ತಿರುವನಂತಪುರಂ:
ಮಾರಕ ಕೊರೋನಾ ವೈರಸ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಕೇರಳದಲ್ಲಿ ನಿನ್ನೆಯಷ್ಟೇ ಐವರಲ್ಲಿ ವೈರಸ್ ದೃಢಪಟ್ಟ ಬೆನ್ನಲ್ಲೇ ಇದೀಗ ಮೂರು ವರ್ಷದ ಮಗುವಿನ ದೇಹದಲ್ಲಿ ವೈರಸ್ ಇರುವುದು ದೃಢಪಟ್ಟಿದೆ ಇದರಿಂದಾಗಿ ಕೊರೋನಾ ಪೀಡಿತರ ಸಂಖ್ಯೆ 43ಕ್ಕೆ ಏರಿದಂತಾಗಿದೆ.
ಇಟಲಿಯಿಂದ ಇತ್ತೀಚೆಗಷ್ಟೇ ಕೇರಳ ರಾಜ್ಯಕ್ಕೆ ಹಿಂತಿರುಗಿದ್ದ 3 ವರ್ಷದ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪಸ್ತುತ ಮಗುವನ್ನು ಎರ್ನಾಕುಲಂ ವೈದ್ಯಕೀಯ ಕಾಲೇಜಿನಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ನಿನ್ನೆಯಷ್ಟೇ ಐವರಲ್ಲಿ ವೈರಸ್ ಪತ್ತೆಯಾಗಿತ್ತು. ಪಟ್ಟಣಂತಿಟ್ಟ ಮೂಲದ ಐವರು ಸೋಂಕಿತರು ಕೊರೋನಾ ಪೀಡಿತ ಇಟಲಿಯ ವೆನಿಸ್’ಗೆ ತೆರಳಿದ್ದರು. ಐವರಲ್ಲಿ ದಂಪತಿ, ಅವರ ಪುತ್ರ ಹಾಗೂ ಇಬ್ಬರು ಸಂಬಂಧಿಕರಿದ್ದರು ಎಂದು ಹೇಳಲಾಗುತ್ತಿದ್ದು. ಒಂದು ವಾರದ ಹಿಂದೆ ವಾಪಸು ಬಂದಾಗ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ಅದು ಹೇಗೋ ತಪ್ಪಿಸಿಕೊಂಡು ಮನೆಗ ವಾಪಸ್ಸಾಗಿದ್ದರು.
ಈಗ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಕೇರಳ ಆರೋಗ್ಯ ಸಚಿವಾಲಯ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು. ಯಾರು ವಿದೇಶಗಳಿಗೆ ಹೋಗಿ ಬರುತ್ತಾರೋ ಹಾಗೂ ಸೋಂಕಿನ ಲಕ್ಷಣ ಹೊಂದುತ್ತಾರೆಯೋ ಅವರು ವಿಷಯವನ್ನು ಸರ್ಕಾರಕ್ಕೆ ತಿಳಿಸಿ ತಪಾಸಣೆಗಗೊಳಪಡಬೇಕು ಎಂದು ಹೇಳಿದೆ. ಈ ನಡುವೆ ದೇಶದಾದ್ಯಂತ ಸೋಂಕಿತ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಈ ವರೆಗೂ 43 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.