ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

ದಾವಣಗೆರೆ:

      ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸುವ ಚಿಂತನೆ ಇದ್ದು, ಸರ್ಕಾರವೂ ಇದೇ ಪ್ರಯತ್ನದಲ್ಲಿದೆ ಎಂದು ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.

     ಜಿಲ್ಲೆಯ ಚನ್ನಗಿರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯ ಎಸ್ಸೆಸ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಹೈಟೆಕ್ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಸೌಲಭ್ಯ ನೀಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದರು.

    ಕೊರೊನಾ ವೈರಸ್ ಹಾವಳಿ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾಗಲು ಕಾನೂನು ವೈಫಲ್ಯವೇ ಕಾರಣವಾಗಿದೆ ಎಂದ ಅವರು, ರಾಜ್ಯಾದ್ಯಂತ ಲಾಕ್‍ಡೌನ್ ನಿಯಮಗಳನ್ನು ಬಿಗಿಯಾಗಿ ಪಾಲನೆ ಮಾಡಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಠಿಣ ಕ್ರಮಗಳನ್ನೂ ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.

    ಮಾರಕ ಕೊರೊನಾ ವೈರಸ್ ಹಾವಳಿ ತಡೆಗೆ ಕೇಂದ್ರ-ರಾಜ್ಯ ಸರ್ಕಾರಗಳು ಲಾಕ್ ಡೌನ್ ಘೋಷಿಸಿದ್ದು, ಅದನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡಬೇಕು. ಈ ಮೂಲಕ ಮಾರಕ ವೈರಸ್ ನಿಯಂತ್ರಣಕ್ಕೆ ಸರ್ಕಾರಗಳೊಂದಿಗೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.

    ಬೆಂಗಳೂರಿನ ಪಾದರಾಯನಪುರ ಘಟನೆ ಅತ್ಯಂತ ಖಂಡನೀಯವಾಗಿದೆ. ಉತ್ತರ ಪ್ರದೇಶ, ಕೇರಳ ರಾಜ್ಯಗಳ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲೂ ಬಿಗಿಯಾದ ಕಾನೂನುಗಳನ್ನು ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಆದಷ್ಟು ಬೇಗನೆ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಲಿದೆ ಎಂದರು.

    ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಈ ಬಗ್ಗೆ ಶೀಘ್ರವೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ರೈತರ ಹಿತ ಕಾಯಲು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

      ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಪಂ ಸಿಇಓ ಪದ್ಮಾ ಬಸವಂತಪ್ಪ ಮತ್ತಿತರರು ಹಾಜರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap