ತುಮಕೂರು
ತುಮಕೂರು ನಗರದ ವಿವಿಧ ಸ್ಮಶಾನಗಳ ಹಾಗೂ ವಿದ್ಯುತ್ ಚಿತಾಗಾರದ ಅಭಿವೃದ್ಧಿ ಕಾಮಗಾರಿಗಳಿಗಾಗಿ ತುಮಕೂರು ಮಹಾನಗರ ಪಾಲಿಕೆಯು 2019-20 ನೇ ಸಾಲಿನ 14 ನೇ ಹಣಕಾಸು ಜನರಲ್ ಬೇಸಿಕ್ ಅನುದಾನದಲ್ಲಿ ಒಟ್ಟು 23.15 ಲಕ್ಷ ರೂ.ಗಳ ವೆಚ್ಚಕ್ಕೆ ಕ್ರಿಯಾಯೋಜನೆ ರೂಪಿಸಿದೆ.
ತುಮಕೂರು ಮಹಾನಗರ ಪಾಲಿಕೆಯ ನಗರಯೋಜನಾ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳ ಕೆ.ಎಸ್.ಆದರ್ಶ್ (ಬಿಜೆಪಿ) ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿರುವ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ್ದು, ಇದಕ್ಕೆ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಸಮ್ಮತಿ ದೊರೆತಿದೆ.
ಈ ಕ್ರಿಯಾ ಯೋಜನೆಯ ಪ್ರಕಾರ ತುಮಕೂರು ನಗರದ 9 ನೇ ವಾರ್ಡ್ನ ರಿಂಗ್ ರಸ್ತೆಯ ಗುಜರಿ ಅಂಗಡಿ ಹತ್ತಿರದ ಸ್ಮಶಾನಕ್ಕೆ 5 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ, ನಗರದ 29 ನೇ ವಾರ್ಡ್ನ ಗೆದ್ದಲಹಳ್ಳಿಯ ಸಾರ್ವಜನಿಕ ಸ್ಮಶಾನದಲ್ಲಿ 2.15 ಲಕ್ಷ ರೂ. ವೆಚ್ಚದಲ್ಲಿ ಉಳಿಕೆ ಕಾಂಪೌಂಡ್ ನಿರ್ಮಾಣ, ನಗರದ 30 ನೇ ವಾರ್ಡ್ನ ವಿಜಯನಗರದ 2 ನೇ ಕ್ರಾಸ್ನ ಕ್ರಿಶ್ಚಿಯನ್ ಸ್ಮಶಾನದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ಮತ್ತು ಡೆಕ್ಸ್ಲಾಬ್ ನಿರ್ಮಾಣ ಹಾಗೂ ನಗರದ ಗಾರ್ಡನ್ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ 11 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಕಚೇರಿ ನಿರ್ವಹಣೆಗೆ 16 ಲಕ್ಷ
ಇನ್ನು ಪಾಲಿಕೆ ಕಚೇರಿಯ ನಿರ್ವಹಣೆಗಾಗಿ 16 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ. ಈ ಮೊತ್ತದಲ್ಲಿ ಪಾಲಿಕೆ ಕಚೇರಿ, ಎ.ಡಿ.ಬಿ. ಕಟ್ಟಡದ ದುರಸ್ತಿ ಹಾಗೂ ಪಾಲಿಕೆ ಕಚೇರಿಯಲ್ಲಿ ಅಧಿಕ ವಿದ್ಯುತ್ ಲೋಡ್ನಿಂದ ಹಾಳಾಗಿರುವ ವೈರ್ಗಳನ್ನು ಬದಲಿಸಿ ಹೊಸ ವೈರ್ ಅಳವಡಿಸಲು ಉದ್ದೇಶಿಸಲಾಗಿದೆ. ಜೊತೆಗೆ ಪಾಲಿಕೆ ಸಭಾಂಗಣದಲ್ಲಿ ಹೊಸ ಮೈಕ್ಸೆಟ್, ಸ್ಪೀಕರ್ಗಳ ಅಳವಡಿಕೆ, ಕಚೇರಿಯ ಎಲ್ಲ ಶಾಖೆಗಳಲ್ಲೂ ಹಳೆಯ ಯು.ಪಿ.ಎಸ್. ಬ್ಯಾಟರಿಯನ್ನು ಬದಲಿಸಿ ಹೊಸದನ್ನು ಅಳವಡಿಸಲು, ಕಚೇರಿಗೆ ನಾಮÀಲಕ ಹಾಕಲು, ಹಳೆಯ ಏರ್ಕಂಡೀಷನ್ (ಎಸಿ) ಗಳನ್ನು ಬದಲಿಸಿ ಹೊಸ ಎ.ಸಿ. ಉಪಕರಣ ಅಳವಡಿಸಲು, ಕಚೇರಿ ಆವರಣದ ಟ್ರಾನ್ಸ್ ಫಾರ್ಮರ್ ಮತ್ತು ಡೀಸೆಲ್ ಜನರೇಟರ್ ಸರ್ವೀಸ್ ಮಾಡುವ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಶೌಚಾಲಯಗಳ ನಿರ್ವಹಣೆ
ಪಾಲಿಕೆ ವ್ಯಾಪ್ತಿಯ ಸಾಮೂಹಿಕ/ಸಾರ್ವಜನಿಕ ಶೌಚಾಲಯ ನಿರ್ವಹಣೆ ಇತ್ಯಾದಿಗೆ 78.30 ಲಕ್ಷ ರೂ.ಗಳ ಕ್ರಿಯಾಯೋಜನೆ ರೂಪಿಸಿದ್ದು, ಇದಕ್ಕೂ ಅನುಮೋದನೆ ನೀಡಲಾಗಿದೆ.
ಇದರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯಗಳ ವಾರ್ಷಿಕ ನಿರ್ವಹಣೆಗೆ 42 ಲಕ್ಷ ರೂ., 10 ನೇ ವಾರ್ಡ್ನಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ 8 ಲಕ್ಷ ರೂ., 1 ನೇ ವಾರ್ಡ್ನ ಪಂಚನಾಥರಾಯನ ಪಾಳ್ಯದ ಡಬ್ಲೂೃಡಿಪಿ, ಪಿಟಿಪಿ ಮತ್ತು ವಿದ್ಯಾನಗರದ ಪಂಪ್ ಹೌಸ್ನಲ್ಲಿ ಶೌಚಾಲಯ ನಿರ್ಮಾಣಕ್ಕೆ 13 ಲಕ್ಷ ರೂ., ನಗರದ ಗಾರ್ಡ್ನ್ ರಸ್ತೆಯ ವಿದ್ಯುತ್ ಚಿತಾಗಾರದಲ್ಲಿ ಶೌಚಾಲಯ ನಿರ್ಮಾಣಕ್ಕೆ 6.30 ಲಕ್ಷ ರೂ., 21ನೇ ವಾರ್ಡ್ನ ಬೆಳಗುಂಬ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 9 ಲಕ್ಷ ರೂ. ವೆಚ್ಚವನ್ನು ಅಂದಾಜಿಸಲಾಗಿದೆ.