ಕರ್ತವ್ಯ ಲೋಪ ಹಿನ್ನೆಲೆ : ಪಾಲಿಕೆಯ ಇ.ಇ. ಸಸ್ಪೆಂಡ್..!

ತುಮಕೂರು
    ತುಮಕೂರು ಮಹಾನಗರ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ಬಿ.ತಿಪ್ಪೇರುದ್ರಪ್ಪ ಅವರನ್ನು “ಕರ್ತವ್ಯದಲ್ಲಿ ಬೇಜವ್ದಾರಿಯಿಂದ ವರ್ತಿಸಿರುವ” ಕಾರಣಕ್ಕಾಗಿ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿರುವ ಅಪರೂಪದ ಬೆಳವಣಿಗೆಯೊಂದು ನಡೆದಿದೆ.
   “ಬಿ.ತಿಪ್ಪೇರುದ್ರಪ್ಪ ಇವರು ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬರುವ ಕಾರಣ, ಇವರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳುವುದನ್ನು ಬಾಕಿ ಇರಿಸಿ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಲು ಸರ್ಕಾರವು ತೀರ್ಮಾನಿಸಿದೆ” ಎಂದು ಸೆ.5 ರಂದು ಹೊರಡಿಸಿರುವ “ಸರ್ಕಾರದ ಆದೇಶ” (ಸಂಖ್ಯೆ: ನಅಇ-07-ತುಮಪಾ-2019 (ಇ), ದಿನಾಂಕ 05-09-2019)ದಲ್ಲಿ ತಿಳಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ವೆಂಕಟೇಶ್ ಅವರು ಇದಕ್ಕೆ ಸಹಿ ಹಾಕಿದ್ದಾರೆ.
ಬೇಜವಾಬ್ದಾರಿ ಉತ್ತರ ಹಿನ್ನೆಲೆ
    ಸರ್ಕಾರದ ಆದೇಶದಲ್ಲಿರುವ ಪ್ರಕಾರ, ಆಗಸ್ಟ್ 13 ರಂದು ತುಮಕೂರಿನಲ್ಲಿ ಸ್ಮಾರ್ಟ್‍ಸಿಟಿ ಕಂಪನಿ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಕಂಪನಿಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಅಂದು ಅವರು ನಗರದಲ್ಲಿ ಸಂಚರಿಸುವಾಗ ರಸ್ತೆ ಬದಿ ಮಣ್ಣಿನ ರಾಶಿ, ರಾಜಕಾಲುವೆ ಅವ್ಯವಸ್ಥೆ, ತೆರೆದ ಚರಂಡಿಗಳ ಅಸಮರ್ಪಕ ನಿರ್ವಹಣೆ ಇತ್ಯಾದಿಗಳ ಬಗ್ಗೆ ಚಿತ್ರಗಳನ್ನು ಸೆರೆಹಿಡಿದು ಸಭೆಯಲ್ಲಿ ಪ್ರದರ್ಶಿಸಿ ಪ್ರಶ್ನಿಸಿದ್ದರು.
 
    ಆಗ ಎಕ್ಸಿಕ್ಯುಟೀವ್ ಇಂಜಿನಿಯರ್ ಬಿ.ತಿಪ್ಪೇರುದ್ರಪ್ಪ ಅವರು ಬೇಜವಾಬ್ದಾರಿಯಿಂದ ಉತ್ತರಿಸಿ, ಇದು ತಮಗೆ ಸಂಬಂ`Àವೇ ಇಲ್ಲವೆಂಬಂತೆ ನಡೆದುಕೊಂಡ ಕಾರಣ, ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ವರದಿ ಸಲ್ಲಿಸಲು ಶಾಲಿನಿ ರಜನೀಶ್ ಅವರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಸದರಿ ಅಧಿಕಾರಿಯು ಗ್ರೂಪ್ -ಎ ವೃಂದದ ಅಧಿಕಾರಿಯಾಗಿರು ವುದರಿಂದ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸರ್ಕಾರವು ಸಕ್ಷಮ ಪ್ರಾಧಿಕಾರವಾಗಿರುತ್ತ ದೆಂದು ಮತ್ತು ಈಗಾಗಲೇ ಈ ಅಧಿಕಾರಿಗೆ ದಿ. 13-06-2019 ರಂದು ನೋಟೀಸ್ ಜಾರಿ ಮಾಡಿರುವುದನ್ನು ಗಮನಕ್ಕೆ ತಂದರು ಎಂದು ವಿವರಿಸಲಾಗಿದೆ.
    ಬಿ.ತಿಪ್ಪೇರುದ್ರಪ್ಪ ಅವರು ಪಾಲಿಕೆಯಲ್ಲಿ ಸುಮಾರು 3 ವರ್ಷಗಳಿಂದ ಕಾರ್ಯಪಾಲಕ ಅಭಿಯಂತರ ಹುದ್ದೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಅಧೀಕ್ಷಕ ಅಭಿಯಂತರರ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿದ್ದು, ಇವರಿಂದ ಯಾವುದೇ ರೀತಿ ತುಮಕೂರು ನಗರದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಉಪಯೋಗವಾಗಿರುವುದಿಲ್ಲವೆಂದು, ಪಾಲಿಕೆಯ ವತಿಯಿಂದ ಕಾರಣ ಕೇಳಿ ನೋಟೀಸ್‍ನ್ನು ಜಾರಿ ಮಾಡಿದರೂ, ಇವರ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲವೆಂದು ಶಾಲಿನಿ ರಜನೀಶ್ ಅವರು ಪತ್ರ ಬರೆದಿದ್ದು, ಇವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸುವಂತೆ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮ ಜರುಗಿಸಿದೆಯೆಂದೂ ತಿಳಿಸಲಾಗಿದೆ.
ತಲ್ಲಣಗೊಂಡಿರುವ ನೌಕರರು
   ಪಾಲಿಕೆಯಲ್ಲಿ ಉನ್ನತ ಹುದ್ದೆಯಲ್ಲಿರುವವರು ಅಮಾನತು ಆಗಿರುವ ಮೊದಲನೇ ಪ್ರಕರಣ ಇದಾಗಿದ್ದು, ಈ ಪ್ರಕರಣವು ಪಾಲಿಕೆಯ ಅಧಿಕಾರಿ-ನೌಕರ ಸಿಬ್ಬಂದಿಯನ್ನು ತಲ್ಲಣಗೊಳಿಸಿದೆ. ಪಾಲಿಕೆಯ ಒಳಗೆ ಮತ್ತು ಹೊರಗೆ ಚರ್ಚೆಗೆ ಗ್ರಾಸವಾಗಿದೆ.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link