ತುಮಕೂರು
ಯಾವುದೇ ಮಾಹಿತಿ ನೀಡದೇ ಏಕಾಏಕಿ ಸಭೆ ಇದೆ ಎಂದು ಕರೆದರೆ ನಾವೇನು ಸುಮ್ಮನೇ ಕುಳಿತಿರುತ್ತೇವೆಯೇ. ನಮಗೂ ಹಲವಾರು ಕೆಲಸ ಕಾರ್ಯಗಳಿರುತ್ತವೆ. ಸಭೆ ಇದೆ ಎಂದಾಗ ಮೊದಲೇ ಮಾಹಿತಿ ನೀಡಬೇಕು ಎಂದು ಸ್ಮಾರ್ಟ್‍ಸಿಟಿಯ ಅಧ್ಯಕ್ಷರಾದ ಶಾಲಿನಿ ರಜನೀಶ್ ರವರಿಗೆ ಪಾಲಿಕೆ ಸದಸ್ಯರು ಘೇರಾವ್ ಹಾಕಿದ ಘಟನೆ ತುಮಕೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದಿದೆ.
ತುಮಕೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸಂಜೆ 4 ಗಂಟೆಗೆ ಸಭೆ ಹಾಗೂ ನಂತರ ವಾರ್ಡುವಾರು ಕಾಮಗಾರಿ ವೀಕ್ಷಣೆಗೆ ತೆರಳುವ ಯೋಜನೆ ರೂಪಿಸಲಾಗಿತ್ತು. ಆದರೆ ಈ ಬಗ್ಗೆ ಪಾಲಿಕೆ ಸದಸ್ಯರ ಗಮನಕ್ಕೆ ತಂದಿರಲಿಲ್ಲ. ಕೊನೆಯ ಘಳಿಗೆಯಲ್ಲಿ ಪಾಲಿಕೆ ಸದಸ್ಯರಿಗೆ ಮಾಹಿತಿ ಕೊಟ್ಟು ತಯಾರಾಗಿ ಬನ್ನಿ ಎಂದರೆ ಹೇಗೆ ಎಂದು ಕೆಲ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು.
ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿಯಿಂದ ಮಾಡಲಾಗಿದ್ದ ಡ್ರೋಣ್ ಸರ್ವೇಯ ಮಾಹಿತಿ ಕುರಿತಂತೆ ಪಾಲಿಕೆ ಪ್ರಭಾರ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸೇರಿದಂತೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಎಂಜಿನಿಯರ್‍ಗಳಿಗೆ ಮಾಹಿತಿ ನೀಡಲಾಗುತ್ತಿತ್ತು. ಇದರಲ್ಲಿ ಗುರುತಿಸಲಾದ ಕೆಲ ಖಾಲಿ ಸ್ಥಳಗಳಲ್ಲಿ ಸರ್ಕಾರಿ ಸ್ಥಳಗಳಾದರೆ ಅದನ್ನು ಸ್ವಚ್ಛ ಮಾಡಿಸಿ ಸರ್ಕಾರಿ ಸಂಸ್ಥೆಗಳಿಗೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಟೂಡಾ ಆಯುಕ್ತ ಯೋಗಾನಂದರಿಗೆ ತಿಳಿಸಿದರು.
ನಂತರ ರಸ್ತೆಗಳ ಬಗ್ಗೆ ಮಾಹಿತಿ ಪಡೆದ ಮುಖ್ಯ ಕಾರ್ಯದರ್ಶಿ ಯಾವ ರಸ್ತೆಗಳು ಯಾವ ಸ್ಥಿತಿಯಲ್ಲಿವೆ. ಅವುಗಳನ್ನು ಅಭಿವೃದ್ಧಿ ಮಾಡಲುವ ಕುರಿತಾಗಿ ಸ್ಮಾರ್ಟ್ ಸಿಟಿ ಎಂಜಿಯರುಗಳೊಂದಿಗೆ ಚರ್ಚೆ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಭಾಂಗಣಕ್ಕೆ ಭೇಟಿ ಕೊಟ್ಟ ಕೆಲ ಸದಸ್ಯರು, ಏಕಾಏಕಿ ಶಾಲಿನಿ ರಜನೀಶ್ ಮೇಲೆ ಆಕ್ರೋಶ ವ್ಯಕ್ತ ಪಡಿಸಿದರು.
ಪಾಲಿಕೆ ಸದಸ್ಯ ಕುಮಾರ್ ಗೌಡ ಮಾತನಾಡಿ, ಪಾಲಿಕೆ ಚುನಾವಣೆಯಲ್ಲಿ ಗೆದ್ದು ಒಂದು ವರ್ಷ ಪೂರ್ಣಗೊಂಡಿದೆ. ಆದರೆ ಇಲ್ಲಿಯವರೆಗೆ ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಬಗ್ಗೆ ಯಾವುದೇ ಮಾಹಿತಿ ನಮ್ಮಲ್ಲಿಲ್ಲ. ಕಳೆದ 5 ತಿಂಗಳ ಹಿಂದೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಲಾಗಿತ್ತು. ಇಲ್ಲಿಯವರೆಗೆ ಅದರ ಬಗ್ಗೆ ಯಾರು ಚಕಾರವೆತ್ತುತ್ತಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಸಾಕಷ್ಟು ಜನ ತೊಂದರೆಗಳನುಭವಿಸುತ್ತಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ. ಯಾರಿಗಾದರೂ ಹೆಚ್ಚು ಕಡಿಮೆ ಆದರೆ ಅದರ ಹೊಣೆ ಯಾರು ತೆಗೆದುಕೊಳ್ಳುತ್ತಾರೆ. ಪ್ರತಿ ನಿತ್ಯ ವಾರ್ಡ್‍ಗಳಲ್ಲಿ ಓಡಾಡುವವರು ನಾವು. ದಿನಪ್ರಂತಿ ಬೆಳಗ್ಗೆ ಸಾರ್ವಜನಿಕರು ನಮಗೆ ಪ್ರಶ್ನೆ ಮಾಡುತ್ತಾರೆ ನಾವು ಏನೆಂದು ಉತ್ತರ ಕೊಡಬೇಕು ಎಂದು ಶಾಲಿನಿ ರಜನೀಶ್‍ರಿಗೆ ಪ್ರಶ್ನೆ ಹಾಕಿದರು.
ಇದಕ್ಕೆ ಉತ್ತರಿಸಿದ ಶಾಲಿನಿ ರಜನೀಶ್‍ರವರು, ವಾರ್ಡ್ ವೀಕ್ಷಣೆ ಸಂಬಂಧಪಟ್ಟಂತೆ ಮಾಹಿತಿ ನೀಡಲು ಸೂಚನೆ ನೀಡಿದ್ದೆ. ಆದರೆ ಸಂವಹನ ಮಾಡುವಲ್ಲಿ ಸಮಸ್ಯೆ ಉಂಟಾಗಿದೆ. ನಾವು ಸಾರ್ಟ್ ಸಿಟಿ ಅಡಿಯಲ್ಲಿ ಕಾಮಗಾರಿ ಮಾಡಿಸುತ್ತಿರುವುದು ಸಾರ್ವಜನಿಕರ ಅನುಕೂಲಕ್ಕಾಗಿ. ಇದಕ್ಕೆ ಎಲ್ಲರ ಸಹಕಾರ ಬೇಕಾಗುತ್ತದೆ. ಸ್ಮಾರ್ಟ್ ಸಿಟಿಯ ಸಮಿತಿಯಲ್ಲಿ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಕೂಡ ಸದಸ್ಯರಿರುತ್ತಾರೆ. ಪ್ರತಿಯೊಂದನ್ನು ಅವರಿಗೆ ತಿಳಿಸುತ್ತೇವೆ ಎಂದರು.
15ನೇ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾಧನಿಯಾಕುಮಾರ್ ಮಾತನಾಡಿ, ಕಳೆದ ಭಾರಿ ಮಾಡಿದಂತಹ ಸಭೆಗಳಲ್ಲಿ ಪ್ರತೀ ವಾರ ವಾರ್ಡ್ ವಾರು ನಡೆದ ಕಾಮಗಾರಿಗಳ ಬಗ್ಗೆ ಆಯಾ ವಾರ್ಡಿನ ಪಾಲಿಕೆ ಸದಸ್ಯರಿಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಯಾರೊಬ್ಬರೂ ವರದಿ ನೀಡಿಲ್ಲ. ಇಲ್ಲಿಯವರೆಗೆ ವಾರ್ಡ್ ಸದಸ್ಯರು ಯಾರು ಎಂಬುದು ಕೂಡ ಅವರಿಗೆ ಗೊತ್ತಿಲ್ಲ ಎಂದರು. ಇದಕ್ಕೆ ಧನಿಗೂಡಿಸಿದ ಉಪ ಮೇಯರ್ ರೂಪಶ್ರೀ ಶೆಟ್ಟಾಳಯ್ಯ, ಇನ್ನು ಮುಂದೆ ನಾವು ಕೂಡ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಹಾಕಿಕೊಳ್ಳಬೇಕಿದೆ ಎಂದು ಕಿಡಿಕಾರಿದರು.
ಪಾಲಿಕೆ ಸದಸ್ಯ ನರಸಿಂಹರಾಜು ಮಾತನಾಡಿ, ರಸ್ತೆ ಕಾಮಗಾರಿಗಳನ್ನು ಮಾಡುವಾಗ ಆಯಾ ವಾರ್ಡ್ ವ್ಯಾಪ್ತಿಯ ಪಾಲಿಕೆ ಸದಸ್ಯರನ್ನು ಭೇಟಿ ಮಾಡಿದರೆ ಅಲ್ಲಿನ ನೈಜ ಸ್ಥಿತಿಯು ತಿಳಿಯುತ್ತದೆ. ಅದೇನು ಮಾಡದೇ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪಾಲಿಕೆ ಸದಸ್ಯರಿಗೆ ಮಾಹಿತಿಯೂ ಇರುವುದಿಲ್ಲ.
ಹೀಗೆ ಚಿಕ್ಕಪೇಟೆಯ ಗಾರ್ಡನ್ ರಸ್ತೆಯು ಇರುವುದೇ 15 ಅಡಿ ರಸ್ತೆ ಅದರಲ್ಲಿ ಇವರು ಸ್ಮಾರ್ಟ್ ಸಿಟಿ ಎಂದು ಹೇಳಿ ಚೇಂಬರ್‍ಗಳನ್ನು ತೆಗೆದು ಮಣ್ಣನ್ನು ರಸ್ತೆ ಮೇಲೆ ಗುಡ್ಡೆ ಹಾಕಿದರೆ ಜನ ಓಡಾಡುವುದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾಲಿನಿ ರಜನೀಶ್, ಈ ಸಮಸ್ಯೆ ಬಗ್ಗೆ ಅರಿವಾಗುತ್ತಿದ್ದಂತೆ ಈಗಾಗಲೇ ಸಣ್ಣಪುಟ್ಟ ರಸ್ತೆಗಳಲ್ಲಿ ಚೇಂಬರ್‍ಗಳನ್ನು ಮಾಡುವುದು ಬೇಡ. ಈಗಾಗಲೇ ತೆರೆದ ಚೇಂಬರ್‍ಗಳನ್ನು ಮುಚ್ಚಿ. ಕೇವಲ ಚರಂಡಿ ವ್ಯವಸ್ಥೆ ಮಾಡಿ ರಸ್ತೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಬೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಪಾಲಿಕೆ ಸದಸ್ಯರು, ಇತ್ತೀಚೆಗೆ ನಗರ ಶಾಸಕರು ನಡೆಸಿದ ಸಭೆಯಲ್ಲಿ ಚರ್ಚಿಸಿದಂತೆ ಬೆಸ್ಕಾಂ ಅಧಿಕಾರಿಗಳು ನಗರದಲ್ಲಿನ ವಿದ್ಯುತ್ ಪೋಲ್‍ಗಳನ್ನು ಪಾಲಿಕೆ ಸುಪರ್ದಿಗೆ ನೀಡಲಾಗುವುದಿಲ್ಲ ಎನ್ನುತ್ತಾರೆ. ಆದರೆ ಸ್ಮಾರ್ಟ್ ಸಿಟಿಯಿಂದ ಎಲ್‍ಇಡಿ ಬಲ್ಬ್‍ಗಳನ್ನು ಹಾಕುತ್ತೇವೆ ಎನ್ನುತ್ತಾರೆ, ಕೇವಲ ಬಲ್ಬ್‍ಗಳನ್ನು ಹಾಕಿದರೆ ಸಾಲುತ್ತದೆಯೇ? ಅದರ ನಿರ್ವಹಣೆ ಯಾರು ಮಾಡಬೇಕಿದೆ ಎಂದು ಪ್ರಶ್ನಿಸುತ್ತಿದ್ದಂತೆಯೇ ಬೆಸ್ಕಾಂನ ಮುಖ್ಯ ಇಂಜಿನಿಯರ್ ಮಾತನಾಡಿ ನಗರದಲ್ಲಿ ಯಾವುದೇ ಪೋಲ್‍ಗಳನ್ನು ತೆಗೆಯುವುದಿಲ್ಲ. ಬದಲಿಗೆ ಹಾಕಲಾಗುವ ವಿದ್ಯುತ್ ಬಲ್ಬ್‍ಗಳು ಸೌರಚಾಲಿತವಾಗಿರುತ್ತವೆ ಎಂದು ಉತ್ತರ ನೀಡಿದರು.
ಪಾಲಿಕೆ ಸದಸ್ಯ ಕುಮಾರ್‍ಗೌಡ ಮಾತನಾಡಿ, ಎಂಜಿ ರಸ್ತೆಯಲ್ಲಿನ ಕನ್ಸರ್‍ವೆನ್ಸಿಯನ್ನು ಕಳೆದ ಮೂರ್ನಾಲ್ಕು ವರ್ಷಗಳ ಮುಂಚೆ ಮಾಡಲಾಗಿತ್ತು. ಆದರೆ ಅದನ್ನು ಯಾರು ಬಳಕೆ ಮಾಡಿರಲಿಲ್ಲ. ಈಗ ಅದರ ಮೇಲೆ ಮತ್ತೆ ಸಿಸಿ ರಸ್ತೆ ಮಾಡಿ, ಬಣ್ಣ ಬಳಿದು ಸ್ಮಾರ್ಟ್ ಸಿಟಿ ಕಾಮಗಾರಿ ಎಂದು ಹೇಳಿದರೆ ಅದು ವ್ಯರ್ಥ ಖರ್ಚು ಅಲ್ಲವೇ ಎಂದು ಪ್ರಶ್ನಿಸಿದಾಗ, ಸಂಬಂಧಿಸಿದ ಎಂಜಿನಿಯರ್ ಮಾತನಾಡಿ ಕನ್ಸರ್‍ವೆನ್ಸಿಯಲ್ಲಿ ಹಳ್ಳಗಳ ಬಿದ್ದಿದ್ದವು. ಅದಕ್ಕಾಗಿ ಮತ್ತೆ ಮಾಡಲಾಗಿದೆ ಎಂದರು.
ಅಷ್ಟರಲ್ಲಿ ಪಾಲಿಕೆ ಸದಸ್ಯರು ಈಗ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅದರ ಸಂಪೂರ್ಣ ಮಾಹಿತಿ ಒದಗಿಸಬೇಕು. ಯಾವುದೇ ಸಭೆಗಳನ್ನು ಮಾಡುವ ಮುನ್ನ ಮೊದಲೇ ಮಾಹಿತಿ ತಿಳಿಸಬೇಕು ಎಂದು ಒತ್ತಾಯಿಸಿದಾಗ, ಶಾಲಿನಿ ರಜನೀಶ್ ಮಾತನಾಡಿ, ಕಾಮಗಾರಿಗಳ ಬಗೆಗಿನ ಪ್ರತಿಯೊಂದು ಮಾಹಿತಿಯನ್ನು ಕನ್ನಡದಲ್ಲಿ ತರ್ಜುಮೆ ಮಾಡಿ ಅದನ್ನು ಪಾಲಿಕೆ ಸದಸ್ಯರಿಗೆ ವಿತರಿಸಿ. ಅಲ್ಲದೆ ಈ ಸಂಬಂಧ ಇದೇ ತಿಂಗಳ 25 ಅಥವಾ 26ಕ್ಕೆ ಸಭೆ ಕರೆಯಲು ಪಾಲಿಕೆ ಪ್ರಭಾರ ಆಯುಕ್ತರಿಗೆ ಸೂಚಿಸಿದರು.
ಅಷ್ಟರಲ್ಲಿ ಗಿರಿಜಾಧನಿಯಾಕುಮಾರ್ ಅವರು ತುಮಕೂರು ವಿವಿಯಲ್ಲಿ ನಡೆದ ಕಾಮಗಾರಿಯ ಪರಿಸ್ಥಿತಿ ಹೇಗಿದೆ ನೋಡಿದಿರಾ. ಅದಕ್ಕೆ 60 ಲಕ್ಷ ಹಣ ಖರ್ಚು ಮಾಡಿ ಕಾಮಗಾರಿ ಮಾಡಲಾಗಿದೆ. ಇಂದು ಅಲ್ಲಿ ಯಾವುದೇ ಅವಶೇಷಗಳು ಕೂಡ ಸಿಗದಾಗಿದೆ ಎಂದಾಗ ಅದಕ್ಕೆ ಉತ್ತರಿಸಿದ ಮುಖ್ಯಕಾರ್ಯದರ್ಶಿಯವರು ಕಾಮಗಾರಿಗಳಿಂದ ಬೇಸರವಾಗಿದೆ. ಅದಕ್ಕಾಗಿಯೇ ಸೂಕ್ತ ಆದೇಶಗಳನ್ನು ನೀಡಿದ್ದೇನೆ ಎಂದರು.
ಕುಮಾರ್‍ಗೌಡ ಮಾತನಾಡಿ, ತುಮಕೂರು ನಗರದಲ್ಲಿ ಸಾವಿರಾರು ಕೋಟಿ ಖರ್ಚು ಮಾಡಿ ಕಾಮಗಾರಿ ಮಾಡಲಾಗುತ್ತಿದೆ. ವಾರ್ಡ್‍ಗೆ 10 ಕೋಟಿಯಂತೆ ಖರ್ಚು ಮಾಡಿದ್ದರೂ ಇಡೀ ತುಮಕೂರು ಸ್ಮಾರ್ಟ್ ಸಿಟಿಯಾಗುತ್ತಿತ್ತು. ಉಳಿದ ಹಣವನ್ನು ಇತರೆ ಕಾಮಗಾರಿಗಳಿಗೆ ಬಳಸಬಹುದಿತ್ತು. ಅಲ್ಲದೆ ಪ್ರತಿನಿತ್ಯ ಪತ್ರಿಕೆಯಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಯ ಲೋಪಗಳ ಬಗ್ಗೆ ಓದಿದರೆ ಬೇಸರವಾಗುತ್ತಿದೆ ಎಂದರು.
ಆಗ ಶಾಲಿನಿ ರಜನೀಶ್ ಈ ಹಿಂದೆ ಕಾಮಗಾರಿ ಪ್ರಾರಂಭ ಮಾಡುವ ಮುನ್ನವೇ ಪಾಲಿಕೆ ಆಯುಕ್ತರು ಹಾಗೂ ಟೂಡಾ ಆಯುಕ್ತರನ್ನು ಸಂಪರ್ಕಿಸಿದ ನಂತರವೇ ಕೆಲ ವಾರ್ಡ್‍ಗಳನ್ನು ಆಯ್ಕೆ ಮಾಡಿಕೊಂಡು ಕಾಮಗಾರಿ ಪ್ರಾರಂಭ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿಯ ಎಂಜಿನಿಯರ್ ಬಸವರಾಜುಗೌಡ, ಯೋಜನಾ ಮುಖ್ಯಸ್ಥ ಪವನ್‍ಕುಮಾರ್ ಸೈನಿ, ಪಾಲಿಕೆ ಪ್ರಭಾರ ಆಯುಕ್ತ ಸಿ.ಎಲ್.ಶಿವಕುಮಾರ್, ಟೂಡಾ ಆಯುಕ್ತ ಯೋಗಾನಂದ್, ಪಾಲಿಕೆ ಎಂಜಿನಿಯರ್ ಆಶಾ, ಪಾಲಿಕೆ ಸದಸ್ಯೆ ದೀಪಶ್ರೀ ಮಹೇಶ್ ಸೇರಿದಂತೆ ಪಾಲಿಕೆ ವಿವಿಧ ವಿಭಾಗದ ಎಂಜಿನಿಯರ್‍ಗಳು, ಸ್ಮಾರ್ಟ್ ಸಿಟಿ ಎಂಜಿನಿಯರ್‍ಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ