ಹುಳಿಯಾರು
ಹುಳಿಯಾರು ಎಪಿಎಂಸಿಯಲ್ಲಿ ಪ್ರತಿ ಗುರುವಾರ ಕೊಬ್ಬರಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಮಂಗಳವಾರ ತಿಪಟೂರು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಲಾಕ್‍ಡೌನ್ ಸಂದರ್ಭದಲ್ಲಿ ರೈತರು ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಮಾರಿ ಸಂಕಷ್ಟಕ್ಕೆ ಸಿಲುಕಬಾರದೆಂದು ಕೊಬ್ಬರಿ ಸೇರಿದಂತೆ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ವಹಿವಾಟಿಗೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಹಾಗಾಗಿ ಕೊರೊನಾ ಸೊಂಕು ಹರಡದಂತೆ ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವಹಿವಾಟು ನಡೆಸುವಂತೆ ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಸೋಮವಾರದಿಂದ ಗುರುವಾರದವರೆವಿಗೆ ಮಾತ್ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆವಿಗೆ ರೈತರಿಗೆ ಎಪಿಎಂಸಿಗೆ ಪ್ರವೇಶ ನಿಗದಿ ಮಾಡಲಾಗಿದೆ. ಉಳಿದ ದಿನಗಳಾದ ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 10 ರಿಂದ 6 ಗಂಟೆಯವರೆವಿಗೆ ವರ್ತಕರಿಗೆ ಲೋಡಿಂಗ್ ಮಾಡಲು ಅವಕಾಶ ನೀಡಲಾಗಿದೆ. ಭಾನುವಾರ ಎಂದಿನಂತೆ ಮಾರುಕಟ್ಟೆಗೆ ರಜೆ ಇರುತ್ತದೆ ಎಂದು ಉಪವಿಭಾಗಾಧಿಕಾರಿಗಳು ಮಾಹಿತಿ ನೀಡಿದರು.
ಎಪಿಎಂಪಿ ಪ್ರವೇಶ ದ್ವಾರದಲ್ಲಿ ಫಿವರ್ ಕ್ಲಿನಿಕ್ ತೆರೆಯಲಿದ್ದು, ಎಪಿಎಂಸಿಗೆ ಬರುವ ಪ್ರತಿಯೊಬ್ಬರಿಗೂ ತಪಾಸಣೆ ನಡೆಸಿ ಪ್ರವೇಶ ನೀಡಲಾಗುವುದು. ಅನುಮಾನ ಬಂದವರನ್ನು ಹೆಚ್ಚಿನ ತಪಾಸಣೆಗೆ ಕಳುಹಿಸಿಕೊಡಲಾಗುವುದು. ರೈತರ ವಿನಹ ಸಾರ್ವಜನಿಕರಿಗೆ ಎಪಿಎಂಸಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಓಡಾಟ ಕಂಡುಬಂದರೆ ಶಿಕ್ಷೆಗೆ ಗುರಿಪಡಿಸಲಾಗುವುದು. ಹಮಾಲರಿಗೆ ಜಿಲ್ಲೆಯಲ್ಲಿ ಗೂಡ್ಸ್ ವಾಹನದೊಂದಿಗೆ ಪ್ರವೇಶಿಸಲು ಗುರುತಿನ ಚೀಟಿ ನೀಡಲಿದ್ದು, ಗಡಿ ದಾಡಿ ಬಂದರೆ ಗುರುತಿನ ಚೀಟಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವಿವರಿಸಿದರು.
ಹೊರರಾಜ್ಯ ಮತ್ತು ಜಿಲ್ಲೆಗೆ ಲೋಡಿಂಗ್‍ಗಾಗಿ ಎಪಿಎಂಸಿಗೆ ಬರುವ ಗೂಡ್ಸ್ ವಾಹನಗಳ ಡ್ರೈವರ್‍ಗಳನ್ನು ವಾಹನ ನಿಲ್ಲಿಸಿದ ತಕ್ಷಣ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಲೋಡಿಂಗ್ ಆದ ತರುವಾಯ ಆತ ಕೊಠಡಿಯಿಂದ ಬಂದು ವಾಹನ ತೆಗೆದುಕೊಂಡು ಹೋಗಬೇಕಿದೆ. ಈ ಸಂದರ್ಭದಲ್ಲಿ ಆತ ಇಲ್ಲಿನ ರೈತರು, ವರ್ತಕರು, ಹಮಾಲರ ಬಳಿ ಯಾವುದೇ ಕಾರಣಕ್ಕೂ ಮಾತನಾಡುವಂತಿಲ್ಲ. ಅಲ್ಲದೆ ಈತ ಸ್ಥಳೀಯ ಚಾಲಕನಾಗಿದ್ದರೆ ಆತ ಮತ್ತು ಆತನ ಕುಟುಂಬವನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗುವುದು. ಆದರೆ ಆತನಿಗೆ ಲೋಡಿಂಗ್‍ಗೆ ಹೋಗಲು ಮಾತ್ರ ಅವಕಾಶ ವಿದ್ದು ಉಳಿದಂತೆ ಮನೆಯಲ್ಲೇ ಇರಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್‍ಪಿ ಎನ್.ಚಂದನ್‍ಕುಮರ್, ತಹಸೀಲ್ದಾರ್ ತೇಜಸ್ವಿನಿ, ಸಿಪಿಐ ವೀಣಾ, ಪಿಎಸ್‍ಐ ರಮೇಶ್, ಎಪಿಎಂಸಿಯ ರಾಜೇಂದ್ರ ಸೇರಿದಂತೆ ವರ್ತಕರು, ರವಾನೆದಾರರು, ರೈತರು, ಹಮಾಲರು, ಚಾಲಕರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ