಕೆಲಸಗಳನ್ನು ಕೈಗೊಳ್ಳುತ್ತಿದ್ದು, ಅವರಿಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಅವರ ಖಾತೆಗೆ ವೇತನ ಪಾವತಿಯಾಗುವುದು ಎಂದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಪ್ರತಿ ತಾಲ್ಲೂಕುಗಳಲ್ಲಿ ತಂಡಗಳನ್ನು ರಚಿಸಿ ಕಂಟೈನ್‍ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜೊತೆಗೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ. ಮದುವೆ, ಸಮಾರಂಭಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಶೇ.99 ಪೊಲೀಸ್ ಸಿಬ್ಬಂದಿಗಳ ಪರೀಕ್ಷೆ ಮಾಡಿಸಲಾಗಿದೆ ಎಂದರು.

       ಸಭೆಯಲ್ಲಿ ಶಾಸಕರಾದ ಪ್ರೊ.ಲಿಂಗಣ್ಣ, ರಾಮಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಸಿ ಮಮತಾ ಹೊಸಗೌಡರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ. ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್, ಡಿಎಸ್ ಡಾ.ನಾಗರಾಜ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap