‘ವಾರ್ಡ್ ಸಮಿತಿ’: ಜನಕ್ಕಿಂತ, ಕಾರ್ಪೊರೇಟರ್‍ಗಳೇ ಮುಂದೆ!

ತುಮಕೂರು
    ತುಮಕೂರು ನಗರದ 35 ವಾರ್ಡ್‍ಗಳಲ್ಲೂ ಕಾನೂನಿನ ಪ್ರಕಾರ ‘ವಾರ್ಡ್ ಸಮಿತಿ’ ರಚಿಸುವ ಬಗ್ಗೆ ಪಾಲಿಕೆ ಕಚೇರಿಯಲ್ಲಿ ಪ್ರಕ್ರಿಯೆ ನಡೆದಿರುವ ಬೆನ್ನಲ್ಲೇ, ಸಾರ್ವಜನಿಕರಿಗಿಂತ ಆಯಾ ವಾರ್ಡ್‍ನ ಕಾರ್ಪೊರೇಟರ್‍ಗಳೇ ತಮ್ಮ ವಾರ್ಡ್‍ನ ‘ವಾರ್ಡ್ ಸಮಿತಿ’ಗೆ ಸಂಬಂಧಿಸಿದಂತೆ ಸದಸ್ಯತ್ವದ ಅರ್ಜಿಗಳನ್ನು ಜನರ ಪರವಾಗಿ ಸಲ್ಲಿಸುವಲ್ಲಿ ಮುಂದಿದ್ದಾರೆಂಬ ಕೌತುಕದ ಸಂಗತಿ ಬೆಳಕಿಗೆ ಬಂದಿದೆ. 
   ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಅಧಿನಿಯಮ 1976 ರ ಅಧ್ಯಾಯ- 3 ಎ ಅನ್ವಯ ಕಲಂ 13 ಎಚ್ ರಂತೆ ‘ವಾರ್ಡ್ ಸಮಿತಿ’ ರಚಿಸುವುದಾಗಿ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಜ.10 ರಂದು ಪ್ರಕಟಣೆ ಹೊರಡಿಸಿದ್ದರು. ಜ.17 ರಂದು ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದ್ದರು. ಅದರಂತೆ ಪಾಲಿಕೆ ಕಚೇರಿಯಲ್ಲಿ ನೀಡಿದ ನಿಗದಿತ ನಮೂನೆ ಸ್ವೀಕರಿಸಿರುವ ಸಾರ್ವಜನಿಕರು, ಅಂದಿನಿಂದ ಅರ್ಜಿಯನ್ನು ಪಾಲಿಕೆ ಕಚೇರಿಗೆ ಸಲ್ಲಿಸುತ್ತಿದ್ದು ಜ.16 ರ ಅಂತ್ಯದವರೆಗೆ ಒಟ್ಟು 188 ಅರ್ಜಿಗಳು ಸಂದಾಯವಾಗಿವೆ. 
   ಈ ಅರ್ಜಿಗಳ ಪೈಕಿ ಒಟ್ಟು 16 ವಾರ್ಡ್‍ಗಳ ಪಾಲಿಕೆ ಸದಸ್ಯರುಗಳಿಂದ ಒಟ್ಟು 167 ಅರ್ಜಿಗಳು ಸಂದಾಯವಾಗಿದ್ದರೆ, ಈ ಅವಧಿಯಲ್ಲಿ ಸಾರ್ವಜನಿಕರಿಂದ ಕೇವಲ 21 ಅರ್ಜಿಗಳು ಸಲ್ಲಿಸಲ್ಪಟ್ಟಿವೆಯೆಂಬುದು ಕುತೂಹಲಕ್ಕೆ ಕಾರಣವಾಗಿದೆ.ಅರ್ಜಿ ಸ್ವೀಕಾರಕ್ಕೆ ಕೊನೆಯ ದಿನವಾದ ಜ.17 ರಂದೂ ಪಾಲಿಕೆ ಕಚೇರಿಗೆ ಆಗಮಿಸಿ ಅರ್ಜಿ ನಮೂನೆ ಪಡೆದುಕೊಳ್ಳುವ ಮತ್ತು ನಿಗದಿತ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆ ನಡೆದಿತ್ತು. 
   ಈ ಮಧ್ಯೆ ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ ಅವರು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದು,  ‘ವಾರ್ಡ್ ಸಮಿತಿ’ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಲು ನೀಡಿರುವ ಕಾಲಾವಕಾಶವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದು, ಆಯುಕ್ತರ ತೀರ್ಮಾನ ಏನೆಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link