ಕೊರೋನಾವನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ : ಬಿ ಸಿ ಪಾಟೀಲ್

ಹಿರಿಯೂರು

     ಇಡೀ ಜಗತ್ತಿಗೆ ಹೋಲಿಸಿದರೆ ಭಾರತ ಮತ್ತು ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಇದ್ದು, ಇಲ್ಲಿ ಅದನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಆದರೆ ವಿರೋಧ ಪಕ್ಷದವರು ಟೀಕಿಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.

     ಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ್ ಯೋಜನೆಯನ್ನು ವಿಸ್ತರಿಸಿರುವುದು ನಮ್ಮಿಂದಲೇ ಎಂದು ಕಾಂಗ್ರೆಸ್ ಬಿಂಬಿಸಿಕೊಂಡಿದೆ. ಆದರೆ ಅವರಿಗೆ ಕೇಳಿಕೊಂಡು ಮಾಡುವಂಥದ್ದು ಏನು ಇಲ್ಲ ಎಂದು ತಿರುಗೇಟು ನೀಡಿದರು.

     ಅತ್ಯಂತ ಶಿಸ್ತಿನಿಂದ ಕಟ್ಟುನಿಟ್ಟಾಗಿ ಪ್ರಧಾನಿಗಳು ಲಾಕ್‌ ಡೌನ್ ಘೋಷಿಸಿದ್ದರು. ಕರ್ನಾಟಕದ ಸರ್ಕಾರ ಸಹ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮವಹಿಸಿದೆ. ಕ್ವಾರಂಟೈನ್ ಆಗದೇ ನೇರ ಮನೆಗೆ ಹೋದವರಿಂದ ಸೋಂಕು ಹೆಚ್ಚಿದೆ. ಹೊರರಾಜ್ಯದಿಂದ ಬಂದವರಿಂದಲೇ ಕೊರೊನಾ ಹೆಚ್ಚಿದೆ. ಪ್ರಧಾನಿ ಹಾಗು ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಹರಡುವುದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಇದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೊಗಳಿದರೆ ಅವರು ಸ್ಥಾನ ಕಳೆದುಕೊಳ್ಳುತ್ತಾರೆ. ಅದಕ್ಕೋಸ್ಕರ ಪ್ರಧಾನಿಯವರನ್ನು ಅವರು ಟೀಕಿಸುತ್ತಾರೆ. ಜನರ ಮುಂದೆ ಕೊರೊನಾಗೆ ಸಂಬಂಧಿಸಿದಂತೆ ಖರ್ಚು – ವೆಚ್ಚದ ಶ್ವೇತ ಪತ್ರ ಹೊರಡಿಸುತ್ತೇವೆ ಎಂದರು.

    ಶೀಥಲೀಕರಣಗಳಲ್ಲಿ ರೈತರು ತಮ್ಮ ಬೆಳೆಗಳನ್ನು ದಾಸ್ತಾನು ಮಾಡಿ ಬೆಲೆ ಬಂದಾಗ ಅವುಗಳನ್ನು ಬಳಸುವಂತಹ ವ್ಯವಸ್ಥೆ ಮಾಡಿದ್ದರಿಂದ ಲಾಕ್ ಡೌನ್ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗಿದೆ ಎಂದು ಸಚಿವರು ತಿಳಿಸಿದರು.

    ಬಳ್ಳಾರಿ ಪ್ರಕರಣವನ್ನು ಉಲ್ಲೇಖಿಸಿದ ಅವರು, ಬದುಕಿದ್ದವರಿಗೆ ಎಷ್ಟು ಗೌರವ ಕೊಡುತ್ತೇವೋ ಸಾವನ್ನಪ್ಪಿದ್ದವರಿಗೂ ಅಷ್ಟೇ ಗೌರವಕೊಡಬೇಕು. ನಮ್ಮ ಸಂಸ್ಕೃತಿಯಲ್ಲಿ ಬದುಕಿದ್ದವರು ಸತ್ತ ಮೇಲೂ ಗೌರವ ಕೊಡುತ್ತೇವೆ. ಬಳ್ಳಾರಿಯಲ್ಲಿ ಅಮಾನವೀಯವಾಗಿ ಯಾರಾದರೂ ಕೋವಿಡ್ ಸೋಂಕಿತರ ಶವಸಂಸ್ಕಾರ ಮಾಡಿದ್ದರೆ ಅದು ಖಂಡನೀಯ. ಘಟನೆಗೆ ಕಾರಣರಾದವರನ್ನು ಅಮಾನತು ಮಾಡಲಾಗಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

    ಲಾಕ್ ಡೌನ್ ಆಗುತ್ತದೆ ಎಂದು ತಮಗನಿಸುತ್ತಿಲ್ಲ. ಲಾಕ್ ಡೌನ್ ಆಗಬಾರದು, ಅದು ಖಂಡಿತಾ ಪರಿಹಾರವಲ್ಲ. ಲಾಕ್ ಡೌನ್ ಹೋಗಿದೆ ಅಷ್ಟೇ, ಕೊರೊನಾ ಹೋಗಿಲ್ಲ. ಜನರು ಸುರಕ್ಷತೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ಸ್ಯಾನಿಟೈಜರ್ ಮಾಸ್ಕ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸೋಂಕು ಇರುವವರು ಪರೀಕ್ಷೆ ಮಾಡಿಸಿಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap