ತುಮಕೂರು :

ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ಇಂಡಿಯಾ ಲಾಕ್ ಆಗಿದ್ದು, ತುಮಕೂರಿನಲ್ಲಿಯೂ ಎಲ್ಲ ಅಂಗಡಿ ವಹಿವಾಟು ಬಂದ್ ಆಗಿದೆ. ಅಗತ್ಯ ವಸ್ತುಗಳ ಹೊರತಾಗಿ ಬೇರೆ ಯಾವುದೇ ವಹಿವಾಟು ನಡೆಯುತ್ತಿಲ್ಲ. ಮಟನ್ ಅಂಗಡಿಗಳು ಕ್ಲೋಸ್ ಆಗಿವೆ. ಚಿಕನ್ ಅಂತೂ ಸಂಪೂರ್ಣ ನಿಷೇಧವಾಗಿದೆ. ಚಿಕನ್ ಅಂಗಡಿಗಳು ಬಾಗಿಲು ಹಾಕಿ ಬಹಳ ದಿನಗಳೇ ಆಗಿವೆ.
ಈ ಅಂಗಡಿಗಳ ಸುತ್ತ-ಮುತ್ತ ಓಡಾಡಿಕೊಂಡು ಮೂಳೆ, ಕೋಳಿ ಕಸ, ಮಾಂಸದ ಉಳಿದ ತ್ಯಾಜ್ಯ ತಿಂದುಕೊಂಡು ಬೀದಿ ಬದಿಗಳಲ್ಲಿ ಸುತ್ತುತ್ತಿದ್ದ ಬೀದಿ ನಾಯಿಗಳಿಗೆ ಈಗ ಆಹಾರ ಇಲ್ಲವಾಗಿದೆ. ಕಳೆದ ಒಂದು ವಾರದಿಂದ ನಾಯಿಗಳು ಆಹಾರವಿಲ್ಲದೆ ಸುತ್ತುತ್ತಿವೆ. ಮಟನ್ ಅಂಗಡಿಗಳು ಮಾತ್ರವಲ್ಲ ಹೋಟೆಲ್‍ಗಳೂ ಕೂಡ ಬಂದ್ ಆಗಿವೆ. ಸಣ್ಣ ಪುಟ್ಟ ಹೋಟೆಲ್‍ಗಳೂ ನಡೆಯುತ್ತಿಲ್ಲ. ಹೀಗಾಗಿ ಬೀದಿ ನಾಯಿಗಳಿಗೆ ಎಲ್ಲಿಯೂ ಆಹಾರ ಸಿಗುತ್ತಿಲ್ಲ.
ಈ ಹಿಂದೆ ಎಲ್ಲಿಯೂ ಆಹಾರ ಸಿಗಲಿಲ್ಲ ಎಂದರೆ ಕೆಲವು ಕಡೆ ಉಳಿದು ಬಿಸಾಕುವ ಆಹಾರದ ಪೊಟ್ಟಣವನ್ನು ತಿಂದು ಜೀವನ ಸಾಗಿಸುತ್ತಿದ್ದವು. ಈಗ ಎಲ್ಲಿಯೂ ವೇಸ್ಟ್ ಆಹಾರ ಕಂಡುಬರುತ್ತಿಲ್ಲ. ಹೀಗಾಗಿ ಬೀದಿ ನಾಯಿಗಳಿಗೆ ಯಾವ ಮೂಲದಿಂದಲೂ ಆಹಾರ ದೊರಕುತ್ತಿಲ್ಲ.
ಬಹಳಷ್ಟು ನಾಯಿಗಳು ಹೋಟೆಲ್, ಆಸ್ಪತ್ರೆಯ ಹಿಂಭಾಗ, ಅದರ ಸುತ್ತ-ಮುತ್ತ, ಸಣ್ಣ ಸಣ್ಣ ಟೀ ಅಂಗಡಿಗಳ ಮುಂದೆ ಸುತ್ತುತ್ತಾ ಟೀ ಕುಡಿಯುವವರು ಹಾಕುವ ಬಿಸ್ಕೆಟ್, ಬನ್‍ಗಳನ್ನು ನಾಯಿಗಳಿಗೆ ಹಾಕುತ್ತಿದ್ದರು. ಎಷ್ಟೋ ನಾಯಿಗಳು ಇಂತಹ ಆಹಾರದಿಂದಲೇ ಬದುಕುತ್ತಿದ್ದವು. ಈಗ ಬೀದಿಯಲ್ಲಿ ಓಡಾಡುವ ಅನಾಥರಿಗೆ, ಇನ್ನೂ ಕೆಲವರಿಗೆ ಆಹಾರ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾಯಿಗಳಿಗೆ ಆಹಾರ ಇನ್ನೆಲ್ಲಿ ಸಿಗಬೇಕು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೀದಿ ನಾಯಿಗಳ ಪರಿಸ್ಥಿತಿ ಮತ್ತಷ್ಟು ಕಠಿಣವಾಗಲಿದೆ. ಪ್ರಾಣಿಗಳ ಬಗ್ಗೆ ಮಾತನಾಡುವ ಸಂಘಗಳು ಈಗ ಏನು ಮಾಡುತ್ತಿವೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
