ಕೊರೋನಾ ಹಿನ್ನೆಲೆ ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮ

ತುಮಕೂರು
    ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶದನ್ವಯ ತುಮಕೂರು ಮಹಾನಗರ ಪಾಲಿಕೆಯೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಮಾರ್ಚ್ 14 ರಿಂದ ಮುಂದಿನ ಒಂದು ವಾರದ ಕಾಲ ನಗರದಾದ್ಯಂತ ಸಭೆ, ಸಮಾರಂಭಗಳನ್ನು ಹಾಗೂ ಚಲನಚಿತ್ರ ಮಂದಿರಗಳು ಸೇರಿ ಹೆಚ್ಚು ಜನ ಸೇರುವ ಎಲ್ಲ ಕಾರ್ಯಕ್ರಮಗಳನ್ನು ನಿಷೇಧಿಸಿ ಶನಿವಾರ ಬೆಳಗ್ಗೆ ಆದೇಶ ಹೊರಡಿಸಿದೆ.  
    ಪ್ರಸ್ತುತ ಬೇಸಿಗೆ ಆಗಿರುವುದರಿಂದ ಕಾಲರಾ ಹಾಗೂ ಕರುಳು ಬೇನೆ ಹರಡುವ ಆತಂಕವೂ ಇರುವುದರಿಂದ ಅದಕ್ಕೆ ಸಂಬಂಧಿಸಿದಂತೆಯೂ ಕೆಲವೊಂದು ನಿರ್ಬಂಧಗಳನ್ನು ಈ ಆದೇಶದಲ್ಲಿ ಪಾಲಿಕೆಯ ಆಯುಕ್ತರು ವಿಧಿಸಿದ್ದಾರೆ. 
ಪಾಲಿಕೆಯ ನಿರ್ಬಂಧಗಳು
1)ಅತಿ ಹೆಚ್ಚು ಜನ ಸೇರುವ ಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕಗಳು, ರಂಗಮಂದಿರಗಳು, ಪಬ್‍ಗಳು, ನೈಟ್‍ಕ್ಲಬ್‍ಗಳು, ವಸ್ತು ಪ್ರದರ್ಶನಗಳು, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಹಾಗೂ ಇತರೆ ಹೆಚ್ಚಾಗಿ ಜನ ಸೇರುವಂತಹ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
2)ತುಮಕೂರು ಮಹಾನಗರಪಾಲಿಕೆಯ ಪೂರ್ವಾನುಮತಿ ಪಡೆಯದೆ ಯಾವುದೇ ಬೇಸಿಗೆ ಶಿಬಿರಗಳು, ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
3)ಹೆಚ್ಚು ಜನರು ಬಳಸುವ ಜಿಮ್‍ಸೆಂಟರ್‍ಗಳು, ಪಿ.ಜಿ.ಗಳು, ಕೋಚಿಂಗ್ ಕ್ಲಾಸ್‍ಗಳು, ಈಜುಕೊಳಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು.
4)ಹೋಟೆಲ್‍ಗಳ ಪಾರ್ಟಿಹಾಲ್‍ಗಳಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ.
5)ಆಲ್ಕೋಹಾಲ್ ಅಂಶವನ್ನು ಒಳಗೊಂಡ ಹ್ಯಾಂಡ್‍ವಾಶ್/ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ಎಲ್ಲಾ ಹೋಟೆಲ್‍ಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳು, ಶಾಲಾ-ಕಾಲೇಜುಗಳು, ಸರ್ಕಾರಿ/ಖಾಸಗಿ ಕಛೇರಿಗಳಲ್ಲಿ ಹಾಗೂ ಇತರೆ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು.
6)ಸರ್ಕಾರಿ ಹಾಗೂ ಸರ್ಕಾರೇತರ ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯವನ್ನು ಕಾಪಾಡಲು ಅತಿ ಹೆಚ್ಚಿನ ಆದ್ಯತೆ ನೀಡುವುದು.
7)ಬೀದಿ ಬದಿಯಲ್ಲಿ ಮಾರಾಟ ಮಾಡುವ ಕತ್ತರಿಸಿದ ಹಣ್ಣುಗಳ ಮಾರಾಟಗಾರರು, ಮಾಂಸಾಹಾರಿ ಖಾದ್ಯ ತಯಾರಕರು/ಮಾರಾಟಗಾರರು, ತೆರೆದ ಸ್ಥಳಗಳಲ್ಲಿ ಆಹಾರವನ್ನು ತಯಾರಿಸಿ ಮಾರಾಟ ಮಾಡುವವರು ತಮ್ಮ ಉದ್ದಿಮೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವುದು.
8)ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಮಹಾನಗರಪಾಲಿಕೆಯ ವಾಹನಗಳಿಗೆ ನೀಡುವುದು ಎಂದು ಪಾಲಿಕೆಯು ನಿರ್ಬಂಧಗಳನ್ಮ್ನ ವಿಧಿಸಿದೆ.
ಖಾಸಗಿ ಆಸ್ಪತ್ರೆಗೆ ಸೂಚನೆ 
    ಇದಲ್ಲದೆ, ನಗರದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶಂಕಿತ ನೋವೆಲ್ ಕೊರೋನ ಲಕ್ಷಣವುಳ್ಳ ವ್ಯಕ್ತಿಗಳು ದಾಖಲಾಗಿದ್ದಲ್ಲಿ ತಕ್ಷಣವೇ ಆರೋಗ್ಯ ಇಲಾಖೆಗೆ ಮಾಹಿತಿ ಒದಗಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಪಾಲಿಕೆಯು ಸೂಚಿಸಿದೆ. 
ಪಾಲಿಸದಿದ್ದರೆ ಕ್ರಮ
    ಪಾಲಿಕೆಯು ನೀಡಿರುವ ಈ ಎಲ್ಲಾ ಸೂಚನೆಗಳನ್ನು ಸಂಬಂಧಪಟ್ಟವರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಎಚ್ಚರಿಸಿದ್ದಾರೆ.  
ಕೊರೋನಾ ಎಫೆಕ್ಟ್ 
    ತುಮಕೂರು ನಗರದಲ್ಲಿ ಇದೀಗ ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು ಓಡಾಡುವ ದೃಶ್ಯಗಳು ತುಮಕೂರಿನ ವಿವಿಧೆಡೆ ಕಂಡುಬರತೊಡಗಿದೆ. ನಗರದ ವಿವಿಧ ಬಡಾವಣೆಯಲ್ಲಿರುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯದ ಮಳಿಗೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಗ್ರಾಹಕರ ಕೊರತೆ ಕಂಡುಬರತೊಡಗಿದೆ. 
    ಸಣ್ಣಪುಟ್ಟ ಕಾರ್ಯಕ್ರಮಗಳನ್ನು (ಹುಟ್ಟು ಹಬ್ಬ ಇತ್ಯಾದಿ) ಏರ್ಪಡಿಸಿದಾಗ ಅದಕ್ಕೆ ಬರುವ ಆಹ್ವಾನಿತರ ಸಂಖ್ಯೆಯಲ್ಲೂ ಭಾರಿ ಇಳಿಕೆ ಕಂಡುಬರತೊಡಗಿದ್ದು, ಆಹ್ವಾನಿತರಿಗೆಂದು ಸಿದ್ಧಪಡಿಸಿದ್ದ ಅಡುಗೆ ಪದಾರ್ಥಗಳು ವ್ಯರ್ಥವಾಗುವ ಸಂದರ್ಭಗಳೂ ಉಂಟಾಗುತ್ತಿವೆ.
    ಇದಲ್ಲದೆ ಕಲ್ಯಾಣ ಮಂಟಪ/ಸಮುದಾಯ ಭವನಗಳ ವ್ಯವಸ್ಥಾಪಕರು ಅದನ್ನು ಬಾಡಿಗೆಗೆ ಪಡೆದಿರುವ ಸಾರ್ವಜನಿಕರಿಗೆ ಸಮಾರಂಭವನ್ನು ಮುಂದೂಡುವಂತೆ ಮನವಿ ಮಾಡಿಕೊಳ್ಳುತ್ತಿದ್ದು, ಒಂದು ವೇಳೆ ಸಮಾರಂಭವನ್ನು ನೀವು ಒತ್ತಡ ತಂದು ಏರ್ಪಡಿಸಿದರೆ ಅದಕ್ಕೆ ನಾವೇನೂ ಮಾಡಲಾಗದು. ಆಗ ಅಧಿಕಾರಿಗಳು ಬಂದು ಸಮಾರಂಭವನ್ನು ಸ್ಥಗಿತಗೊಳಿಸಿದರೆ, ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸುತ್ತಿರುವ ಪ್ರಸಂಗಗಳೂ ನಡೆಯುತ್ತಿವೆ. ಶಾಲೆಗಳಿಗೆ ರಜೆ ಇರುವುದರಿಂದ ಸಹಜವಾಗಿ ರಸ್ತೆಗಳಲ್ಲಿ ಜನ ಸಂಚಾರ, ವಾಹನ ಸಂಚಾರ ಕಡಿಮೆಯಾಗಿದೆ.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap