ಶಿರಾ
ಶಿರಾ ನಗರದ ಆರ್.ಎಂ.ಸಿ. ಕಚೆರಿಯ ಅಧ್ಯಕ್ಷರ ಕುರ್ಚಿಯಲ್ಲಿ ಕೂತು ಮಾಜಿ ಸಚಿವ ಜಯಚಂದ್ರ ಅವರು ರೈತ ಪ್ರತಿನಿಧಿಯ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರ್.ಎಂ.ಸಿ. ಅಧ್ಯಕ್ಷರ ಆರೋಪವನ್ನು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಶಶಿಧರಗೌಡ ಅಲ್ಲಗಳೆದಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22 ರಂದು ಮಂಗಳವಾರದ ಮಾರುಕಟ್ಟೆ ಪ್ರಾಂಗಣಕ್ಕೆ ಟಿ.ಬಿ.ಜಯಚಂದ್ರ ಭೇಟಿ ನೀಡಿ ಬೆಲೆ ಕುಸಿತದದ ಬಗ್ಗೆ ಚರ್ಚಿಸಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಆರ್.ಎಂ.ಸಿ. ಕಾರ್ಯದರ್ಶಿಗಳು ಕಚೆರಿಗೆ ಆಹ್ವಾನ ನೀಡಿದ್ದರಿಂದ ಕಚೆರಿಯೊಳಕ್ಕೆ ಜಯಚಂದ್ರ ತೆರಳಿದರು ಎಂದರು.
ಜಯಚಂದ್ರ ಅವರೊಟ್ಟಿಗೆ ಇದೇ ಎ.ಪಿ.ಎಂ.ಸಿ.ಯ ಅನೇಕ ನಿರ್ದೇಶಕರು ಕೂಡ ಜೊತೆಯಲ್ಲಿದ್ದೆವು. ಅವರು ಕುಳಿತುಕೊಂಡ ಕುರ್ಚಿಗಳಿದ್ದ ಆವರಣ ಅಧ್ಯಕ್ಷರ ಕೊಠಡಿಯೇ ಅಲ್ಲ. ನಾವು ಕಂಡಂತೆ ಅದು ಟೆಂಡರ್ ಹಾಲ್ ಆಗಿದೆ. ಅಧ್ಯಕ್ಷರ ಕುರ್ಚಿಯಲ್ಲಿ ಕೂತು ಬೀಗುವಂತಹ ಪ್ರವೃತ್ತಿ ಅವರದ್ದಲ್ಲ ಎಂದರು.
ಓರ್ವ ಜನಪ್ರತಿನಿಧಿಯ ಕುರ್ಚಿಯಲ್ಲಿ ಕೂರಬಾರದೆಂಬ ಸಮಯಪ್ರಜ್ಞೆ ಅವರಿಗಿದೆ. ಈ ಹಿಂದೆ ಶಿರಾದಲ್ಲಿ ನಡೆದಿದ್ದ ಶೇಂಗಾ ಗಲಭೆಯಂತಹ ಪ್ರಕರಣ ಮರುಕಳಿಸಬಾರದೆಂಬ ದೃಷ್ಟಿಯಿಂದ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಇಚ್ಛಾಶಕ್ತಿಯಿಂದ ಮಾಜಿ ಸಚಿವರು ರೈತರೊಟ್ಟಿಗೆ ಚರ್ಚಿಸಲು ಭೇಟಿ ನೀಡಿದ್ದರು. ಅಧ್ಯಕ್ಷರ ಹೇಳಿಕೆಯಂತೆ ಜಯಚಂದ್ರ ಅವರು ಕ್ಷಮೆ ಕೇಳುವಂತಹ ತಪ್ಪನ್ನು ಮಾಡಿಯೇ ಇಲ್ಲ, ಕ್ಷಮೆ ಕೇಳುವ ಪ್ರಮೇಯವೂ ಇಲ್ಲ. ಇಷ್ಟಕ್ಕೂ ಮಂಗಳವಾರ ಮಾರುಕಟ್ಟೆಯ ದಿನವಾಗಿದ್ದರೂ ಅಧ್ಯಕ್ಷರು ಮಾರುಕಟ್ಟೆಗೆ ಬಂದಿಲ್ಲದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಈ ಹಿಂದೆ ನಾವುಗಳು ಅಧ್ಯಕ್ಷರಾಗಿದ್ದಾಗ ಪ್ರತಿ ಮಂಗಳವಾರದ ಮಾರುಕಟ್ಟೆಯಲ್ಲಿ ಸಂಜೆವರೆಗೂ ಇದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆವು ಎಂದು ಶಶಿಧರಗೌಡ ಹಾಗೂ ಸತ್ಯನಾರಾಯಣ್ ಸುದ್ದಿಗಾರರಿಗೆ ತಿಳಿಸಿದರು.
ಜಯಚಂದ್ರ ಒಬ್ಬ ಗ್ರಾ.ಪಂ. ಸದಸ್ಯರಲ್ಲ. ಅವರು ರಾಜ್ಯದಲ್ಲಿ ಸಚಿವ ಸ್ಥಾನಗಳನ್ನು ಅಲಂಕರಿಸಿದವರು. ಓರ್ವ ಮಾಜಿ ಶಾಸಕರಿಗೆ ಗೌರವ ನೀಡುವ ದೃಷ್ಟಿಯಿಂದ ಕಾರ್ಯದರ್ಶಿ ಕಚೇರಿಗೆ ಆಹ್ವಾನಿಸಿ ಕೂರಿಸುವುದು ಅಪರಾಧವೆಂಬ ಹೇಳಿಕೆ ಹಾಸ್ಯಾಸ್ಪದ. ಸುದ್ದಿಗೋಷ್ಠಿ ನಡೆಸಿದ್ದ ಆರ್.ಎಂ.ಸಿ. ಅಧ್ಯಕ್ಷ ಚಂದ್ರೇಗೌಡರಿಗೆ ನಾವು ದೂರವಾಣಿ ಕರೆ ಮಾಡಿ ಏಕೆ ಸುದ್ದಿಗೋಷ್ಠಿ ನಡೆಸಿ ಇಂತಹ ಕೆಲಸ ಮಾಡಿದಿರಿ ಎಂದು ಪ್ರಶ್ನಿಸಿದಾಗ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಒತ್ತಡದಿಂದ ಜಯಚಂದ್ರ ವಿರುದ್ಧ ಸುದ್ದಿಗೋಷ್ಠಿ ನಡೆಸಿದೆ ಅಷ್ಟೆ ಎಂದು ತಮ್ಮ ಅಸಹಾಯಕತೆಯನ್ನು ಒಪ್ಪಿಕೊಂಡರು ಎಂದು ಶಶಿಧರಗೌಡ ಹೇಳಿದರು.
ಎ.ಪಿ.ಎಂ.ಸಿ. ನಿರ್ದೇಶಕರಾದ ಸತ್ಯನಾರಾಯಣ್, ಸಿದ್ಧಪ್ಪ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಮುಖಂಡರಾದ ಸೋರೆಕುಂಟೆ ಸತ್ಯನಾರಾಯಣ್, ಜನಾರ್ಧನ್, ಲೋಕೇಶ್, ಹರೀಶ್, ಸುಧಾಕರಗೌಡ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ