ಮಧುಗಿರಿ
ಪ್ರಮುಖ ರಸ್ತೆಗಳಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದೆ. ದಾರಿ ಹೋಕರಿಗೆ ವಾಹನ ಸವಾರರಿಗೆ ಅನನುಕೂಲವಾಗುತ್ತಿದೆ. ಪುರಸಭೆಯ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ತುಮಕೂರು-ಪಾವಗಡ-ಶಿರಾ-ಗೌರಿಬಿದನೂರುಗಳ ಪ್ರಮುಖ ರಸ್ತೆಗಳು ಹಾದು ಹೋಗಿವೆ. ಪ್ರತಿದಿನ ಎಲ್‍ಐಸಿ ಕಚೇರಿಯ ಮುಂದಿನ ರಸ್ತೆಯಲ್ಲಿ ಸುಮಾರು 20 ರಿಂದ 30 ನಾಯಿಗಳು ಮನ ಬಂದಂತೆ ಓಡಾಡುತ್ತಿವೆ. ಇದೇ ರಸ್ತೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು ಪ್ರ್ರೌಢಶಾಲೆ, ಮಸೀದಿ ಮತ್ತು ಖಾಸಗಿ ಶಾಲೆ, ಅನಿಲ ಸಂಪರ್ಕ ಕೇಂದ್ರ ಕೂಡ ಇವೆ. ಪ್ರತಿ ದಿನ ಇದೇ ರಸ್ತೆಯಲ್ಲಿ ಗ್ರಾಹಕರು, ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು ಭಯದ ವಾತವರಣದಲ್ಲಿ ಓಡಾಡಬೇಕಾದ ಅನಿವಾರ್ಯತೆ ಇದೆ.
ಪ್ರಮುಖ ಮುಖ್ಯ ರಸ್ತೆಯಾಗಿರುವುದರಿಂದ ಸಾವಿರಾರು ದ್ವಿಚಕ್ರ ವಾಹನಗಳು, ಬಸ್‍ಗಳು, ಲಾರಿಗಳು ಓಡಾಡುತ್ತವೆ. ನಾಯಿಗಳ ಕಿರಿ ಕರಿ ಯಿಂದಾಗಿ ಪ್ರತಿ ನಿತ್ಯ ಅಪಘಾತಗಳು ಸಂಭವಿಸಿ ವಾಹನ ಸವಾರರು ಗಂಭೀರವಾಗಿ ಗಾಯಗೊಂಡು ಪ್ರಾಣಹಾನಿ ಕೂಡ ಸಂಭವಿಸಿವೆ. ಸಮೀಪವೆ ಮಸೀದಿ ಕೂಡ ಇದ್ದು, ಪ್ರತಿ ದಿನ ಬೆಳಗಿನ ಜಾವ ಹಾಗೂ ಸಂಜೆ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಲು ಕಷ್ಟಕರವಾಗುತ್ತಿದೆ. ಆಗಾಗ ಈ ನಾಯಿಗಳು ಶಾಲಾ ವಿದ್ಯಾರ್ಥಿಗಳ ಮೇಲೆ ಎರಗಿ ಕಚ್ಚಿ ಹಿಂಸಿಸುತ್ತಿವೆ ಎಂಬುದು ವಾರ್ಡಿನ ನಾಗರಿಕರ ಅಳಲಾಗಿದೆ.
ಎಲ್.ಐ.ಸಿ ಕಚೇರಿಯ ಸಮೀಪ ರಾತ್ರಿ ಹೊತ್ತು ರಸ್ತೆಗೆ ಅಳವಡಿಸಿರುವ ಬೀದಿದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಗಾಗ ದೀಪಗಳು ಕೆಟ್ಟು ಹೋಗುತ್ತಿವೆ. ಗ್ಯಾಸ್ ಸಂಪರ್ಕಕ್ಕಾಗಿ ಹೋಗಬೇಕಾದರೆ ತುಂಬಾ ಎಚ್ಚರಿಕೆಯಲ್ಲಿ ಹೋಗಬೇಕಾದ ವಾತಾವರಣವಿದೆ. ಮುಖ್ಯ ರಸ್ತೆಯಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ತಿರುವಿನ ಸಮೀಪ ರಸ್ತೆಯ ಉಬ್ಬು ಹಾಗೂ ರಸ್ತೆ ಸುರಕ್ಷಾ ದೀಪಗಳನ್ನು ಅಳವಡಿಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ಮಸೀದಿಯ ಅಧ್ಯಕ್ಷರಾದ ಎಂ.ಸನಾವುಲ್ಲಾ ಬಾಬಜಾನ್, ಅನ್ನೀಸ್, ಇಂತಿಯಾಜ್, ಮಹಮದ್ ಸಾಧಿಕ್, ಜಬೀವುಲ್ಲಾ, ಫೈಜಲ್, ಬಾಬು, ಚಾಂದ್ ಪಾಷ, ಅಫ್ಜಲ್ ರಿಯಾಜ್, ರಂಗಶಾಮಣ್ಣ, ಲಕ್ಷ್ಮೀಶ, ಪ್ಯಾರುಸಾಬ್, ನೂರುಲ್ಲಾ, ಅಫೀಜ್, ಎಕ್ಬಲ್, ಬೀಡಾ ಅಂಗಡಿ ರಹಮಥ್ ಮತ್ತಿತರರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








