ಗೌರಿ-ಗಣೇಶ ಮೂರ್ತಿ ವ್ಯಾಪಾರಕ್ಕೂ ತಟ್ಟಿದ ಕೊರೊನಾ ಎಫೆಕ್ಟ್

ಹುಳಿಯಾರು

     ಕೊರೊನಾ ವೈರಸ್‍ನಿಂದ ಇಡೀ ಜಗತ್ತೇ ನಲುಗಿ ಹೋಗಿದ್ದು ಅನೇಕ ವ್ಯಾಪಾರ ವಹಿವಾಟುಗಳು ಬಿದ್ದು ಹೋಗಿ ಆರ್ಥಿಕ ವ್ಯವಸ್ಥೆಯೆ ಬುಡಮೇಲಾಗಿದೆ. ರೈತರು, ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಚಾಲಕರು ಹೀಗೆ ಅನೇಕ ಸ್ವಉದ್ಯೋಗಿಗಳು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.

    ಈ ಕೊರೊನಾ ಎಫೆಕ್ಟ್ ಗುಡಿ ಕೈಗಾರಿಕೆಗಳ ಮೇಲೂ ಪರಿಣಾಮ ಬೀರುತ್ತಿದ್ದು, ಗೌರಿಗಣೇಶ ಹಬ್ಬದ ಪ್ರಮುಖ ವ್ಯಾಪಾರವಾದ ಬಿದಿರಿನ ಮೊರ ಹಾಗೂ ಗೌರಿಗಣೇಶ ಮೂರ್ತಿ ವ್ಯಾಪಾರಕ್ಕೂ ಕರಿನೆರಳು ಬೀರಿದೆ. ಹಬ್ಬಕ್ಕೆ ಹತ್ತದಿನೈದು ದಿನಗಳಿರುವಾಗ ಎಲ್ಲೆಡೆ ಗೌರಿ-ಗಣೇಶ ಮೂರ್ತಿಗಳ ಮಾರಾಟ ಭರದಿಂದ ನಡೆಯುತ್ತಿತ್ತು. ಅಲ್ಲದೆ ವಿವಿಧ ಗಣಪತಿ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು. ಆದರೆ, ಈ ಬಾರಿ ಹಬ್ಬ ಇನ್ನೆರಡು ದಿನ ಅಷ್ಟೆ ಇರುವಾಗ ಮಾರಾಟಗಾರರು ಪಟ್ಟಣಕ್ಕೆ ಬಂದಿದ್ದಾರೆ. ಪಟ್ಟಣದ ಒಂದೆರಡು ಕಡೆ ಮಾತ್ರ ಗೌರಿಗಣೇಶನ ಮೂರ್ತಿಗಳನ್ನು ಮಾರುತ್ತಿದ್ದು, ಅದೂ ಕೆಲವೇ ಕೆಲವು ಮೂರ್ತಿಗಳನ್ನು ಮಾತ್ರ ತಂದಿದ್ದಾರೆ.

    ಗೌರಿಗಣೇಶ ಹಬ್ಬವೆಂದರೆ ಮನೆಗಳಿಗೆ ಮೂರ್ತಿಗಳನ್ನು ಕೊಂಡೊಯ್ಯುವುದೇ ಸಂಭ್ರಮವಾಗಿದ್ದು ಮಕ್ಕಳು, ಮಹಿಳೆಯರು ತರಹೇವಾರಿ ಗಣೇಶನನ್ನು ಕೊಂಡುಕೊಳ್ಳಲು ಮುಗಿ ಬೀಳುತ್ತಿದ್ದರು. ಒಂದರ್ಥದಲ್ಲಿ ವಾರದ ಮೊದಲೆ ಮಾರುಕಟ್ಟೆಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತಿತ್ತು ಆದರೆ ಈ ವರ್ಷ ಕೊರೊನಾ ಸೋಂಕಿನ ಭೀತಿಯಿಂದ ಹಾಗೂ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸರ್ಕಾರ ಸೂಚಿಸಿರುವುದರಿಂದ ಜನ ಮೂರ್ತಿಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದು ಮಾರುಕಟ್ಟೆಯಲ್ಲಿ ಸಂಭ್ರಮದ ವಾತಾರವಣ ಇಲ್ಲದೆ ಬಣಗುಡುತ್ತಿದೆ.

   ಪ್ರತಿ ವರ್ಷ ನೂರಾರು ದೊಡ್ಡ ಮೂರ್ತಿಗಳನ್ನು, ಸಾವಿರಾರು ಚಿಕ್ಕ ಮೂರ್ತಿಗಳನ್ನು ಮಾರಿ ಲಕ್ಷಗಟ್ಟಲೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಈ ವರ್ಷ ಕೊರೊನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಹಬ್ಬ ಆಚರಿಸುವ ಉತ್ಸಾಹ ಜನರಲ್ಲಿ ಕಂಡು ಬರುತ್ತಿಲ್ಲ. ಹಾಗಾಗಿ ಮೂರ್ತಿ ಖರೀದಿಸಲು ಮುಂದಾಗುತ್ತಿಲ್ಲ. ಪರಿಣಾಮ ಈ ಹಬ್ಬವನ್ನೇ ನಂಬಿ ಮೂರ್ತಿ ತಯಾರು ಮಾಡುವ ನಮ್ಮಂತಹ ಕಲಾವಿದರಿಗೆ ತೀವ್ರ ನೋವು ಮತ್ತು ನಷ್ಟವಾಗಿದೆ ಎಂದು ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿಯ ಕಲಾವಿದ ಚಂದ್ರಶೇಖರಯ್ಯ ತಮ್ಮ ನೋವು ಹಂಚಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link