ತುಮಕೂರು:ನಗರದ ಸೋಂಕಿತ ವ್ಯಕ್ತಿ ಸಾವು

ತುಮಕೂರು

     ಕೊರೊನಾ ಸೋಂಕು ಇದ್ದ ತುಮಕೂರು ನಗರದ ವ್ಯಕ್ತಿಯೊಬ್ಬರು ಮಂಗಳವಾರ ನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಅಲ್ಲದೆ, ಮಂಗಳವಾರ ಜಿಲ್ಲೆಯಲ್ಲಿ ಮತ್ತೆ ಐದು ಪಾಸಿಟೀವ್ ಪ್ರಕರಣಗಳು ವರದಿಯಾಗಿವೆ. ನಾಲ್ವರು ಪುರುಷರು ಹಾಗೂ ಒಬ್ಬ ಮಹಿಳೆಗೆ ಪಾಸಿಟೀವ್ ಬಂದಿದೆ. ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.

     ತುಮಕೂರು ನಗರದ 56 ವರ್ಷದ ವ್ಯಕ್ತಿ ಉಸಿರಾಟದ ತೊಂದರೆ ಎಂದು ಈ ತಿಂಗಳ 22ರಂದು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ರಕ್ತದ ಒತ್ತಡ ಇತ್ತು. ಇವರನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಇವರು ಮಂಗಳವಾರ ಬೆಳಿಗ್ಗೆ ಮೃತಪಟ್ಟರು ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

    ಸರ್ಕಾರದ ನಿಯಮದಂತೆ ನಗರ ಪಾಲಿಕೆಯ ಸಹಕಾರ ಪಡೆದು ಮೃತರ ಅಂತ್ಯ ಸಂಸ್ಕಾರ ಮಾಡಲಾಗುವುದು. ಹಾಗೂ ಮೃತ ವ್ಯಕ್ತಿ ವಾಸವಿದ್ದ ನಗರದ ಪಿ.ಹೆಚ್.ಕಾಲನಿಯ ಪ್ರದೇಶವನ್ನು ಕಂಟೈನ್‍ಮೆಂಟ್ ಆಗಿ ಪರಿವರ್ತಿಸಲಾಗುವುದು. ಮೃತ ವ್ಯಕ್ತಿ ತುಮಕೂರಿನ ವಿವಿಧೆಡೆ, ಮಧುಗಿರಿ ಹಾಗೂ ಬೆಂಗಳೂರಿನ ಪ್ರವಾಸ ಹಿನ್ನೆಲೆ ಇದ್ದು, ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದರು.

    ಮಧುಗಿರಿಯ ಎಲ್‍ಐಸಿ ಕಚೇರಿಯ 31 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇವರು ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದರು. ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇವರ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು, ಫಲಿತಾಂಶ ಪಾಸಿಟೀವ್ ಬಂದಿದೆ.

     ಇವರ ಪ್ರಾಥಮಿಕ ಸಂಪರ್ಕದ 4 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದ ನಾಲ್ವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.ಮಧುಗಿರಿ ತಾಲ್ಲೂಕಿನ ಅಚ್ಚೇನಹಳ್ಳಿಯ 29 ವರ್ಷದ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ಮಾಡಿದಾಗ ವರದಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರ ಪ್ರಾಥಮಿಕ ಸಂಪರ್ಕದ 28 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದ 12 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಕೊರಟಗೆರೆ ತಾಲ್ಲೂಕು ಕೆ.ನಾಗೇನಹಳ್ಳಿಯ 26 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಕೊರಟಗೆರೆ ಆಸ್ಪತ್ರೆಯಲ್ಲಿ ಇವರ ಗಂಟಲು ದ್ರವದ ಮಾದರಿ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಸೋಂಕು ದೃಢಪಟ್ಟಿದೆ.

   ಇವರ ಪ್ರಾಥಮಿಕ ಸಂಪರ್ಕದ 58 ಜನರನ್ನು ಹೊಳವನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಹಾಗೂ ಬಜ್ಜನಹಳ್ಳಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದ 100 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯ 21 ವರ್ಷದ ಯುವಕನಿಗೂ ಕೊರೊನಾ ಸೋಂಕು ಹರಡಿದೆ. ಇವರಿಗೆ ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸದ ಹಿನ್ನೆಲೆ ಇದೆ. ಚಿಕ್ಕನಾಯಕನಹಳ್ಳಿಯ ಆಸ್ಪತ್ರೆಯಲ್ಲಿ ಇವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ತುಮಕೂರು ಆಸ್ಪತ್ರೆಯ ಲ್ಯಾಬ್‍ನಲ್ಲಿ ಪರೀಕ್ಷೆ ಮಾಡಲಾಗಿ, ಫಲಿತಾಂಶ ಪಾಸಿಟೀವ್ ವರದಿ ಬಂದಿದೆ.

    ಇವರ ಪ್ರಾಥಮಿಕ ಸಂಪರ್ಕದ 8 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ಹೇಳಿದ್ದಾರೆ.

   ಸೋಂಕು ದೃಢಪಟ್ಟ ಈ ನಾಲ್ವರನ್ನೂ ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ.ತುಮಕೂರು ಜಿಲ್ಲೆಯಲ್ಲಿ ಮಂಗಳವಾರದವರೆಗೆ ಕೋವಿಡ್ ಸೋಂಕು ದೃಢಪಟ್ಟವರ ಸಂಖ್ಯೆ 57ಕ್ಕೆ ಏರಿದೆ. ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ 39 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 2316 ಜನರನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಸದ್ಯ 826 ಜನ ಆಸ್ಪತ್ರೆಯಲ್ಲಿ ಕ್ವಾರಂಟೈನಲ್ಲಿದ್ದಾರೆ. ಇದೂವರೆಗೆ 1165 ಕೋವಿಡ್ ಶಂಕಿತರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ದಾಖಲಾಗಿರುವವ ಪೈಕಿ 15 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ ಜಿಲ್ಲೆಯಲ್ಲಿ 14,954 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link