ದಾವಣಗೆರೆ:
ನಗರದ ಅರಳಿ ಮರದ ವೃತ್ತದಿಂದ ಜಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ರಸ್ತೆ ಪೂರ್ಣಗೊಂಡನಂತರ ಲಿಂಕ್ ಮಾಡದ ಕಾರಣ ರಸ್ತೆ ನಿರ್ಮಾಣಕ್ಕೆ ಬಳಸಿದ್ದ ಕಬ್ಬಿಣದ ಕಂಬಿಗಳು ರಸ್ತೆಯಿಂದ ಹೊರ ಚಾಚಿಕೊಂಡು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರಿಕೆಯು ಸೆ.9ರ ಸಂಚಿಕೆಯಲ್ಲಿ “ರಸ್ತೆಯಿಂದ ಹೊರ ಚಾಚಿರುವ ಕಬ್ಬಿಣದ ಕಂಬಿಗಳು, ವಾಹನ ಸವಾರರಿಗೆ ಕಿರಿಕಿರಿ ಯಮಪುರಿಗೆ ದಾರಿ” ಎಂಬ ತಲೆ ಬರಹದಡಿಯಲ್ಲಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು.
ಈ ವರದಿಯಿಂದ ಎಚ್ಚೆತ್ತ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ರಸ್ತೆಯಲ್ಲಿ ಹೊರ ಚಾಚಿದ್ದ ಕಂಬಿಗಳನ್ನು ಮುಚ್ಚಲು ರಸ್ತೆಗೆ ಲಿಂಕ್ ಕಲ್ಪಿಸುವ ಜಾಗದಲ್ಲಿ ಮಣ್ಣು ಹಾಕಿ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದು ಪ್ರಜಾಪ್ರಗತಿಯ ಫಲಶೃತಿಯಾಗಿದೆ.
ಆದರೆ, ಮಣ್ಣು ಹಾಕಿ ತಾತ್ಕಾಲಿಕ ಸಮಸ್ಯೆಯನ್ನು ಬಗೆಹರಿಸಿರುವುದು ಕೇವಲ ತೇಪೆ ಹಚ್ಚುವ ಕೆಲಸವಾಗಿದೆ. ಹೀಗಾಗಿ ಜೋರು ಮಳೆಬಂದು ಮಣ್ಣು ಕಿತ್ತುಕೊಂಡು ಹೋಗಿ, ಮತ್ತೂ ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಆದ್ದರಿಂದ ಇಲ್ಲಿ ಶಾಶ್ವತವಾಗಿ ಕಾಮಗಾರಿ ಮಾಡಿಸುವ ಮೂಲಕ ರಸ್ತೆಗೆ ಲಿಂಕ್ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ರೋಹಿತ್ ಜೈನ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
